ಡಾ.ಪ್ರಮೋದ್ ಸಾವಂತ್ ಗೋವಾದ ಹೊಸ ಸಿಎಂ?

Update: 2018-10-25 10:12 GMT

ಪಣಜಿ, ಅ.25: ಗೋವಾ ಸಿಎಂ ಮನೋಹರ್ ಪಾರಿಕ್ಕರ್ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಗೋವಾ ಸ್ಪೀಕರ್ ಡಾ. ಪ್ರಮೋದ್ ಸಾವಂತ್ ರನ್ನು ಆಯ್ಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಪ್ರಭಾವಿ ಯುವ ಬಿಜೆಪಿ ನಾಯಕರಾಗಿರುವ ಸಾವಂತ್ ಎರಡು ಬಾರಿ ಶಾಸಕರಾದವರು ಹಾಗು ಈಗ ಗೋವಾದ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾವಂತ್ ರನ್ನು ಗೋವಾ ಸಿಎಂ ಆಗಿ ಆಯ್ಕೆ ಮಾಡಲು ಆರೆಸ್ಸೆಸ್ ನಾಯಕರು ಒತ್ತಡ ಹೇರಿದ್ದಾರೆ ಎನ್ನಲಾಗಿದ್ದು, ಇತ್ತೀಚೆಗಷ್ಟೇ ಸಾವಂತ್ ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ರನ್ನು ಭೇಟಿಯಾಗಿರುವುದು ಈ ಸುದ್ದಿಗೆ ಪುಷ್ಠಿ ನೀಡಿದೆ.

ನಾಗ್ಪುರದಲ್ಲಿ ಭಾಗವತ್ ರನ್ನು ಭೇಟಿಯಾಗಿದ್ದ ಸಾವಂತ್ ಈ ಬಗ್ಗೆ ಮಾತುಕತೆ ನಡೆಸಿದ್ದರು. ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಸಾವಂತ್ ರ ಜೊತೆಗಿದ್ದರು. ಈ ಇಬ್ಬರೂ ನಾಯಕರು ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಭಾಗವತ್ ರಿಗೆ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ವೃತ್ತಿಯಲ್ಲಿ ಡಾ.ಸಾವಂತ್ ಆಯುರ್ವೇದ ವೈದ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News