ಬುಲೆಟ್ ರೈಲು ಯೋಜನೆ ಭೂಸ್ವಾಧೀನ ಪ್ರಕ್ರಿಯೆ ಡಿಸೆಂಬರ್‌ನೊಳಗೆ ಪೂರ್ಣ: ಪಿಯೂಷ್ ಗೋಯಲ್

Update: 2018-10-26 13:36 GMT

ಮುಂಬೈ, ಅ.26: ದೇಶದ ಪ್ರಪ್ರಥಮ ಬುಲೆಟ್ ಟ್ರೈನ್ ಯೋಜನೆ (ಮುಂಬೈ-ಅಹ್ಮದಾಬಾದ್)ಗೆ ಭೂಸ್ವಾಧೀನ ಪ್ರಕ್ರಿಯೆ ಈ ವರ್ಷದ ಡಿಸೆಂಬರ್‌ನೊಳಗೆ ಪೂರ್ಣಗೊಳ್ಳಲಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಅಲ್ಲದೆ ಆಗ್ರಾ-ವಾರಣಾಸಿ, ದಿಲ್ಲಿ-ಚಂಡೀಗಢ, ಮುಂಬೈ-ಬೆಂಗಳೂರು ಸೇರಿದಂತೆ ಐದು ಹೈಸ್ಪೀಡ್ ರೈಲ್ವೇ ಕಾರಿಡಾರ್‌ಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.

‘ದಿ ಇಕನಾಮಿಸ್ಟ್ ಇಂಡಿಯಾ’ ಶೃಂಗಸಭೆಯಲ್ಲಿ ಪಾಲ್ಗೊಂಡು ಆವರು ಮಾತನಾಡಿದರು. ಜಮೀನಿನ ಮಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಗೆ ಭೂಮಿಯನ್ನು ಬಿಟ್ಟುಕೊಡುವಂತೆ ಮನ ಒಲಿಸುತ್ತಿದ್ದೇವೆ. ಇದರಿಂದ ಸ್ವಲ್ಪ ವಿಳಂಬವಾದರೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಯಿಂದಾಗಿ ನಿಗದಿತ ಅವಧಿಯಲ್ಲೇ ಬುಲೆಟ್ ಟ್ರೈನ್ ಯೋಜನೆ ಕಾರ್ಯಾರಂಭ ಮಾಡಲಿದೆ. ಯೋಜನೆಯ ಅಂಗವಾಗಿ 27 ಕಿ.ಮೀ. ಉದ್ದದ ಭೂಗತ ಸುರಂಗ ನಿರ್ಮಿಸಲು ಅಗತ್ಯವಿರುವ ಯಂತ್ರಗಳನ್ನು ರೂಪಿಸಿ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದರು.

ಜಪಾನ್‌ನ ತಾಂತ್ರಿಕ ಮತ್ತು ಆರ್ಥಿಕ ನೆರವು ಪಡೆದುಕೊಂಡು ಮುಂಬೈ-ಅಹ್ಮದಾಬಾದ್ ಬುಲೆಟ್ ಟ್ರೈನ್ ಕಾರಿಡಾರ್ ಯೋಜನೆಯ ಕಾರ್ಯವನ್ನು ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಶನ್ ನಿರ್ವಹಿಸಲಿದೆ. ಕೆಲವು ಕಲ್ಲಿದ್ದಲು ಸಾಗಾಟದ ರೈಲು ಮಾರ್ಗಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗಿದೆ. ಕೆಲವು ಪೂರ್ಣಗೊಳ್ಳುವ ಹಂತದಲ್ಲಿದೆ. ಇದರಿಂದ ಕಲ್ಲಿದ್ದಲು ಸಾಗಣೆಯ ಸಮಸ್ಯೆ ಬಹುಮಟ್ಟಿಗೆ ಕಡಿಮೆಯಾಗಿದೆ ಎಂದ ಸಚಿವ ಗೋಯಲ್, ಈಗ 700 ರೈಲ್ವೇ ನಿಲ್ದಾಣಗಳಲ್ಲಿರುವ ಉಚಿತ ವೈಫೈ ಸೇವೆಯನ್ನು 5,300 ನಿಲ್ದಾಣಗಳಿಗೆ ವಿಸ್ತರಿಸುವ ಯೋಜನೆಯಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News