ಇಸ್ರೇಲ್ ವಿರುದ್ಧ ಗಾಝಾ ಗಡಿಯಲ್ಲಿ ಪ್ರತಿಭಟಿಸಿದ ಫೆಲೆಸ್ತೀನಿ ಯುವಕನ ಫೋಟೊ ವೈರಲ್

Update: 2018-10-25 09:32 GMT

ಗಾಝಾ, ಅ.25:  ಗಾಝಾದಲ್ಲಿ ಶರ್ಟ್ ಧರಿಸದೆ ಬರಿಮೈಯ್ಯಲ್ಲಿರುವ ಯುವ ಪ್ರತಿಭಟನಾಕಾರನೊಬ್ಬ ಒಂದು ಕೈಯಲ್ಲಿ ಫೆಲೆಸ್ತೀನಿ ಧ್ವಜ ಬೀಸುತ್ತಾ ಇನ್ನೊಂದು ಕೈಯ್ಯಿಂದ ಕವೆಗೋಲನ್ನು ಬೀಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖ್ಯಾತ ಫ್ರೆಂಚ್ ಕ್ರಾಂತಿಯ ಕಲಾಕೃತಿ ‘ಲಿಬರ್ಟಿ ಲೀಡಿಂಗ್ ದಿ ಪೀಪಲ್‍’ಗೆ ಅದನ್ನು ಹೋಲಿಸಲಾಗುತ್ತಿದೆ.

20 ವರ್ಷದ ಫೆಲೆಸ್ತೀನಿ ಯುವಕ ಅ'ಇದ್ ಅಬು ಅಮ್ರೊ ಇಸ್ರೇಲಿ ನಿರ್ಬಂಧವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾಗ ಟರ್ಕಿಯ ಅನದೊಲು ಏಜನ್ಸಿಯ ಮುಸ್ತಫಾ ಹಸ್ಸೌನ ಎಂಬವರು ಅಕ್ಟೋಬರ್ 22ರಂದು ತಮ್ಮ ಕ್ಯಾಮರಾದಲ್ಲಿ ಈ ಚಿತ್ರವನ್ನು ಸೆರೆಹಿಡಿದಿದ್ದಾರೆ. ಅಬು ಅಮ್ರೊ ಜತೆಗಿದ್ದ ಇತರ ಪ್ರತಿಭಟನಾಕಾರರು ಸುರಕ್ಷಾ ಜಾಕೆಟುಗಳನ್ನು  ಧರಿಸಿರುವುದು ಕಾಣಿಸುತ್ತದೆ.  ಟಯರುಗಳನ್ನು ಸುಟ್ಟ ದಟ್ಟ ಹೊಗೆಯ ಹಿನ್ನೆಲೆಯಲ್ಲಿ ಈ ಫೋಟೋ ಮೂಡಿ ಬಂದಿದ್ದು 5,000ಕ್ಕೂ ಅಧಿಕ ಮಂದಿ ಈ ಫೋಟೋ  ಟ್ವೀಟ್ ಮಾಡಿದ್ದಾರೆ.

ಅಬು ಅಮ್ರೊ ಗಾಝಾ ನಗರದ ಅಲ್-ಝೆಯ್ಟೊನ್ ಪ್ರಾಂತ್ಯದ ನಿವಾಸಿಯಾಗಿದ್ದು ಪ್ರತಿ ಶುಕ್ರವಾರ ಮತ್ತು ಸೋಮವಾರ ತನ್ನ ಗೆಳೆಯರ ಜತೆಗೂಡಿ ಪ್ರತಿಭಟಿಸುತ್ತಿದ್ದಾರೆ.

“ನನ್ನ ಹತ್ತಿರ ಒಬ್ಬ ಛಾಯಾಗ್ರಾಹಕರಿದ್ದರು ಎಂದು ನನಗೆ ತಿಳಿದಿರಲಿಲ್ಲ. ಫೋಟೋ ಬರುವುದೆಂದು ನಾನು ಪ್ರತಿಭಟಿಸುತ್ತಿಲ್ಲ. ಆದರೆ ಈ ಫೋಟೋ  ಇನ್ನಷ್ಟು ಪ್ರತಿಭಟನೆಯಲ್ಲಿ ಭಾಗವಹಿಸಲು ನನ್ನನ್ನು ಉತ್ತೇಜಿಸಿದೆ” ಎಂದು ಅಬು ಅಮ್ರೊ ಹೇಳುತ್ತಾರೆ.

ಎಲ್ಲಾ ಪ್ರತಿಭಟನೆಗಳಲ್ಲೂ ಫೆಲೆಸ್ತೀನ್ ಧ್ವಜ ಹಿಡಿಯುತ್ತಿರುವುದಾಗಿ ಹೇಳುವ ಅವರು ಒಂದು ವೇಳೆ ತಾನು ಮೃತಪಟ್ಟರೆ ಅದೇ ಧ್ವಜವನ್ನು ತನ್ನ ದೇಹಕ್ಕೆ ಹೊದಿಸಬೇಕೆಂದು ಗೆಳೆಯರಲ್ಲಿ ಹೇಳಿದ್ದಾಗಿ ತಿಳಿಸುತ್ತಾರೆ.

ಎಪ್ಪತ್ತು ವರ್ಷಗಳ ಹಿಂದೆ ತಮ್ಮ ಕುಟುಂಬಗಳನ್ನು ಹೊರಹಾಕಲಾದ ಮನೆ ಹಾಗೂ ಭೂಮಿಗಳಿಗೆ ವಾಪಸಾಗಲು ಅನುಮತಿಸುವಂತೆ ಇಸ್ರೇಲ್ ಮೇಲೆ ಒತ್ತಡ ಹೇರಲು ಗಾಝಾ ಪಟ್ಟಿಯಲ್ಲಿ ಫೆಲೆಸ್ತೀನಿಯರು ಸುಮಾರು ಏಳು ತಿಂಗಳುಗಳಿಂದ ಪ್ರತಿಭಟಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News