ಸಿಬಿಐ ಹಂಗಾಮಿ ಮುಖ್ಯಸ್ಥ ನಾಗೇಶ್ವರ ರಾವ್ ವಿರುದ್ಧವೂ ಇವೆ ಹಲವಾರು ಆರೋಪಗಳು

Update: 2018-10-25 08:45 GMT

ಹೊಸದಿಲ್ಲಿ, ಅ.25: ಕೇಂದ್ರ ಜಾಗೃತ ಆಯೋಗ ಸಿಬಿಐನ ಇಬ್ಬರು ಉನ್ನತ ಅಧಿಕಾರಿಗಳನ್ನು ರಜೆಯ ಮೇಲೆ ಕಳುಹಿಸಿ ಸಾಕಷ್ಟು ಕಿರಿಯ- 1986 ಬ್ಯಾಚಿನ ಅಧಿಕಾರಿ ನಾಗೇಶ್ವರ ರಾವ್ ಅವರನ್ನು ಸಿಬಿಐ ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಿಸಿರುವುದು ಹಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಸುದ್ದಿ ವಾಹಿನಿ ಎನ್‍ಡಿಟಿವಿ ಸಂಗ್ರಹಿಸಿದ ಮಾಹಿತಿಯಿಂದ ನಾಗೇಶ್ವರ ರಾವ್ ಅವರ ಹಿನ್ನೆಲೆ ಕೂಡ ಸಾಕಷ್ಟು ವಿವಾದಾತ್ಮಕವಾಗಿದೆಯೆಂದು ತಿಳಿದು ಬರುತ್ತದೆ.

ರಾವ್ 2015ರಲ್ಲಿ ಸಿಬಿಐ ಸೇವೆ ಸೇರಿದಾಗ ಅನಿಲ್ ಸಿನ್ಹಾ ಮುಖ್ಯಸ್ಥರಾಗಿದ್ದರು. ಆಗ ಸಿಬಿಐ ಕೌಂಟರ್-ಇಂಟಲಿಜೆನ್ಸ್ ಘಟಕ ಅಥವಾ ವಿಶೇಷ ಘಟಕದ ಮುಖ್ಯಸ್ಥರಾಗಿದ್ದ ಅಮಿತಾಭ್ ಸಿಂಗ್ ಧಿಲ್ಲೊನ್ ಅವರು ರಾವ್ ವಿರುದ್ಧ ವ್ಯತಿರಿಕ್ತ ವರದಿ ಸಲ್ಲಿಸಿದ್ದರು. ರಾವ್ ವಿರುದ್ಧ ಇರುವ ಭ್ರಷ್ಟಾಚಾರ ಆರೋಪಗಳು ಹಾಗೂ ರಾಜಕೀಯ ಪಕ್ಷಗಳೊಂದಿಗೆ ಅವರು ಹೊಂದಿದ್ದ ನಿಕಟತೆಯಿಂದಾಗಿ ಅವರನ್ನು ಸೇರಿಸಿಕೊಳ್ಳಬಾರದೆಂದು ವರದಿ ತಿಳಿಸಿತ್ತು. ಆದರೆ ಇದನ್ನು ಸಿನ್ಹಾ ಜತೆಗೆ ಸರಕಾರವೂ ನಿರ್ಲಕ್ಷ್ಯಿಸಿತ್ತು.

ವಿಜಿಎನ್ ಡೆವಲಪರ್ಸ್ ಎಂಬ ಚೆನ್ನೈ ಮೂಲದ ಸಂಸ್ಥೆ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಡೆತನದಲ್ಲಿದ್ದ ಭೂಮಿ ಖರೀದಿಗೆ ಕುರಿತಂತೆ ಈ ಭ್ರಷ್ಟಾಚಾರ ಆರೋಪವಿತ್ತು. ದೂರಿನ ಪ್ರಕಾರ  ಈ ಮಾರಾಟದಿಂದ ಸರಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿದ್ದರೂ ಆರೋಪಿಗಳನ್ನು  ಬಂಧಿಸಲಾಗಿಲ್ಲ ಎಂಬ ಆರೋಪ  ಆಗ ಚೆನ್ನೈ ವಲಯ ಮುಖ್ಯಸ್ಥರಾಗಿದ್ದ ರಾವ್ ಅವರ ಮೇಲಿತ್ತು. ಇದೇ ಕಾರಣಕ್ಕೆ ರಾವ್ ಅವರನ್ನು ಹಂಗಾಮಿ ಸಿಬಿಐ ಮುಖ್ಯಸ್ಥರನ್ನಾಗಿಸಿರುವ ಬಗ್ಗೆ ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

ರಾವ್ ವಿರುದ್ಧ ಇನ್ನೊಂದು ದೂರು ಕೂಡ ಇದೆ. ಈ  ವರ್ಷ ಅವರು ಸಿಬಿಐ ಜಂಟಿ ನಿರ್ದೇಶಕರಾಗಿದ್ದ ಸಂದರ್ಭ ``ನಾಗೇಶ್ವರ ರಾವ್, ಐಪಿಎಸ್ ಅವರ ಅವಧಿಪೂರ್ವ ವಾಪಸಾತಿ(ರಿಪಾಟ್ರಿಯೇಶನ್)'' (ಕಡತ ಸಂಖ್ಯೆ 202/01/2015) ಇದನ್ನು ಸುರಕ್ಷತೆಗೆ ಸಂಬಂಧಿಸಿದ ಸಂಪುಟ ಸಮಿತಿಗೆ ಕಳುಹಿಸಲಾಗಿತ್ತು. ಅವರ ವಿರುದ್ಧದ ಹಲವಾರು ದೂರುಗಳ ಹಿನ್ನೆಲೆಯಲ್ಲಿ ಅವರನ್ನು ಒಡಿಶಾಗೆ ವಾಪಸ್ ಕಳುಹಿಸಬೇಕೆಂಬ ಸಲಹೆ ನೀಡಲಾಗಿತ್ತು. ದಿಲ್ಲಿಯ ಹಿರಿಯ ಅಧಿಕಾರಿಯೊಬ್ಬರ ಜತೆ  ಸೇರಿಕೊಂಡು  ಒಂದು ದೂರನ್ನು ಅವರು ಮುಚ್ಚಿ ಹಾಕಿದ್ದರು ಎಂಬ ಆರೋಪವೂ ಇತ್ತು.

ಶಸ್ತ್ರಾಸ್ತ್ರ ಮಾರಾಟಗಾರ ಸಂಜಯ್ ಭಂಡಾರಿಯ ಡೈರಿಗಳಲ್ಲಿ ಸುಮಾರು 70ಕ್ಕೂ ಅಧಿಕ ಐಟಿ ಅಧಿಕಾರಿಗಳ ಹೆಸರಿದ್ದರೂ ಅವರ ವಿರುದ್ಧದ ತನಿಖೆಯನ್ನು ರಾವ್ ನಿಲ್ಲಿಸಿದ್ದರು ಎಂದು ದೂರು ತಿಳಿಸಿತ್ತು. ಭಂಡಾರಿಯನ್ನು ಐಟಿ ಜಂಟಿ ಆಯುಕ್ತ ಸಲ್ಲೊಂಗ್ ಯಡೆನ್ ಜತೆಗೆ ಜನವರಿ 2015ರಲ್ಲಿ ಪೊಲೀಸರು ಬಂಧಿಸಿದ್ದರು. ಹಲವಾರು ಅಧಿಕಾರಿಗಳ ವಿರುದ್ಧದ  ಸಾಕ್ಷ್ಯಗಳೂ ಅವರಿಂದ ದೊರಕಿದ್ದವು. ಆದರೆ ಭಂಡಾರಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯ ಅಳಿಯ ರಾಬರ್ಟ್ ವಾಧ್ರಾ ಅವರ ಸಮೀಪವರ್ತಿಯೆಂದು ಬಿಜೆಪಿ ಆರೋಪಿಸುತ್ತಿದೆ.

ತಮ್ಮ ಐಟಿ ರಿಟರ್ನ್ಸ್ ಗಳಲ್ಲಿ  ಸರಿಯಾದ ಮಾಹಿತಿ ನೀಡದೇ ಇರುವ ಆರೋಪವೂ ರಾವ್ ವಿರುದ್ಧ ಇದೆ. 2010ರ ನಂತರ ಅವರ   ರಿಟರ್ನ್ಸ್ ‍ಗಳಲ್ಲಿ ಅವರ ಪತ್ನಿ ಹಾಗೂ ಆಕೆಯ ಸೋದರ ಸಂಬಂಧಿ ಗುಂಟೂರಿನಲ್ಲಿ ಹೊಂದಿದ್ದ ರೂ 20 ಲಕ್ಷ ಆಸ್ತಿಯ ಬಗ್ಗೆ ಉಲ್ಲೇಖಿಸಲಾಗಿತ್ತು.  ನಂತರ ಸೋದರ ಸಂಬಂಧಿಯೆಂದು ಹೇಳಲಾದ ಡಾ ರತ್ನ ಬಾಬು ಅವರ ಪತ್ನಿ ಚಿನ್ನಂ ಸಂಧ್ಯ ಅವರ ಸೋದರನೆಂದು ತಿಳಿದು ಬಂದಿದೆ.

ಇಲ್ಲಿ ತಿಳಿಸಲಾದ ಕೆಲವೊಂದು ಆರೋಪಗಳ ಬಗ್ಗೆ ಹಿರಿಯ ವಕೀಲ ಪ್ರಶಾಂತ್ ಭೂಷನ್ ಟ್ವೀಟ್ ಮಾಡಿದ್ದರೂ ಸಿಬಿಐ ಪ್ರತಿಕ್ರಿಯಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News