ರಾಜ್ಯ ರಾಜಕೀಯದಿಂದಲೇ ದೇಶದಲ್ಲಿ ಪರಿವರ್ತನೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-10-23 13:16 GMT

ಬೆಂಗಳೂರು, ಅ. 23: ರಾಜ್ಯದ ಮೈತ್ರಿ ಸರಕಾರವನ್ನು ದೇಶವೇ ತಿರುಗಿ ನೋಡುತ್ತಿದೆ. ರಾಜ್ಯ ರಾಜಕೀಯದಿಂದಲೇ ದೇಶದಲ್ಲಿ ಹಲವು ಬದಲಾವಣೆಗಳಾಗಿವೆ ಹಾಗೂ ಪರಿವರ್ತನೆಗೆ ಸಾಕ್ಷಿಯಾಗಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ಮತ್ತು ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ, ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ವಿಧಾನ ಸೌಧದ ಮುಂದೆ ದೇಶದ ಅನೇಕ ಗಣ್ಯರ ಸಮ್ಮುಖದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಲೇ, ದೇಶದಾದ್ಯಂತ ಹೊಸ ಅಲೆಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

2014ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಇದ್ದ ಟ್ರೆಂಡ್ ಈಗ ಇಲ್ಲ. ಹೀಗಾಗಿ, ಮೂರು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಗೆ, ರಾಜ್ಯದ ಐದು ಲೋಕಸಭಾ ಉಪಚುನಾವಣೆಯಿಂದ ಹೊಸ ಸಂದೇಶ ರವಾನೆಯಾಗಲಿದ್ದು, ಹೊಸ ರಾಜಕೀಯ ಬೆಳವಣಿಗೆಗಳು ರಾಷ್ಟ್ರ ರಾಜಕೀಯದಲ್ಲಿ ಗರಿಗೆದರಲಿವೆ ಎಂದರು.

ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಸಾಲ ಪಡೆದು ಅದನ್ನು ತೀರಿಸಲಾಗದೆ ನೋವು ಅನುಭವಿಸುತ್ತಿರುವ ಕುಟುಂಬಗಳ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಾಹಿತಿ ಪಡೆದ ನಂತರ ಶೈಕ್ಷಣಿಕ ಸಾಲ ಮನ್ನಾದ ಸಾಧಕ-ಬಾಧಕಗಳನ್ನು ಪರಿಶೀಲನೆ ಮಾಡಲಾಗುವುದು.

ಐದು ಕ್ಷೇತ್ರಗಳ ಉಪ ಚುನಾವಣೆ ನಂತರ ಸಾಲ ಮನ್ನಾದ ಸಮಗ್ರ ಮಾಹಿತಿ ಸುಲಭವಾಗಿ ಅರ್ಥವಾಗುವಂತೆ ವಿವರವಾಗಿ ಜಾಹೀರಾತು ನೀಡಲಾಗುವುದು. ನವೆಂಬರ್ ಒಂದರಿಂದ ರೈತ ಕುಟುಂಬಗಳಿಗೆ ಋಣಮುಕ್ತ ಪತ್ರಗಳನ್ನು ನನ್ನ ಹೆಸರಿನಲ್ಲೇ ಕಳುಹಿಸಲಾಗುವುದು. ಅಲ್ಲದೆ, ಹಿಂದಿನ ಸಿದ್ದರಾಮಯ್ಯ ಅವರ ಸರಕಾರ 50 ಸಾವಿರ ವರೆಗೂ ಸಾಲ ಮನ್ನಾ ಮಾಡಿದ ಪೈಕಿ ಬಾಕಿ ಇದ್ದ 3300 ಕೋಟಿ ರೂ.ಗಳನ್ನು ಮೈತ್ರಿ ಸರಕಾರ ತೀರಿಸಿದೆ ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ಸಹಕಾರ ಸಂಸ್ಥೆಗಳು ಪಡೆದಿದ್ದ ಸಾಲದ ಪೈಕಿ 10,300 ಕೋಟಿ ರೂ.ಗಳನ್ನು ಮನ್ನಾ ಮಾಡಲಾಗಿದೆ. ಅದರಲ್ಲಿ ಮೊದಲ ಕಂತಿನ ಹಣವನ್ನು ಸೆ.ನಲ್ಲಿ ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಲು ಮುಂದಾದಾಗ ಆರಂಭದಲ್ಲಿ ಬ್ಯಾಂಕುಗಳು ಸಹಕಾರ ನೀಡಲಿಲ್ಲ. ಅದರ ಹಿಂದಿನ ರಾಜಕಾರಣವನ್ನು ಚರ್ಚಿಸಲು ಹೋಗುವುದಿಲ್ಲ. ಹಲವು ಸುತ್ತಿನ ಸಭೆಗಳ ನಂತರ ಬ್ಯಾಂಕುಗಳು ಒಪ್ಪಿಕೊಂಡಿವೆ ಎಂದು ಮಾಹಿತಿ ನೀಡಿದರು.

ಸಾಲ ಮನ್ನಾಕ್ಕೆ ರಾಜ್ಯದಲ್ಲಿ 44 ಲಕ್ಷ ರೈತರು ಫಲಾನುಭವಿಗಳಿದ್ದು, ಸಾಲ ಮನ್ನಾದಿಂದ ಇತರೆ ಯೋಜನೆಗಳಿಗೂ ಬಾಧಕವಾಗದಂತೆ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲಾಗಿದೆ. ಖಜಾನೆ ಖಾಲಿಯಾಗಿದೆ ಎಂಬ ಬಿಜೆಪಿಯವರ ಆರೋಪ ಹುರುಳಿಲ್ಲದ್ದು ಎಂದು ಸ್ಪಷ್ಟಪಡಿಸಿದರು.

ನಮ್ಮ ಸರಕಾರ ಟೇಕಾಫ್ ಆಗಿಲ್ಲ, ಕೆಲಸ ಮಾಡುತ್ತಿಲ್ಲ ಎಂಬ ಅಪಪ್ರಚಾರ ನಡೆಯುತ್ತಿದೆ. ರಾಜ್ಯದ ಸರಕಾರಿ ಶಾಲಾ-ಕಾಲೇಜುಗಳ ಕಟ್ಟಡ ದುರಸ್ತಿಗೆ 1200 ಕೋಟಿ ಒದಗಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ 29 ಸಾವಿರ ಕೋಟಿ ಹಂಚಿಕೆ ಮಾಡಿ ವಸತಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಇದರಿಂದ 56 ಸಾವಿರ ಕುಟುಂಬಗಳಿಗೆ ಸೌಲಭ್ಯ ದೊರಕುತ್ತಿದೆ. ಎಸ್ಸಿ-ಎಸ್ಟಿ ಉಪ ಯೋಜನೆಯ ಹಣ ಖರ್ಚು ಮಾಡದ ಅಧಿಕಾರಿಗಳನ್ನು ಶಿಕ್ಷಿಸಲು ಅಧಿಸೂಚನೆ ಹೊರಡಿಸಲಾಗಿದೆ.

ಪ್ರತಿ ಕುಟುಂಬಕ್ಕೆ 7 ಕೆಜಿ ಅಕ್ಕಿ ನೀಡಬೇಕೆಂಬ ಒತ್ತಡ ಹೆಚ್ಚಾಗಿದ್ದು, ಅದನ್ನು ಜಾರಿ ಮಾಡಲು 5500 ಕೋಟಿ ಹೊಂದಿಸಬೇಕಿದೆ. ಈ ಯೋಜನೆಯ ಫಲಾನುಭವಿಗಳು 1.04ಕೋಟಿ ಯಿಂದ 1.29 ಕೋಟಿ ಕುಟುಂಬಕ್ಕೆ ಏರಿಕೆಯಾಗಿದೆ. ಹಾಗೂ ಸಿದ್ದರಾಮಯ್ಯ ಸರಕಾರದ ಎಲ್ಲ ಯೋಜನೆಗಳನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದರು.

ನಾನು ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತೇನೋ ಗೊತ್ತಿಲ್ಲ. ಇದು ದೇವರು ಕೊಟ್ಟ ಅಧಿಕಾರ. ದೈವ ಪ್ರೇರಣೆಯಿಂದ ಕಾಂಗ್ರೆಸ್ ಜೆಡಿಎಸ್‌ಗೆ ಬೆಂಬಲ ಕೊಟ್ಟಿದೆ. ದೇವರ ಇಚ್ಛೆಯಂತೆ ಐದು ವರ್ಷ ಅಧಿಕಾರ ಪೂರೈಸುತ್ತೇನೆ. ನಾನು ಟೆಂಪಲ್ ರನ್ ಅಷ್ಟೇ ಮಾಡುತ್ತಿಲ್ಲ. ಅಭಿವೃದ್ಧಿಯತ್ತ ಗಮನ ನೀಡುತ್ತಿದ್ದೇನೆ. ನಮ್ಮ ಕುಟುಂಬ ದೇವರ ಮೇಲೆ ನಂಬಿಕೆ ಇಟ್ಟಿದೆ. ಹಾಗಾಗಿ ದೇವರ ದರ್ಶನ ಪಡೆಯುತ್ತೇನೆ. ನಾನು ಸಮಯ ಪಾಲನೆ ಮಾಡುತ್ತಿಲ್ಲ ಎಂಬ ಆಕ್ಷೇಪಗಳಿವೆ. ದಿನನಿತ್ಯ ಜನಸಾಮಾನ್ಯರನ್ನು ಭೇಟಿ ಮಾಡುವುದರಿಂದ ಸಮಯ ಪಾಲನೆ ಕಷ್ಟ. ನಾನು ಉದ್ದೇಶಪೂರ್ವಕವಾಗಿ ವಿಳಂಬವಾಗಿ ಬರುವುದಿಲ್ಲ ಎಂದು ತಿಳಿಸಿದರು.

ಪೆರಿಫೆರಲ್ ರಸ್ತೆ ನಿರ್ಮಾಣ: ಬೆಂಗಳೂರಿಗೆ ಸರಕಾರದ ಕೊಡುಗೆ ಏನು ಎಂಬ ಪ್ರಶ್ನೆಗಳು ಬರುತ್ತಿವೆ. ನಾನು 12 ವರ್ಷದ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಪೆರಿಫೆರಲ್ ರಸ್ತೆ ನಿರ್ಮಾಣ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದೆ. ಅದಕ್ಕಾಗಿ ಭೂ ಸ್ವಾಧೀನದ ಪ್ರಾಥಮಿಕ ಅಧಿಸೂಚನೆಯೂ ಜಾರಿಯಾಗಿತ್ತು. ಅನಂತರ ಯೋಜನೆ ನನೆಗುದಿಗೆ ಬಿದ್ದಿದೆ. ಆದರೆ, ಈಗ ನಮ್ಮ ಸರಕಾರ ಮತ್ತೆ ಯೋಜನೆಗೆ ಚಾಲನೆ ನೀಡುತ್ತಿದ್ದು, ಮುಂದಿನ ಸಂಪುಟದಲ್ಲಿ ಇದಕ್ಕೆ ಅನುಮತಿ ನೀಡಲಾಗುವುದು. ಮೊದಲ ಕಂತಿನಲ್ಲಿ 2ಸಾವಿರ ಕೋಟಿ ಹಣ ಬಿಡುಗಡೆ ಮಾಡಲಾಗುವುದು. ಮುಂದಿನ ವರ್ಷ 4500 ಕೋಟಿ ಹಣ ಖರ್ಚು ಮಾಡಲಾಗುವುದು. ಶೀಘ್ರವೇ ಟೆಂಡರ್ ಕರೆದು ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಮುಂದಿನ ತಿಂಗಳಿನಿಂದಲೇ ಯೋಜನೆ ಪ್ರಾರಂಭಿಸಲಾಗುತ್ತದೆ. ಆರೂವರೆ ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಮೂರು ತಿಂಗಳಲ್ಲಿ ಮುಗಿಸಲಾಗುವುದು. ರಸ್ತೆ ಮಧ್ಯೆ ಮೆಟ್ರೋಗೂ ಜಾಗ ಕಲ್ಪಿಸಲಾಗುವುದು ಎಂದರು.

ಬಿಬಿಎಂಪಿಗೆ ಎಲ್ಇಡಿ: ಬಿಬಿಎಂಪಿ ವರ್ಷಕ್ಕೆ 100 ಕೋಟಿ ವಿದ್ಯುತ್ ಬಿಲ್ ಪಾವತಿಸುತ್ತಿದೆ. ಎಲ್ಇಡಿ ಬಲ್ಪ್‌ಗಳನ್ನು ಅಳವಡಿಸಿದರೆ ಈ ಹಣ ಉಳಿಸಲು ಸಾಧ್ಯ. ಖಾಸಗಿ ವ್ಯಕ್ತಿಯೊಬ್ಬರು ಎಲ್ಇಡಿ ಬಲ್ಪ್ಅಳವಡಿಸಲು ಮುಂದೆ ಬಂದಿದ್ದಾರೆ, ವಿದ್ಯುತ್ ಬಿಲ್ ಸಂಗ್ರಹದಲ್ಲಿ ಶೇ.85ರಷ್ಟನ್ನು ಅವರು ಇಟ್ಟುಕೊಂಡು. ಶೇ.15ರಷ್ಟನ್ನು ಬಿಬಿಎಂಪಿಗೆ ಪಾವತಿಸುತ್ತಾರೆ. ಮುಂದಿನ ಎರಡನೇ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮತಿ ನೀಡಲಾಗುವುದು ಎಂದರು.

ತ್ಯಾಜ್ಯ ನಿರ್ವಹಣೆ: ತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ಹಿಂದಿನ ಸರಕಾರಗಳ ನಿರ್ಲಕ್ಷಕ್ಕೆ ಭಾರೀ ಬೆಲೆ ತೆರಬೇಕಾಗಿದೆ. ರಸ್ತೆಯಲ್ಲಿ ಕಸ ಬಿದ್ದಿರುವುದನ್ನು ನೋಡಿದಾಗ ಮುಖ್ಯಮಂತ್ರಿಯಾಗಿ ನಾನು ತಲೆ ತಗ್ಗಿಸುವಂತಾಗಿದೆ. ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ನಮ್ಮ ಸರಕಾರ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.

ಸಂವಾದದಲ್ಲಿ ಪ್ರೆಸ್‌ಕ್ಲಬ್ ಸದಾಶಿವ ಶೆಣೈ, ಕಾರ್ಯದರ್ಶಿ ಎಚ್.ವಿ.ಕಿರಣ್, ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಐದು ತಿಂಗಳಿನಿಂದ ಬೆಳಗ್ಗೆ, ಮಧ್ಯಾಹ್ನ, ಸಂಜೆ ಸರಕಾರ ಬಿದ್ದು ಹೋಯ್ತು ಎಂದು ಹೇಳುತ್ತಿದ್ದಾರೆ. 10-15 ಜನ ಬೆಂಬಲ ಹಿಂತೆಗೆದು ಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇದರಿಂದ ಅಧಿಕಾರಿಗಳಲ್ಲಿ ಅಸಡ್ಡೆ ಮನೋಭಾವ ಬಂದು ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಾಧ್ಯಮ ಮಿತ್ರರು ಇದರ ವಾಸ್ತವಾಂಶವನ್ನು ತಿಳಿದು ವರದಿ ಮಾಡಿದರೆ ಉತ್ತಮ.

-ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News