ಬೇನಾಮಿ ವ್ಯವಹಾರ ಪ್ರಕರಣ ನಿರ್ವಹಣೆಗೆ ವಿಶೇಷ ನ್ಯಾಯಾಲಯ

Update: 2018-10-21 13:36 GMT

ದಿಲ್ಲಿ, ಅ.21: ಬೇನಾಮಿ ವ್ಯವಹಾರ ಕಾಯ್ದೆಯಡಿ ದಾಖಲಾಗಿರುವ ಅಪರಾಧ ಪ್ರಕರಣಗಳ ವಿಚಾರಣೆ ನಡೆಸಲು 34 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ನ್ಯಾಯಾಲಯಗಳಾಗಿ ಕಾರ್ಯ ನಿರ್ವಹಿಸುವ ಸೆಷನ್ಸ್ ಕೋರ್ಟ್‌ಗಳ ಬಗ್ಗೆ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದೆ.

ಆಯಾ ರಾಜ್ಯಗಳ ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರೊಂದಿಗೆ ಚರ್ಚಿಸಿದ ಬಳಿಕ 1988ರ ಬೇನಾಮಿ ಆಸ್ತಿ ವ್ಯವಹಾರ ನಿಷೇಧ ಕಾಯ್ದೆಯ ಪ್ರಕಾರ ಈ ವಿಶೇಷ ನ್ಯಾಯಾಲಯಗಳ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ವಿತ್ತ ಸಚಿವಾಲಯದ ಪ್ರಕಟಣೆ ತಿಳಿಸಿದೆ. ದಿಲ್ಲಿಯ ರಾಷ್ಟ್ರೀಯ ರಾಜಧಾನಿ ವ್ಯಾಪ್ತಿಯಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಕೋರ್ಟ್ 02 ಅನ್ನು ವಿಶೇಷ ನ್ಯಾಯಾಲಯವೆಂದು ನಿಯೋಜಿಸಲಾಗಿದೆ. ಪ್ರತಿಯೊಂದು ವಿಚಾರಣೆಯನ್ನು ಗರಿಷ್ಟ ತೀವ್ರಗತಿಯಲ್ಲಿ ನಡೆಸಬೇಕು ಹಾಗೂ ವಿಚಾರಣೆ ದೂರು ದಾಖಲಾದ ಆರು ತಿಂಗಳೊಳಗೆ ಪೂರ್ಣಗೊಳಿಸಲು ಪ್ರಯತ್ನಿಸಬೇಕೆಂದು ಕಾನೂನಿನಲ್ಲಿ ತಿಳಿಸಲಾಗಿದೆ.

ಸುಳ್ಳು ಹೆಸರಿನಲ್ಲಿ ನಡೆಸುವ ವ್ಯವಹಾರ ಅಥವಾ ಹಣ ಪಾವತಿಸುವ ವ್ಯಕ್ತಿಯನ್ನು ಪತ್ತೆಹಚ್ಚುವುದು ಅಸಾಧ್ಯವಾಗಿರುವ ವ್ಯವಹಾರಗಳನ್ನು ಬೇನಾಮಿ ವ್ಯವಹಾರ ಎಂದು ಕರೆಯಲಾಗುತ್ತದೆ. ಕಪ್ಪು ಹಣದ ಹಾವಳಿಯ ನಿಗ್ರಹಕ್ಕೆ 2016ರ ಆಗಸ್ಟ್‌ನಲ್ಲಿ ಬೇನಾಮಿ ವ್ಯವಹಾರ (ನಿರ್ಬಂಧ)ಕಾಯ್ದೆಯನ್ನು ಅಂಗೀಕರಿಸಲಾಗಿದೆ. ಈ ಕಾಯ್ದೆ ಜಾರಿಗೆ ಬಂದ ಬಳಿಕ 1988ರ ಬೇನಾಮಿ ವ್ಯವಹಾರ (ನಿರ್ಬಂಧ) ಕಾಯ್ದೆಗೆ ಬೇನಾಮಿ ಆಸ್ತಿ ವ್ಯವಹಾರ ನಿಷೇಧ ಕಾಯ್ದೆ 1988 ಎಂದು ಹೆಸರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News