ಅಘೋಷಿತ ತುರ್ತುಪರಿಸ್ಥಿತಿ

Update: 2018-10-26 04:13 GMT

ಕೇಂದ್ರದ ಪಂಜರದ ಗಿಳಿಯೆಂದೇ ಕುಖ್ಯಾತಿ ಪಡೆದಿದ್ದ ಸಿಬಿಐ ಸಂಸ್ಥೆ ಅದನ್ನು ಮೀರುವ ಪ್ರಯತ್ನವನ್ನು ನಡೆಸಿದರೆ ಏನಾಗಬಹುದು ಎನ್ನುವುದಕ್ಕೆ ಮಂಗಳವಾರ ಮಧ್ಯ ರಾತ್ರಿಯ ಬೆಳವಣಿಗೆಯೇ ಸಾಕ್ಷಿ. ರಾತ್ರೋ ರಾತ್ರಿ ಸಿಬಿಐಗೆ ಭಾಗಶಃ ಬೀಗ ಬಿದ್ದಿದೆ. ರಫೇಲ್ ಹಗರಣದ ಕುರಿತಂತೆ ಆಸಕ್ತಿ ತೋರಿಸಿ ವರ್ಮಾ ಅವರನ್ನು ಸರಕಾರ ಸಂವಿಧಾನವನ್ನು ಉಲ್ಲಂಘಿಸಿ ಮನೆಗೆ ಕಳುಹಿಸಿದೆ. ಪ್ರಭಾರ ಸಿಬಿಐ ನಿರ್ದೇಶಕರನ್ನು ನೇಮಿಸಿದೆ.ಸಿಬಿಐ ಸಿಬ್ಬಂದಿಗಳ ಮೇಲೆ ಸರಕಾರ ಕಣ್ಗಾವಲು ಇಟ್ಟಿದೆ. ಅವರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡಿದೆ. ಮೇಲ್ನೋಟಕ್ಕೆ ಇಬ್ಬರು ಸಿಬಿಐ ಅಧಿಕಾರಿಗಳ ನಡುವಿನ ತಿಕ್ಕಾಟವೆಂದು ಬಿಂಬಿತವಾಗಿದ್ದ ಬೆಳವಣಿಗೆ ಅಂತಿಮವಾಗಿ ಸಿಬಿಐ ಸಂಸ್ಥೆ ಮತ್ತು ಸರಕಾರದ ನಡುವಿನ ತಿಕ್ಕಾಟವಾಗಿ ಮಾರ್ಪಟ್ಟಿದೆ. ರಾಕೇಶ್ ಅಸ್ತಾನಾ ಸಿಬಿಐಗೆ ನೇಮಕವಾದುದೇ ಸರಕಾರದ ಪರವಾಗಿ ಕಾರ್ಯನಿರ್ವಹಿಸಲು. ರಫೇಲ್ ಹಗರಣ ಒಂದಲ್ಲ ಒಂದು ದಿನ ಸಿಬಿಐಗೆ ವರ್ಗಾವಣೆಯಾಗುವ ಅಪಾಯವನ್ನು ಮುಂಚಿತವಾಗಿಯೇ ಕಂಡು, ಮೋದಿ ತಂಡ ಅಸ್ತಾನಾರನ್ನು ಸಿಬಿಐಗೆ ನೇಮಕ ಮಾಡಿತ್ತು. ಅಸ್ತಾನಾ ಅವರ ಮೇಲೆ ಈ ಹಿಂದೆಯೂ ಭ್ರಷ್ಟಾಚಾರದ ಆರೋಪಗಳಿದ್ದವು. ಸಿಬಿಐ ಸೇರಿದ ಬಳಿಕ, ಸರಕಾರದ ಗೂಢಚಾರನಂತೆ ಅಸ್ತಾನಾ ಕಾರ್ಯನಿರ್ವಹಿಸತೊಡಗಿದರು ಎನ್ನುವ ಆರೋಪಗಳಿವೆ. ಸರಕಾರಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ ಅಸಹಕಾರ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಕುಖ್ಯಾತ ಮಾಂಸ ರಫ್ತುದಾರನ ಕೈಯಿಂದ ಲಂಚ ಪಡೆದ ಆರೋಪದಲ್ಲಿ ಬಳಿಕ ಸಿಬಿಐ ಸಂಸ್ಥೆಯೇ ರಾಕೇಶ್ ಅಸ್ತಾನಾ ವಿರುದ್ಧ ತನಿಖೆ ನಡೆಸಲಾರಂಭಿಸಿತು. ಆದರೆ ತನ್ನ ಆಪ್ತನ ವಿರುದ್ಧ ತನಿಖೆ ನಡೆಸುವುದು ಸರಕಾರಕ್ಕೆ ಬೇಡವಾಗಿತ್ತು. ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಬೆನ್ನಿಗೆ ಸಂವಿಧಾನದತ್ತವಾದ ಅಧಿಕಾರವಿತ್ತು. ಅಸ್ತಾನಾರಿಗೆ ಸರಕಾರದೊಳಗಿರುವ ದೊಡ್ಡ ಜನರ ನಂಟಿತ್ತು. ಈ ದೇಶದ ಪ್ರಮುಖ ಹಗರಣಗಳನ್ನು ತನಿಖೆ ನಡೆಸುವ ಸಂಸ್ಥೆಯ ಒಬ್ಬ ಅಧಿಕಾರಿಯ ಮೇಲೆಯೇ ಲಂಚ ಪಡೆದ ಆರೋಪ ಬಂದರೆ, ಆತ ನಡೆಸುವ ತನಿಖೆ ವಿಶ್ವಾಸಾರ್ಹವಾಗುವುದು ಹೇಗೆ? ಈ ನಿಟ್ಟಿನಲ್ಲಿ ಅಸ್ತಾನಾನ ಮೇಲೆ ಆರೋಪ ಬಂದ ತಕ್ಷಣವೇ ಸರಕಾರ ಅವರನ್ನು ರಜೆಯ ಮೇಲೆ ಕಳುಹಿಸಬೇಕಾಗಿತ್ತು. ಆದರೆ ಸರಕಾರ ಆತನಿಗೆ ಬೆಂಬಲವಾಗಿ ನಿಂತಿತು. ಒಬ್ಬ ಲಂಚ ಆರೋಪಿಯ ಮೇಲೆ ಸರಕಾರವೇಕೆ ಇಷ್ಟು ಮೃದುವಾಗಬೇಕು? ಸರಕಾರವೂ ಈ ಲಂಚ ಹಗರಣದೊಳಗೆ ಭಾಗೀದಾರಿಕೆಯನ್ನು ಹೊಂದಿದೆಯೇ? ಇಲ್ಲವಾದರೆ ಈ ತನಿಖೆಗೆ ಸರಕಾರವೇಕೆ ಅಡ್ಡಿ ಪಡಿಸಬೇಕು? ಇದೀಗ ಇಬ್ಬರನ್ನೂ ರಜೆಯ ಮೇಲೆ ಕಳುಹಿಸುವ ಮೂಲಕ, ತನ್ನ ನಿಜವಾದ ತೊಡಕನ್ನು ನಿವಾರಿಸಲು ಕೇಂದ್ರ ಸರಕಾರ ಮುಂದಾಗಿದೆ.

ಅಲೋಕ್ ಕುಮಾರ್ ವರ್ಮಾ ಅವರು ತನ್ನ ಕೈಕೆಳಗಿನ ಅಧಿಕಾರಿಯ ವಿರುದ್ಧ ಮಾಡಿದ ಆರೋಪ, ವೈಯಕ್ತಿಕ ಜಟಾಪಟಿಯಾಗುವುದು ಹೇಗೆ? ಈಗಾಗಲೇ ಅಸ್ತಾನಾ ವಿರುದ್ಧ ಸಂತ್ರಸ್ತ ತನ್ನ ದೂರನ್ನು ಸಲ್ಲಿಸಿದ್ದಾರೆ. ಸಿಬಿಐ ಮುಖ್ಯಸ್ಥರಾಗಿ ಈ ಬಗ್ಗೆ ವಿಚಾರಣೆ ನಡೆಸುವುದು ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯವೆಂದು ಯಾಕೆ ಭಾವಿಸಬೇಕು? ಅಸ್ತಾನಾ ಅವರನ್ನು ರಜೆಯ ಮೇಲೆ ಮನೆಗೆ ಕಳುಹಿಸುವುದೇನೋ ಸರಿ. ಆದರೆ ತನ್ನ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಉಳಿಸಲು ಹವಣಿಸಿದ ಅಲೋಕ್ ವರ್ಮಾ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲು ಕಾರಣವೇನು? ಇದರಿಂದ ಸಮಸ್ಯೆ ಹೇಗೆ ಪರಿಹಾರವಾದಂತಾಯಿತು? ಸರಕಾರಕ್ಕೆ ಅಸ್ತಾನಾ ನೆಪದಲ್ಲಿ ಅಲೋಕ್ ವರ್ಮಾ ಅವರನ್ನು ಮನೆಗೆ ಕಳುಹಿಸಬೇಕಾಗಿದೆ. ರಫೇಲ್ ಹಗರಣದ ಕುರಿತಂತೆ ಇತ್ತೀಚೆಗೆ ವರ್ಮಾ ಅವರು ಹೆಚ್ಚು ಆಸಕ್ತಿ ವಹಿಸಿದ್ದರು ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಕಲೆಹಾಕುತ್ತಿದ್ದರು. ರಫೇಲ್ ಹಗರಣವನ್ನು ಸಿಬಿಐ ಏನಾದರೂ ಗಂಭೀರವಾಗಿ ಸ್ವೀಕರಿಸಿದರೆ ಅದು ಹಲವು ತಲೆಗಳನ್ನು ಉರುಳಿಸಬಹುದು ಎನ್ನುವ ಆತಂಕ ಸರಕಾರಕ್ಕಿದೆ. ಈ ನಿಟ್ಟಿನಲ್ಲಿ ಅಸ್ತಾನಾ ವಿವಾದವನ್ನು ಸಿಬಿಐಯೊಳಗಿರುವ ಸಮನ್ವಯತೆಯ ಕೊರತೆ ಎಂದು ಬಿಂಬಿಸಿ ಇಬ್ಬರನ್ನೂ ಮನೆಗೆ ಕಳುಹಿಸುವ ಮೂಲಕ ತನ್ನ ತಲೆಯನ್ನು ಉಳಿಸುವ ಯತ್ನ ಮಾಡಿದೆ. ಸಿಬಿಐ ಮುಖ್ಯಸ್ಥರ ಮೇಲೆ ನೇರವಾಗಿ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೇಂದ್ರ ಸರಕಾರಕ್ಕಿಲ್ಲ. ಹೀಗಿದ್ದರೂ ರಾತ್ರೋ ರಾತ್ರಿ ಕಾರ್ಯಾಚರಣೆ ಎಸಗಿದೆಯೆಂದರೆ, ಸರಕಾರ ಅಲೋಕ್ ವರ್ಮಾ ಕುರಿತಂತೆ ಸಾಕಷ್ಟು ಹೆದರಿದೆ ಎನ್ನುವುದು ಸಾಬೀತಾಗುತ್ತದೆ. ಮೊನ್ನೆ ಮೊನ್ನೆಯವರೆಗೂ ಸರಕಾರ ತನ್ನ ವಿರೋಧಿಗಳನ್ನು ದಮನಿಸಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳಿದ್ದವು. ದೇಶಾದ್ಯಂತ ನಡೆದ ಬೇರೆ ಬೇರೆ ದಾಳಿಗಳನ್ನು ಗಮನಿಸಿದಾಗ, ಆರೋಪಗಳಲ್ಲಿ ಭಾಗಶಃ ಸತ್ಯವಿರುವುದು ಎದ್ದು ಕಾಣುತ್ತಿತ್ತು. ಇದೀಗ, ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ತನ್ನ ವಿರುದ್ಧ ಪಂಜ ಎತ್ತಲು ಸಿದ್ಧವಾಗುತ್ತಿದ್ದ ಸಿಬಿಐ ಸಂಸ್ಥೆಯನ್ನೇ ಮುಗಿಸಲು ಹೊರಟಿದೆ. ಈ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಮೇಲೆ ಇಂತಹದೊಂದು ದಾಳಿ ಸರಕಾರದಿಂದ ನಡೆಯುತ್ತಿರುವುದು ಇದೇ ಮೊದಲ ಬಾರಿ. ದೇಶದಲ್ಲಿ ಪ್ರಜಾಸತ್ತಾತ್ಮಕ ಆಡಳಿತ ಜಾರಿಯಲ್ಲಿಲ್ಲ ಎನ್ನುವುದನ್ನು ಇದು ಪರೋಕ್ಷವಾಗಿ ಸಾರುತ್ತಿದೆ. ಇದರ ಜೊತೆ ಜೊತೆಗೇ, ವರ್ಮಾ ಅವರ ನಿವಾಸದ ಮೇಲೆ ಗುಪ್ತಚರ ಅಧಿಕಾರಿಗಳನ್ನು ಕಾವಲು ಇಡಲು ಹೋಗಿ ಸರಕಾರ ಇನ್ನಷ್ಟು ಮುಖಭಂಗಕ್ಕೊಳಗಾಗಿದೆ. ಅವರ ನಿವಾಸದ ಎದುರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ವರು ಗುಪ್ತಚರ ಸಿಬ್ಬಂದಿಯನ್ನು ಬಂಧಿಸಲಾಗಿದೆ. ವರ್ಮಾ ಅವರ ನಿವಾಸದ ಮೇಲೆ ಗೂಢಚಾರಿಕೆ ಮಾಡಬೇಕಾದಂತಹ ಸ್ಥಿತಿ ಸರಕಾರಕ್ಕೆ ಯಾಕೆ ಬಂತು? ಗುಪ್ತಚರ ಸಿಬ್ಬಂದಿಯನ್ನು ಅಲ್ಲಿಗೆ ಕಳುಹಿಸಿದವರು ಯಾರು? ಎನ್ನುವ ಪ್ರಶ್ನೆಗೂ ಸರಕಾರ ಉತ್ತರಿಸಬೇಕಾಗಿದೆ. ಬರೇ ನಾಲ್ಕು ವರ್ಷಗಳಲ್ಲಿ ಈ ದೇಶದ ಆರ್ಥಿಕತೆಯನ್ನು ಸಂಪೂರ್ಣವಾಗಿ ನಾಶ ಮಾಡಿರುವ ಮೋದಿ ಸರಕಾರ, ಪ್ರಜಾಸತ್ತಾತ್ಮಕವಾದ ಹಲವು ವ್ಯವಸ್ಥೆಗಳನ್ನು ದುರ್ಬಲಗೊಳಿಸಿದೆ. ಸೇನೆಯ ಆಂತರಿಕ ವಿಷಯದೊಳಗೆ ಮೂಗು ತೂರಿಸಿ ಸೇನೆಯನ್ನೇ ತನ್ನ ರಾಜಕೀಯಕ್ಕೆ ಬಳಸಿಕೊಂಡಿತು. ನ್ಯಾಯಾಂಗದಲ್ಲೂ ಹಸ್ತಕ್ಷೇಪ ನಡೆಸಿತು. ತನ್ನ ಮೂಗಿನ ನೇರಕ್ಕಿರುವ ನ್ಯಾಯಮೂರ್ತಿಯನ್ನು ಉನ್ನತ ಸ್ಥಾನದಲ್ಲಿ ಕುಳ್ಳಿರಿಸುವಲ್ಲಿ ಯಶಸ್ವಿಯಾಯಿತು. ತನ್ನ ವಿರುದ್ಧ ಮಾತನಾಡಿದ ಪತ್ರಿಕೆಗಳು, ಟಿವಿ ಚಾನೆಲ್‌ಗಳಿಗೆ ಬೆದರಿಕೆಯನ್ನು ಒಡ್ಡಿತು. ಐಟಿ ಅಧಿಕಾರಿಗಳನ್ನು ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಬಳಸಿಕೊಂಡಿತು. ಹೀಗೆ ಎಲ್ಲ ವಲಯಗಳನ್ನೂ ದುರ್ಬಲಗೊಳಿಸುತ್ತಾ, ದುರುಪಯೋಗಗೊಳಿಸುತ್ತಾ, ಭ್ರಷ್ಟಗೊಳಿಸುತ್ತಾ ಸಾಗಿದ ಮೋದಿ ಸರಕಾರ, ಇದೀಗ ತನ್ನ ಮಿತಿಯಲ್ಲೂ ಹಲವು ಅಕ್ರಮಗಳನ್ನು ಬಯಲುಗೊಳಿಸಿದ ಸಿಬಿಐಯಂತಹ ಉನ್ನತ ಸಂಸ್ಥೆಯನ್ನೇ ನಾಶ ಮಾಡಲು ಮುಂದಾಗಿದೆ. ಇದು ಆಳುವ ಪಕ್ಷ ನಡೆಸುವ ಭ್ರಷ್ಟಾಚಾರ, ಹಗರಣಗಳನ್ನು ಕಾನೂನು ಬದ್ಧಗೊಳಿಸುವ ಸರಕಾರದ ಪ್ರಯತ್ನವಾಗಿದೆ. ದೇಶಕ್ಕಿಂತ ವ್ಯಕ್ತಿ ದೊಡ್ಡವನು ಎನ್ನುವುದನ್ನು ಈ ಎಲ್ಲ ಬೆಳವಣಿಗೆಗಳು ಹೇಳುತ್ತಿವೆ. ಮುಂದಿನ ದಿನಗಳಲ್ಲಿ ‘ರಾ’ದಂತಹ ಸಂಸ್ಥೆಗಳನ್ನೂ ತನಗೆ ಬೇಕಾದಂತೆ ನಡೆಸಿಕೊಳ್ಳುವುದರ ಪೂರ್ವಸೂಚನೆಯಾಗಿದೆ. ಇಷ್ಟೆಲ್ಲ ನಡೆದ ಮೇಲೂ ಈ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗಿಲ್ಲ ಎನ್ನುವುದನ್ನು ಜನರು ನಂಬುವುದಾದರೂ ಹೇಗೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News