ಬೆಂಗಳೂರು: ಮುಸ್ಲಿಮ್ ಎಂಬ ಕಾರಣಕ್ಕೆ ಮಹಿಳೆಗೆ ಬಾಡಿಗೆಮನೆ ನಿರಾಕರಣೆ

Update: 2018-10-22 03:58 GMT

ಬೆಂಗಳೂರು, ಅ.22: ನಗರದ ಇಬ್ಬರು ಮನೆ ಮಾಲಕರು ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುತ್ತಿದ್ದು, "ನಾನು ಮುಸ್ಲಿಮ್ ಎಂಬ ಕಾರಣಕ್ಕೆ ನಮ್ಮ ಕುಟುಂಬಕ್ಕೆ ಮನೆ ಬಾಡಿಗೆಗೆ ನೀಡಲು ನಿರಾಕರಿಸಿದ್ದಾರೆ" ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ಸ್ವಯಂಸೇವಾ ಸಂಸ್ಥೆಯೊಂದರ ಸಹ ಸಂಸ್ಥಾಪಕಿಯಾಗಿರುವ ಹೀನಾ ರಹ್ಮಾನ್ (ಹೆಸರು ಬದಲಿಸಲಾಗಿದೆ) ಎಂಬ ಮಹಿಳೆ ಈ ಸಂಬಂಧ ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವು ಮಂದಿ ಮಹಿಳೆಯನ್ನು ಬೆಂಬಲಿಸಿದ್ದು, ಮಾಲಕರ ಕ್ರಮವನ್ನು ಟೀಕಿಸಿದ್ದಾರೆ.

ಬಾಡಿಗೆ ಮನೆಯ ಮಾಹಿತಿ ನೀಡುವ ನೆಸ್ಟ್‌ವೇ ಎಂಬ ಆನ್‌ಲೈನ್ ಪೋರ್ಟೆಲ್‌ನಲ್ಲಿ ಮಹಿಳೆ ತಮ್ಮ ಕುಟುಂಬದ ಅಗತ್ಯತೆಗೆ ಸರಿಹೊಂದುವ ಎರಡು ಮನೆಗಳನ್ನು ಗುರುತಿಸಿದರು. ಬಳಿಕ ಮಾಲಕರನ್ನು ಸಂಪರ್ಕಿಸಿದರು. ಆದರೆ ತಾನು ಮುಸ್ಲಿಮ್ ಎಂಬ ಕಾರಣಕ್ಕೆ ಮನೆ ನೀಡಲು ಅವರು ನಿರಾಕರಿಸಿದರು ಎಂದು ಮಹಿಳೆ ದೂರಿದ್ದಾರೆ.

"ನಾನು ಮುಸ್ಲಿಮ್ ಎಂಬ ಕಾರಣಕ್ಕೆ ಎರಡು ಮನೆಗಳನ್ನು ನನಗೆ ಬಾಡಿಗೆಗೆ ನೀಡಲು ನಿರಾಕರಿಸಿದರು. ಧರ್ಮಾಂಧ ಮತ್ತು ವಿವೇಚನಾರಹಿತ ಹಿಂದೂ ಮನೆ ಮಾಲಕರು ನನ್ನ ಜತೆ ಮಾತನಾಡದೇ ಈ ನಿರ್ಧಾರ ಕೈಗೊಂಡರು. ನೆಸ್ಟ್‌ವೇ ಹೋಮ್ಸ್- ನೀವು ಹಿಂದೆ ಹೋಮ್ಸ್‌ ದಟ್-ಡೋಂಟ್‌ ಡಿಸ್ಕ್ರಿಮಿನೇಟ್ ಅಭಿಯಾನ ಮಾಡಿದ್ದಿರಿ. ಬಹುಶಃ ಅದು ಗಿಮಿಕ್ ಎನಿಸುತ್ತದೆ" ಎಂದು ಮಹಿಳೆ ಟ್ವೀಟ್ ಮಾಡಿದ್ದಾರೆ.

"ನಿಮ್ಮ ಬ್ರಾಂಡ್‌ನ ತತ್ವಕ್ಕೆ ವಿರುದ್ಧವಾದ ಇಂಥ ಮನೆಗಳನ್ನು ನೀವೇಕೆ ಪಟ್ಟಿಯಲ್ಲಿ ಸೇರಿಸುತ್ತೀರಿ? ಕನಿಷ್ಠ ನಿಮ್ಮ ಗ್ರಾಹಕರಿಗೆ ನಿಷ್ಠರಾಗಿರಿ. ತಾರತಮ್ಯ ವಿರುದ್ಧ ಅಭಿಯಾನ ಆರಂಭಿಸಲು ನೀವು ತೋರಿದ ಧೈರ್ಯವನ್ನು ನಾನು ಶ್ಲಾಘಿಸುತ್ತೇನೆ" ಎಂದು ನೆಸ್ಟ್‌ವೇ ಕುರಿತು ಹೇಳಿದ್ದಾರೆ.

ನನ್ನದೇ ದೇಶದಲ್ಲಿ ನನಗೆ ಬಾಡಿಗೆ ಮನೆ ಸಿಗುತ್ತಿಲ್ಲ ಎನ್ನುವುದು ವಿಪರ್ಯಾಸ. ಹೆಚ್ಚು ಮಂದಿ ಹಿಂದೂ ಸ್ನೇಹಿತರು ಈ ಸಂವಾದದಲ್ಲಿ ತೊಡಗಿಸಿಕೊಳ್ಳುವಂತೆ ನಾನು ಆಹ್ವಾನಿಸುತ್ತೇನೆ. ನಿಮ್ಮ ದೃಷ್ಟಿಕೋನವನ್ನು ತಿಳಿದುಕೊಳ್ಳಲು ನಾನು ಉತ್ಸುಕಳಾಗಿದ್ದೇನೆ ಎಂದು ವಿವರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಮಂದಿ ಮನೆ ಮಾಲಕರನ್ನು ಟೀಕಿಸಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಸ್ಟ್‌ವೇಯನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News