ಸೇವಾ ಭದ್ರತೆ, ಕನಿಷ್ಠ ಕೂಲಿಗೆ ಆಗ್ರಹ: ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ಧರಣಿ

Update: 2018-10-25 16:45 GMT

ಬೆಂಗಳೂರು, ಅ.25 : ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ಮತ್ತಿತರ ನ್ಯಾಯಬದ್ಧ ಹಕ್ಕುಗಳ ಈಡೇರಿಕೆಗಾಗಿ ಆಗ್ರಹಿಸಿ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ನಗರದ ಮೌರ್ಯ ವೃತ್ತದ ಬಳಿ ಪ್ರತಿಭಟನಾ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮುಖಂಡ ಡಾ.ಎಚ್.ವಿ.ವಾಸು, ಕೆಲಸದ ಜಾಗದಲ್ಲಿ ತಾರತಮ್ಯ, ಸಂಬಳದ ಅನಿಶ್ಚಿತತೆ, ಮೂರು ತಿಂಗಳ ಬಾಂಡ್, ವರ್ಷಕ್ಕೊಂದು ದಿನ ಬ್ರೇಕ್ ಇನ್ ಸರ್ವೀಸ್ ರೀತಿಯ ವಿವಿಧ ಅತಂತ್ರತೆಯೊಂದಿಗೆ ಸದಾಕಾಲ ಹತ್ತು ಹಲವು ರೀತಿಯ ಸಮಸ್ಯೆಗಳನ್ನು ಗುತ್ತಿಗೆ ನೌಕರರು ಎದುರಿಸ ಬೇಕಾಗುತ್ತದೆ. ಅಷ್ಟೇ ಅಲ್ಲದೆ, ಗುತ್ತಿಗೆಯಲ್ಲಿರುವವರು ಇದ್ದಕ್ಕಿದ್ದಂತೆ ಹೊರ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಆರೋಗ್ಯ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುತ್ತಿಗೆ ನೌಕರರು ದುಡಿಯುತ್ತಿದ್ದಾರೆ. ಆದರೆ, ಅವರು ಖಾಯಂ ನೌಕರರಷ್ಟೇ ಕೆಲಸ ಮಾಡಿದರೂ, ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ರಾಜ್ಯದಲ್ಲಿ ಗುತ್ತಿಗೆ ನೌಕರರ ನೀತಿ ಸಮರ್ಪಕವಾಗಿಲ್ಲ. ಹೀಗಾಗಿ, ಇಷ್ಟೆಲ್ಲಾ ಶೋಷಣೆ ನಡೆಯುತ್ತಿದೆ ಎಂದು ಹೇಳಿದರು.

ಸರಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ದಕ್ಷತೆ ಮತ್ತು ಸೇವೆಗಳ ಗುಣಮಟ್ಟ ಹೆಚ್ಚಿಸಬೇಕಾದ ಸರಕಾರಗಳು ಆರೋಗ್ಯ ಅಭಿಯಾನದ ಹೆಸರಿನಲ್ಲಿ ಕಾರ್ಮಿಕರನ್ನು ಶೋಷಣೆಗೆ ದೂಡುವ ಹೊರಗುತ್ತಿಗೆ, ಒಳಗುತ್ತಿಗೆಯಂತಹ ನೀತಿಗಳಿಗೆ ತಿದ್ಧುಪಡಿ ಮಾಡಿ ಉತ್ತೇಜಿಸಲಾಗುತ್ತಿದೆ. ಆರೋಗ್ಯ ವ್ಯವಸ್ಥೆ ಅಡಿಯಲ್ಲಿ ದುಡಿಯುತ್ತಿರುವ ಕಾರ್ಮಿಕರ ಪರವಾದ ವಾತಾವರಣ ಸೃಷ್ಟಿಸುವಲ್ಲಿ ಆಳುವ ವರ್ಗ ವಿಫಲವಾಗಿದೆ ಎಂದರು.

ನಮ್ಮನ್ನಾಳುತ್ತಿರುವ ಪ್ರಭುತ್ವಗಳು ಗುತ್ತಿಗೆ ನೌಕರರು ತಮ್ಮ ವೃತ್ತಿಯ ಭಡ್ತಿ ಪಡೆಯಲಿರುವ ಅವಕಾಶಗಳನ್ನು ಬಳಸಿಕೊಳ್ಳದಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ವಿವಿಧ ಶಿಫಾರಸ್ಸುಗಳಿಗೆ ಒಪ್ಪಿಗೆ ನೀಡಲಾಗುತ್ತಿದೆ. ಆ ಮೂಲಕ ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಬಿಟ್ಟುಕೊಡಲು ಮುಂದಾಗಿದ್ದಾರೆ ಎಂದು ವಾಸು ಹೇಳಿದರು.

ಬೇಡಿಕೆಗಳು: ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯ ಸರಕಾರದ ಆರೋಗ್ಯ ಕ್ಷೇತ್ರದ ಬಜೆಟ್‌ನಲ್ಲಿ ಶೇ.15 ರಷ್ಟು ನೀಡಬೇಕು. ಎಲ್ಲ ಗುತ್ತಿಗೆ ನೌಕರರಿಗೆ ನಿವೃತ್ತಿ ವಯಸ್ಸಿನ ವರೆಗೂ ಸೇವಾ ಭದ್ರತೆಯನ್ನು ನೀಡಬೇಕು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ವೇತನ ಮತ್ತು ಭತ್ತೆಗಳನ್ನು ಹಾಗೂ ವೇತನ ಶ್ರೇಣಿಯನ್ನು ಹರಿಯಾಣ ಮಾದರಿಯಲ್ಲಿ ರಚಿಸಬೇಕು. ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆಯನ್ನು ಜಾರಿ ಮಾಡಿ, ಭದ್ರತೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಹೊರಗುತ್ತಿಗೆಯಲ್ಲಿರುವ ಎಲ್ಲರಿಗೂ ಗುತ್ತಿಗೆದಾರರ ಮಧ್ಯವರ್ತಿತನವಿಲ್ಲದೇ ನೇರವಾಗಿ ಇಲಾಖೆಯಿಂದ ವೇತನ ನೀಡಬೇಕು. ಒಳಗುತ್ತಿಗೆಯಲ್ಲಿ ಕೆಲಸ ಮಾಡುವ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳು ಹೊರಗುತ್ತಿಗೆ ನೌಕರರಿಗೂ ಸಿಗಬೇಕು. ಗುತ್ತಿಗೆ ಪದ್ಧತಿ ಅಡಿಯಲ್ಲಿರುವ ಎಲ್ಲವನ್ನೂ ಖಾಯಂ ಮಾಡಬೇಕು. ಸರಕಾರಿ ನೌಕರರಿಗೆ ನೀಡಿರುವ ಜ್ಯೋತಿ ಸಂಜೀವಿನಿ ಯೋಜನೆಯನ್ನು ಗುತ್ತಿಗೆ ನೌಕರರಿಗೂ ನೀಡಬೇಕು. ಗುತ್ತಿಗೆ ನೌಕರರಿಗೆ ಸರಕಾರಿ ನೇಮಕಾತಿಗಳಲ್ಲಿ ವಯಸ್ಸಿನ ಮಿತಿಯನ್ನು ವಿಸ್ತರಿಸಬೇಕು, ಸೇವಾ ಅನುಭವಕ್ಕೆ ತಕ್ಕಂತೆ ಸೇವಾಂಕ ನೀಡಬೇಕು ಎಂದು ಆಗ್ರಹಿಸಿದರು.

ಖಾಯಂ ನೇಮಕಾತಿ ಕಾರಣ ಹೇಳಿ ಸ್ಥಳ ಬದಲಾವಣೆ ಮಾಡಬಾರದು. ತುರ್ತು ಘಟಕಗಳಲ್ಲಿ ಕಾರ್ಯನಿರ್ವಹಿಸುವವರಿಗೆ, ಗ್ರಾಮೀಣ ಸೇವೆ ಸಲ್ಲಿಸುವವರಿಗೆ, ಟಿಬಿ, ಎಚ್‌ಐವಿ ಸೇರಿದಂತೆ ಮಾರಕ ರೋಗಗಳ ನಿಯಂತ್ರಣ ಸೇವೆಯಲ್ಲಿರುವವರಿಗೆ ಹಾಗೂ ಆ್ಯಂಬುಲೆನ್ಸ್ ಸೇರಿದಂತೆ ಮತ್ತಿತರೆ ಪ್ರಮುಖ ಘಟಕಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ವಿಷೇಶ ಸೇವಾ ಭತ್ತೆ ನೀಡಬೇಕು ಸೇರಿದಂತೆ ಮತ್ತಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಧರಣಿನಿರತ ನೌಕರರು ಸರಕಾರವನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News