ಬಿಬಿಎಂಪಿ ವ್ಯಾಪ್ತಿಯಲ್ಲಿ 628 ಗುಂಡಿಗಳು ಮಾತ್ರ ಬಾಕಿ ಉಳಿದಿವೆ: ಮೇಯರ್ ಗಂಗಾಂಬಿಕೆ

Update: 2018-10-22 16:46 GMT

ಬೆಂಗಳೂರು, ಅ. 22: ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಪ್ರತಿದಿನ ನಡೆಯುತ್ತಿದ್ದು, ಇನ್ನು 628 ಗುಂಡಿಗಳು ಮಾತ್ರ ಬಾಕಿ ಉಳಿಸಿದೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ

ಸೋಮವಾರ ನಗರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಶೀಘ್ರ ಎಲ್ಲಾ ಗುಂಡಿಗಳನ್ನು ಮುಚ್ಚಲು ತಿಳಿಸಲಾಗಿದೆ. ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇನೆ. ಪರಿಶೀಲನೆಯಲ್ಲಿ ಕಳಪೆ ಕಾಮಗಾರಿ ಬಗ್ಗೆ ತಿಳಿದು ಬಂದರೆ ಮರು ಡಾಂಬರೀಕರಣ ಮಾಡಲಾಗುವುದು ಎಂದರು.

ಸಮನ್ವಯತೆಯಿಂದ ಕೆಲಸ ಮಾಡಲು ಸೂಚನೆ: ರಸ್ತೆಗುಂಡಿಗಳನ್ನು ತಡೆಯುವ ನಿಟ್ಟಿನಲ್ಲಿ ವೈಟ್‌ಟಾಪಿಂಗ್ ಮಾಡಲು ನಿರ್ಧರಿಸಲಾಗಿದೆ. ವೈಟ್‌ಟಾಪಿಂಗ್ ಮಾಡಿದರೆ, ರಸ್ತೆಯಲ್ಲಿ ಗುಂಡಿಗಳು ಬೀಳುವುದಿಲ್ಲ. ಬಿಡ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ, ಬಿಬಿಎಂಪಿ ಇಂಜಿನಿಯರ್‌ಗಳು ಸಮನ್ವಯತೆಯಿಂದ ಕೆಲಸ ಮಾಡಲು ತಿಳಿಸಿದ್ದೇನೆ. ನೀರು ಸರಬರಾಜು, ಒಳಚರಂಡಿ ಸೇರಿದಂತೆ ಇನ್ನಿತರೆ ಕೆಲಸಗಳು ಮುಗಿದ ನಂತರ ಡಾಂಬರೀಕರಣ ಮಾಡಲು ತಿಳಿಸಲಾಗಿದೆ ಎಂದರು.

ಡಾಂಬರೀಕರಣಕ್ಕೆ ಸೂಚನೆ: ರಾಜರಾಜೇಶ್ವರಿನಗರ ಗೇಟ್‌ನಿಂದ ನಾಯಂಡಹಳ್ಳಿವರೆಗೆ ರಸ್ತೆ ಸಂಪೂರ್ಣ ಹಾಳಾಗಿದ್ದರೂ, ಬಿಬಿಎಂಪಿ ಸುಮ್ಮನಿರುವುದೇಕೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮೇಯರ್, ರಸ್ತೆ ದುರಸ್ತಿ ಬಗ್ಗೆ ಅಧಿಕಾರಿಗಳಿಂದ ತಿಳಿದುಕೊಂಡಿದ್ದೇನೆ. ಶೀಘ್ರ ಡಾಂಬರೀಕರಣ ಮಾಡಲು ಸೂಚಿಸಲಾಗಿದೆ. ಒಳಚರಂಡಿ ಪೈಪುಗಳ ಸೋರಿಕೆಯಿಂದ ರಸ್ತೆಯಲ್ಲಿ ಗುಂಡಿಗಳು ಬೀಳುತ್ತಿದ್ದು, ಅವುಗಳನ್ನು ಸಹ ಮುಚ್ಚುವ ಕಾರ್ಯ ಮಾಡುತ್ತಿದ್ದೇವೆ ಎಂದರು.

ಬಿಬಿಎಂಪಿ ಅಧಿಕಾರಿಗಳು ರಸ್ತೆ ಗುಂಡಿಗಳನ್ನು ಮುಚ್ಚಿಸುವಲ್ಲಿ ನಿರಂತರವಾಗಿ ಶ್ರಮವಹಿಸುತ್ತಿದ್ದು, ಮುಚ್ಚಿದ ಸ್ಥಳ ಬಿಟ್ಟು ಬೇರೆ ಜಾಗದಲ್ಲಿಯೂ ಗುಂಡಿಗಳು ಬೀಳುತ್ತವೆ. ಈ ಗುಂಡಿ ಮುಚ್ಚುವ ಕಾರ್ಯ ನಿರಂತರವಾಗಿ ನಡೆಯುತ್ತದೆ.

-ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News