ಬಿಸಿಯೂಟದೊಂದಿಗೆ ಜೇನುತುಪ್ಪ: ಆರೋಗ್ಯ ಇಲಾಖೆಗೆ ಪತ್ರ

Update: 2018-10-23 13:02 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.23: ಸರಕಾರಿ ಶಾಲಾ ಮಕ್ಕಳಿಗೆ ಜೇನುತುಪ್ಪನೀಡುವ ಸಂಬಂಧ ಅಗತ್ಯ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪತ್ರ ಬರೆಯಲಾಗಿದೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಸರಕಾರಿ ಶಾಲಾ ಮಕ್ಕಳಿಗೆ ಜೇನುತುಪ್ಪ ನೀಡಬೇಕು ಎಂಬ ಸಲಹೆಯನ್ನು ನೀಡಿತ್ತು. ಅದರಂತೆ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಜೇನುತುಪ್ಪ ಎಷ್ಟು ಪ್ರಮಾಣದಲ್ಲಿ ನೀಡಬೇಕು ಹಾಗೂ ಯಾವ ಸಮಯದಲ್ಲಿ ನೀಡಬೇಕು ಎಂಬ ಕುರಿತು ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆಗೆ ಪತ್ರ ಬರೆದಿದೆ. ಆದರೆ, ಆರೋಗ್ಯ ಇಲಾಖೆಯಿಂದ ಶಿಕ್ಷಣ ಇಲಾಖೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸರಕಾರದಿಂದ ಈಗಾಗಲೇ ಹಿರಿಯ, ಕಿರಿಯ, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟದೊಂದಿಗೆ ಹಾಲನ್ನು ನೀಡಲಾಗುತ್ತಿದೆ. ಮಕ್ಕಳಿಗೆ ಮತ್ತಷ್ಟು ಪೌಷ್ಠಿಕಾಂಶ ನೀಡುವ ಉದ್ದೇಶದಿಂದ ಜೇನುತುಪ್ಪ ನೀಡುವಂತೆ ಸಲಹೆ ನೀಡಿತ್ತು. ಆದರೆ, ಯಾವ ತರಗತಿಯ ವಿದ್ಯಾರ್ಥಿಗಳಿಗೆ ಎಷ್ಟು ಪ್ರಮಾಣದಲ್ಲಿ ನೀಡಬೇಕು ಮತ್ತು ಹಾಲಿನ ಜತೆಗೋ ಅಥವಾ ಊಟ್ಕಕಿಂತ ಮೊದಲು ನೀಡಬೇಕೇ ಎಂಬಿತ್ಯಾದಿ ಅಂಶಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ.

ಆದುದರಿಂದಾಗಿ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಜೇನುತುಪ್ಪ ವಿತರಣೆಯ ಮಾರ್ಗೋಪಾಯದ ಬಗ್ಗೆ ತಿಳಿಸುವಂತೆ ರಾಜ್ಯ ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೆ, ಆರೋಗ್ಯ ಇಲಾಖೆಯಿಂದ ಯಾವುದೇ ಮಾಹಿತಿ ಈವರೆಗೂ ಬಂದಿಲ್ಲ. ಜೇನುತುಪ್ಪಕ್ಕೆ ತಗಲುವ ವೆಚ್ಚದ ಬಗ್ಗೆಯೂ ಸರಕಾರದ ಗಮನಕ್ಕೆ ತರಬೇಕಾಗುತ್ತದೆ. ಹಣಕಾಸಿನ ಅನುಮೋದನೆ ಪಡೆದ ನಂತರವಷ್ಟೇ ಜೇನುತುಪ್ಪ ನೀಡಲು ಸಾಧ್ಯ. ವಿದ್ಯಾರ್ಥಿಗಳಿಗೆ ಜೇನುತುಪ್ಪ ನೀಡುವ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News