ಕೇಂದ್ರ ಸರಕಾರದಿಂದ ಸಿಬಿಐ ನಿಷ್ಕ್ರಿಯ: ಕೆ.ಸಿ.ವೇಣುಗೋಪಾಲ್

Update: 2018-10-26 12:41 GMT

ಬೆಂಗಳೂರು, ಅ.26: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರಕಾರವು ಕೇಂದ್ರೀಯ ತನಿಖಾ ದಳ(ಸಿಬಿಐ)ವನ್ನು ನಿಷ್ಕ್ರಿಯಗೊಳಿಸಿದ್ದು, ಕಾಂಗ್ರೆಸ್ ಪಕ್ಷವು ಈ ಸಂಬಂಧ ಸುಪ್ರೀಂಕೋರ್ಟ್ ಮೊರೆ ಹೋಗಿ, ಕಾನೂನು ಹೋರಾಟ ನಡೆಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿದರು.

ಶುಕ್ರವಾರ ನಗರದ ಹೆಬ್ಬಾಳ ಸಮೀಪವಿರುವ ಗಂಗಾನಗರದಲ್ಲಿರುವ ಸಿಬಿಐ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಫೇಲ್ ಡೀಲ್ ಹಗರಣವನ್ನು ಮುಚ್ಚಿ ಹಾಕಲು ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರಮೋದಿ, ಸಿಬಿಐ ನಿರ್ದೇಶಕರನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿದ್ದಾರೆ. ಆ ಮೂಲಕ ರಫೇಲ್ ಡೀಲ್ ಹಗರಣವನ್ನು ಅವರು ಒಪ್ಪಿಕೊಂಡಂತಾಗಿದೆ ಎಂದು ವೇಣುಗೋಪಾಲ್ ಹೇಳಿದರು.

ಕೇಂದ್ರ ಸರಕಾರ ಈ ಕೂಡಲೆ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾರನ್ನು ಅವರ ಜಾಗಕ್ಕೆ ಮರು ನಿಯುಕ್ತಿಗೊಳಿಸಬೇಕು. ಹಗರಣದಿಂದ ತಪ್ಪಿಸಿಕೊಳ್ಳಲು ನಡೆಯುತ್ತಿರುವ ಈ ಪ್ರಯತ್ನವನ್ನು ಕೇಂದ್ರ ಸರಕಾರ ಕೈ ಬಿಡಲಿ ಎಂದು ಅವರು ಹೇಳಿದರು.

ನರೇಂದ್ರಮೋದಿ ಸರಕಾರ ಸಿಬಿಐ ಅನ್ನು ದುರ್ಬಲಗೊಳಿಸುತ್ತಿದೆ. ರಾತ್ರೋರಾತ್ರಿ ಸಿಬಿಐ ನಿರ್ದೇಶಕರನ್ನು ಬದಲಾಯಿಸಿದ್ದು, ಮೊದಲ ಹಾಗೂ ಎರಡನೆ ಸ್ಥಾನದ ಅಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಮೂರನೆ ಸ್ಥಾನದ ಅಧಿಕಾರಿಗೆ ಹಂಗಾಮಿ ನಿರ್ದೇಶಕನ ಸ್ಥಾನ ನೀಡಿರುವುದು ಏಕೆ ಎಂದು ಅವರು ಪ್ರಶ್ನಿಸಿದರು.

ರಾತ್ರೋರಾತ್ರಿ 10 ಮಂದಿ ಸಿಬಿಐ ಉನ್ನತಾಧಿಕಾರಿಗಳನ್ನು ವರ್ಗಾವಣೆ ಗೊಳಿಸಲಾಗಿದೆ. ಸಿಬಿಐ ಇತಿಹಾಸದಲ್ಲೇ ಇಂತಹ ಘಟನೆ ಎಂದಿಗೂ ನಡೆದಿರಲಿಲ್ಲ. ಕೇಂದ್ರ ಸರಕಾರವು ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸ್ವಾಯತ್ತ ಸಂಸ್ಥೆಯಾಗಿರುವ ಸಿಬಿಐಯನ್ನು ದುರ್ಬಲಗೊಳಿಸುತ್ತಿದೆ ಎಂದು ವೇಣುಗೋಪಾಲ್ ಹೇಳಿದರು.

ಸಿಬಿಐ ಆಡಳಿತದಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪವನ್ನು ಒಪ್ಪಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ಸರಕಾರದ ನೀತಿಯನ್ನು ಪ್ರಶ್ನಿಸುತ್ತೇವೆ. ಕಾನೂನಿನ ಚೌಕಟ್ಟಿನಲ್ಲಿ ನಾವು ಹೋರಾಟವನ್ನು ಮುಂದುವರೆಸುತ್ತೇವೆ. ಜನಸಾಮಾನ್ಯರ ಬಳಿಯೂ ಈ ವಿಷಯವನ್ನು ಕೊಂಡೊಯ್ಯಲಾಗುವುದು ಎಂದು ಅವರು ತಿಳಿಸಿದರು.

ಪೊಲೀಸರ ತಡೆ: ಕಾಂಗ್ರೆಸ್ ಕಾರ್ಯಕರ್ತರು ಸಿಬಿಐ ಕಚೇರಿ ಆವರಣದೊಳಗೆ ಪ್ರವೇಶಿಸಲು ಸಾಧ್ಯವಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದರಿಂದಾಗಿ, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಿಬಿಐ ಕಚೇರಿ ಒಳಗೆ ನುಗ್ಗುವ ಪ್ರಯತ್ನ ವಿಫಲವಾಯಿತು.

ಆನಂತರ, ಗಂಗಾನಗರದ ರಸ್ತೆಯಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿ, ಕೇಂದ್ರ ಸರಕಾರ, ಪ್ರಧಾನಿ ನರೇಂದ್ರಮೋದಿಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಪ್ರತಿಭಟನೆಯಲ್ಲಿ ನಗರದ ಯಾವೊಬ್ಬ ಶಾಸಕರೂ ಪಾಲ್ಗೊಳ್ಳದೆ ಇದ್ದದ್ದು ಎದ್ದು ಕಾಣುತ್ತಿತ್ತು.

ದೇಶಾದ್ಯಂತ ಸಿಬಿಐ ಕಚೇರಿ ಮುಂದೆ ಕಾಂಗ್ರೆಸ್ ಧರಣಿ ಮಾಡುವಂತೆ ಎಐಸಿಸಿ ಕರೆ ನೀಡಿತ್ತು. ಅದರಂತೆ, ಬೆಂಗಳೂರಿನ ಗಂಗಾನಗರದಲ್ಲಿರುವ ಸಿಬಿಐ ಕಚೇರಿ ಮುಂದೆ ಕೆಪಿಸಿಸಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು ಸ್ವತಃ ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಿದ್ದರು. ಆದರೆ, ನಗರದ ಯಾವ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಯಾವ ಪ್ರಮುಖ ಮುಖಂಡರು ಪಾಲ್ಗೊಳ್ಳದಿರುವುದು ಅಚ್ಚರಿಗೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News