ಉಪ ಚುನಾವಣೆ: ಶಕ್ತಿಕೇಂದ್ರ ವಿಧಾನಸೌಧ ಖಾಲಿ ಖಾಲಿ..!

Update: 2018-10-26 12:27 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ. 26: ರಾಜ್ಯದಲ್ಲಿ ಉಪ ಚುನಾವಣೆ ಕಾವೇರುತ್ತಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಸಚಿವರು-ಶಾಸಕರು ಪ್ರಚಾರದ ಅಖಾಡಕ್ಕಿಳಿದಿರುವ ಪರಿಣಾಮ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧ ಬಹುತೇಕ ಖಾಲಿಯಾಗಿದೆ.

ಹೀಗಾಗಿ ಅಹವಾಲು ಸಲ್ಲಿಸಲು ದೂರದ ಊರುಗಳಿಂದ ವಿಧಾನಸೌಧಕ್ಕೆ ಆಗಮಿಸುವ ಸಾರ್ವಜನಿಕರು ಸಚಿವರ ಖಾಲಿ ಕೊಠಡಿಗಳ ದರ್ಶನ ಪಡೆದು ‘ಬಂದ ದಾರಿಗೆ ಸುಂಕವಿಲ್ಲ’ ಎಂಬಂತೆ ಹಿಂದಿರುತ್ತಿದ್ದಾರೆ. ಉಪ ಚುನಾವಣಾ (ನ.3) ಆಗುವವರೆಗೂ ಸಚಿವರು ಕಚೇರಿಗೆ ಬರುವುದಿಲ್ಲ ಎಂಬ ಮಾತು ಶಕ್ತಿಕೇಂದ್ರದಲ್ಲಿ ಸಾಮಾನ್ಯ ಎಂಬಂತಾಗಿದೆ.

ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದ ಯಾವೊಬ್ಬ ಸಚಿವರೂ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಚುನಾವಣಾ ಪ್ರಚಾರದಲ್ಲಿ ಮುಳುಗಿರುವ ಸಚಿವರು ಸಾರ್ವಜನಿಕರನ್ನು ಮರೆತಂತೆ ಕಾಣುತ್ತಿದೆ.

ಸಚಿವರು, ಶಾಸಕರು, ಸಾರ್ವಜನಿಕರು ಹಾಗೂ ಅಧಿಕಾರಿ-ಸಿಬ್ಬಂದಿಗಳಿಂದ ಸದಾ ಗಿಜಿಗುಡುತ್ತಿದ್ದ ಶಕ್ತಿಕೇಂದ್ರ ವಿಧಾನಸೌಧ ಕಳೆದ ಒಂದು ವಾರದಿಂದ ಸಚಿವರು, ಶಾಸಕರಿಲ್ಲದೆ ಬಣಗುಡುತ್ತಿದೆ. ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿಯೂ ಯಾವೊಬ್ಬ ಸಚಿವರೂ ಇಲ್ಲ.

ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ನಿನ್ನೆ(ಅ.25) ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್, ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದು ಬಿಟ್ಟರೆ, ಯಾವೊಬ್ಬ ಸಚಿವರೂ ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News