ಕುದುರೆಗೆ ಡೈ ಹಚ್ಚಿ 18 ಲಕ್ಷಕ್ಕೆ ಮಾರಿದ ವಂಚಕರು !

Update: 2018-10-25 04:08 GMT

ಬಠಿಂಡಾ, ಅ. 25: ಫರೀದ್‌ಕೋಟೆ ಮೂಲದ ನಿವೃತ್ತ ಉಪ ಜಿಲ್ಲಾ ಅಟಾರ್ನಿ ಹಾಗೂ ಕುದುರೆ ವ್ಯಾಪಾರಿಯೊಬ್ಬರಿಗೆ ವಂಚಕರ ಗುಂಪೊಂದು ಬಿಳಿ ಕುದುರೆಗೆ ಡೈ ಹಚ್ಚಿ ಕಪ್ಪುಕುದುರೆ ಎಂದು ನಂಬಿಸಿ 17.5 ಲಕ್ಷ ರೂಪಾಯಿಗೆ ಮಾರಾಟ ಮಾಡಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕುದುರೆಗಳಲ್ಲಿ ಕಪ್ಪು ಬಣ್ಣ ಅಪರೂಪ. ಮರ್ವಾರಿ ಎಂಬ ತಳಿಯ ಕಪ್ಪುಕುದುರೆಗಳು ಇದೇ ತಳಿಯ ಇತರ ಕುದುರೆಗಳಿಗಿಂತ ಹೆಚ್ಚು ಬೆಲೆ ಬಾಳುತ್ತವೆ.
ಫರೀದಾಕೋಟ್‌ನ ಕುದುರೆ ವ್ಯಾಪಾರಿ ಕರ್ಣವೀರ್ ಇಂದ್ರ ಸಿಂಗ್ ಶೆಖೋನ್ ವಂಚನೆಗೆ ಒಳಗಾದ ವ್ಯಕ್ತಿ. ಖರೀದಿಸಿದ ಕೆಲ ದಿನಗಳಲ್ಲಿ ಕಪ್ಪು ಕುದುರೆಯ ಮೈಯಲ್ಲಿ ಬಿಳಿ ಮಚ್ಚೆಗಳು ಕಾಣಿಸಿಕೊಂಡಾಗ ಈ ವಂಚನೆ ಬೆಳಕಿಗೆ ಬಂದಿದೆ. ಬಳಿಕ ಈ ಸ್ಟಾಲಿಯನ್ ಸಂಪೂರ್ಣ ಬಿಳಿ ಬಣ್ಣಕ್ಕೆ ತಿರುಗಿದೆ. ಈ ಸಂಬಂಧ ಪೊಲೀಸರಿಗೆ ನೀಡಿದ ದೂರಿನ ಅನ್ವಯ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ.

"ಮರ್ವಾರಿ ತಳಿಯ ಕಪ್ಪುಕುದುರೆಯನ್ನು 2017ರ ನವೆಂಬರ್‌ನಲ್ಲಿ ನಾನು ಮೇವಾಸಿಂಗ್ ಎಂಬಾತನಿಂದ ಖರೀದಿಸಿದ್ದೆ. ಇದು ರಾಜಸ್ಥಾನ ಮೂಲದ ತಳಿ ಎಂದು ಆತ ನಂಬಿಸಿದ್ದ. ಇದಕ್ಕೆ 24 ಲಕ್ಷ ರೂಪಾಯಿ ಬೆಲೆ ಎಂದು ಹೇಳಿದ್ದ. ಆದರೆ ಮಾತುಕತೆ ಬಳಿಕ 17.5 ಲಕ್ಷಕ್ಕೆ ಖರೀದಿಸಲಾಗಿತ್ತು" ಎಂದು ಶೆಖೋನ್ ಹೇಳಿದ್ದಾರೆ.

ಸಂಪೂರ್ಣ ಬೆಲೆ ತೆತ್ತು ಕುದುರೆ ಖರೀದಿಸಿದ್ದೆ. ಕೆಲ ದಿನಗಳ ಬಳಿಕ ಬಿಳಿ ಕುದುರೆಗೆ ಕಪ್ಪು ಬಣ್ಣ ಹಚ್ಚಿ ಮಾರಾಟ ಮಾಡಿ ವಂಚಿಸಿದ್ದು ಗೊತ್ತಾಯಿತು ಎಂದು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News