ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ: ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್‌ಗೆ ಚಿಂತನೆ

Update: 2018-10-23 13:48 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.23: ರಾಜ್ಯಾದ್ಯಂತ ಪ್ರಮುಖ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಪೂರೈಕೆಯಾಗದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಲೋಡ್ ಶೆಡ್ಡಿಂಗ್ ಜಾರಿಗೆ ಗಂಭೀರ ಚಿಂತನೆ ನಡೆಸಿದೆ.

ದೀಪಾವಳಿ ಹಬ್ಬ ಸಮೀಪವಾಗುತ್ತಿರುವ ಸಂದರ್ಭದಲ್ಲಿಯೇ ಲೋಡ್‌ಶೆಡ್ಡಿಂಗ್ ಮಾಡಲು ಸರಕಾರ ಮುಂದಾಗಿದ್ದು, ಬೆಂಗಳೂರು ವಲಯದಲ್ಲಿ ಬೆಳಗ್ಗೆ ಒಂದು ಗಂಟೆ ಹಾಗೂ ಸಂಜೆ ಒಂದು ಗಂಟೆ ಹಾಗೂ ಇತರೆ ಭಾಗಗಳಲ್ಲಿ ದಿನಕ್ಕೆರಡು ಅಥವಾ ಮೂರು ಗಂಟೆ ಲೋಡ್‌ಶೆಡ್ಡಿಂಗ್ ಅಳವಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರವಾದ ರಾಯಚೂರು ಉತ್ಪಾದನಾ ಘಟಕ ಕಲ್ಲಿದ್ದಲು ಕೊರತೆ ಎದುರಿಸುತ್ತಿರುದರಿಂದ ಇದರ ಎರಡು ಘಟಕಗಳು ಕಳೆದ ಒಂದು ವಾರದಿಂದ ಸ್ಥಗಿತಗೊಂಡಿವೆ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಎದುರಾಗಿರುವುದರಿಂದ ತಕ್ಷಣವೇ ಕೇಂದ್ರ ಸರಕಾರ ಕಲ್ಲಿದ್ದಲು ಪೂರೈಕೆ ಮಾಡಬೇಕು ಎಂದು ಪತ್ರ ಬರೆದು ಮನವಿ ಮಾಡಿದ್ದರು.

ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್‌ಗೆ ಸಿಎಂ ರಾಜ್ಯಕ್ಕೆ ನಿಗದಿ ಮಾಡಿರುವಷ್ಟು ಕಲ್ಲಿದ್ದಲು ನೀಡದಿದ್ದರೆ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಪತ್ರ ಬರೆದು ಹಲವು ದಿನಗಳು ಕಳೆಯುತ್ತಿದ್ದರೂ ರಾಜ್ಯಕ್ಕೆ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಯಾಗಿಲ್ಲ. ಈಗ ಸಂಗ್ರಹ ಮಾಡಿರುವ ಕಲ್ಲಿದ್ದಲಿನಿಂದಲೇ ಆರ್‌ಟಿಪಿಎಸ್‌ನಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಮುಂದಿನ ದಿನಗಳನ್ನು ಗಮನದಲ್ಲಿಟ್ಟುಕೊಂಡು ಕೆಪಿಟಿಸಿಎಲ್ ಅಧಿಕಾರಿಗಳು ಲೋಡ್‌ಶೆಡ್ಡಿಂಗ್ ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ನಮ್ಮಲ್ಲಿ ಸಂಗ್ರಹವಿರುವ ಕಲ್ಲಿದ್ದಲು ಮೂಲಕ ವಿದ್ಯುತ್ ಉತ್ಪಾದಿಸಿದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗುತ್ತದೆ. ಹೀಗಾಗಿ ಬೆಂಗಳೂರು ವ್ಯಾಪ್ತಿಯ ಬೆಸ್ಕಾಂನಲ್ಲಿ ಎರಡು ಗಂಟೆ, ಇತರೆ ಕಡೆ ಮೂರು ಗಂಟೆ ಲೋಡ್‌ಶೆಡ್ಡಿಂಗ್ ಜಾರಿ ಮಾಡುವಂತೆ ಒತ್ತಡ ಹಾಕಲಾಗಿದೆ ಎನ್ನಲಾಗಿದೆ.

ಬೇಡಿಕೆ ಎಷ್ಟಿದೆ: ರಾಜ್ಯದಲ್ಲಿ ದಿನಕ್ಕೆ ಅಂದಾಜು 4200 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಕುಡಿಯುವ ನೀರು, ರೈತರ ಪಂಪ್‌ಸೆಟ್ ಸೇರಿದಂತೆ ಇತರೆ ಚಟುವಟಿಕೆಗಳಿಗೆ ಇಷ್ಟು ಪ್ರಮಾಣದ ವಿದ್ಯುತ್ ಉತ್ಪಾದನೆಯಾಗಬೇಕಿದೆ. ಆದರೆ, ಈಗ ದಿನಕ್ಕೆ ಕೇವಲ 3800ರಿಂದ 4000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ನಮ್ಮಲ್ಲಿರುವ ಕಲ್ಲಿದ್ದಲು ಹಾಗೂ ಇತರೆ ಸಂಪನ್ಮೂಲಗಳ ಕ್ರೋಡೀಕರಣದಿಂದ 4000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಹೀಗಾಗಿ, ಲೋಡ್‌ಶೆಡ್ಡಿಂಗ್ ಮಾಡುವುದರಿಂದ ಸುಮಾರು 200ರಿಂದ 400 ಮೆಗಾವ್ಯಾಟ್ ವಿದ್ಯುತ್ ಉಳಿತಾಯವಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರಗಳಾದ ಆರ್‌ಟಿಪಿಎಸ್, ಬಳ್ಳಾರಿಯ ಬಿಟಿಪಿಎಸ್ ಮತ್ತು ಯರಮರಸ್‌ನ ವೈಟಿಪಿಎಸ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ಖಾಲಿಯಾಗಿದೆ. ಸದ್ಯಕ್ಕೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಿರ್ಮಾಣವಾಗುತ್ತಿರುವ ಸೋಲಾರ್ ವಿದ್ಯುತ್ ಘಟಕ ಏಕೈಕ ಆಶಾಕಿರಣವಾಗಿದೆ.

ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯುಂಟಾಗಿರುವ ಹಾಗೂ ಲೋಡ್ ಶೆಡ್ಡಿಂಗ್‌ಗೆ ಸಂಬಂಧಿಸಿದಂತೆ ಚರ್ಚಿಸುವ ಸಲುವಾಗಿ ಇಂದು ಇಂಧನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಕರೆಯಲಾಗಿದೆ. ಸಭೆಯ ನಂತರ ಈ ಕುರಿತು ತೀರ್ಮಾನ ಮಾಡಲಾಗುತ್ತದೆ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News