ಪಶ್ಚಿಮಬಂಗಾಳದಲ್ಲಿ ಮತ್ತೊಂದು ನಿರ್ಭಯಾ ಪ್ರಕರಣ: ಸಂಬಂಧಿ ಮಹಿಳೆ ಮೇಲೆಯೇ ಅತ್ಯಾಚಾರ ಎಸಗಿ ಕ್ರೌರ್ಯ ಮೆರೆದ ರಕ್ಕಸರು !

Update: 2018-10-21 19:24 GMT

 ಜಲ್‌ಪಾಯ್‌ಗುರಿ, ಅ. 21: ಭೂವಿವಾದಕ್ಕೆ ಸಂಬಂಧಿಸಿ ಮಹಿಳೆಯೋರ್ವಳ ಮೇಲೆ ಸಂಬಂಧಿಗಳೇ ಅತ್ಯಾಚಾರ ಎಸಗಿ, ಆಕೆಯ ಗುಪ್ತಾಂಗಕ್ಕೆ ಸರಳು ತೂರಿಸಿದ ಅಮಾನವೀಯ ಘಟನೆ ಪಶ್ಚಿಮಬಂಗಾಳದ ಜಲ್‌ಪೈಗುರಿಯಲ್ಲಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯನ್ನು ಜಲ್‌ಪೈಗುರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ನೆನಪಿಸಿದೆ.

ಧೂಪ್‌ಗುರಿ ಪೊಲೀಸ್ ಠಾಣಾ ಪ್ರದೇಶದ ಅಡಿಯಲ್ಲಿ ಬರುವ ನಿರಂಜನ್ ಪತ್ ಪ್ರದೇಶದಲ್ಲಿ ಮಹಿಳೆಯ ಮನೆಯ ಸಮೀಪ ಶನಿವಾರ ಆಕೆಯ ಸಂಬಂಧಿಕರೇ ಅತ್ಯಾಚಾರ ಎಸಗಿದ್ದಾರೆ.

ಭೂವಿವಾದ ಪರಿಹರಿಸುವುದಾಗಿ ಮಹಿಳೆಯನ್ನು ಮನೆಯಿಂದ ಹೊರಗೆ ಕರೆದ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದರು ಹಾಗೂ ಆಕೆಯ ಗುಪ್ತಾಂಗಕ್ಕೆ ಸರಳು ತೂರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

 ಅಸ್ವಸ್ಥಳಾಗಿ ಬಿದ್ದಿದ್ದ ಮಹಿಳೆಯನ್ನು ರಿಕ್ಷಾ ಎಳೆಯುವವನೋರ್ವ ಮನೆಗೆ ತಲುಪಿಸಿದ. ಕುಟುಂಬದವರು ಆಕೆಯನ್ನು ರವಿವಾರ ಬೆಳಗ್ಗೆ ಧೂಪ್‌ಗುರಿ ಆಸ್ಪತ್ರೆಯಲ್ಲಿ ದಾಖಲಿಸಿದರು. ಅನಂತರ ಆಕೆಯನ್ನು ಜಲ್‌ಪೈಗುರಿ ಸದಾರ್ ಆಸ್ಪತ್ರೆಗೆ ವರ್ಗಾಯಿಸಲಾಯಿತು.

ಘಟನೆ ನಡೆಯುವ ಸಂದರ್ಭ ಮಹಿಳೆಯ ಪತಿ ಮನೆಯಲ್ಲಿ ಇರಲಿಲ್ಲ. ಅತ್ಯಾಚಾರ ಎಸಗಿದ ಸಂಬಂಧಿಕರು ಹಾಗೂ ಅವರು ಸಹವರ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News