ಜಸ್ಟಿಸ್ ಲೋಯಾ ಸಾವು ಪ್ರಕರಣ: ಇಬ್ಬರು ನ್ಯಾಯಾಧೀಶರ ಹೇಳಿಕೆಗೆ ತಾಳೆಯಾಗದ ರವಿ ಭವನ್ ಸಿಬ್ಬಂದಿಯ ಹೇಳಿಕೆ

Update: 2018-10-27 07:17 GMT

ಮುಂಬೈ, ಅ.27: ಶಂಕಾಸ್ಪದವಾಗಿ ಮೃತಪಟ್ಟ ಸಿಬಿಐ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಬಿ.ಎಚ್. ಲೋಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಮಾಹಿತಿಯೊಂದು ಲಭ್ಯವಾಗಿದೆ. ಜಸ್ಟಿಸ್ ಲೋಯಾ ತಂಗಿದ್ದರೆಂದು ಹೇಳಲಾದ ನಾಗ್ಪುರದ ರವಿ ಭವನ್ ಗೆಸ್ಟ್ ಹೌಸಿನ ರೂಂ ಸರ್ವಿಸ್ ಸಿಬ್ಬಂದಿಯೊಬ್ಬರು ಪೊಲೀಸರಿಗೆ ನೀಡಿದ ಹೇಳಿಕೆಯೊಂದು ಮುಂಬೈಯಿಂದ ನಾಗ್ಪುರಕ್ಕೆ ಜಸ್ಟಿಸ್ ಲೋಯಾ ಜತೆಗೆ ಬಂದಿದ್ದರೆಂದು ಹೇಳಲಾಗಿರುವ ಇಬ್ಬರು ನ್ಯಾಯಾಧೀಶರ ಹೇಳಿಕೆಗಿಂತ ವ್ಯತಿರಿಕ್ತವಾಗಿದೆ. ವಾಸ್ತವವಾಗಿ ಈ ಇಬ್ಬರು ನ್ಯಾಯಾಧೀಶರ ಹೇಳಿಕೆಗಳ ಆಧಾರದಲ್ಲಿಯೇ ಲೋಯಾ ಅವರು ಸಹಜ ಸಾವನ್ನಪ್ಪಿದ್ದರೆಂಬ ಮಹಾರಾಷ್ಟ್ರ  ಸರಕಾರದ ವಾದವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿತ್ತು.

ತಾವು ಲೋಯಾ ಜತೆಗೆ ಮುಂಬೈಯಿಂದ ರಾತ್ರಿ ರೈಲಲ್ಲಿ ನಾಗ್ಪುರಕ್ಕೆ ಹೊರಟಿದ್ದಾಗಿ ಇಬ್ಬರು ನ್ಯಾಯಾಧೀಶರುಗಳಾದ ಶ್ರೀಕಾಂತ್ ಕುಲಕರ್ಣಿ ಮತ್ತು ಎಸ್.ಎಂ. ಮೋದಕ್ ಹೇಳಿದ್ದರಲ್ಲದೆ, ನಾಗ್ಪುರಕ್ಕೆ ನವೆಂಬರ್ 30, 2014ರಂದು ಬೆಳಗ್ಗೆ ತಲುಪಿದ ಕೂಡಲೇ ಸರಕಾರಿ ಗೆಸ್ಟ್ ಹೌಸ್  ರವಿ ಭವನ್‍ಗೆ ತೆರಳಿದ್ದಾಗಿ ತಿಳಿಸಿದ್ದರು. ಆದರೆ ರವಿ ಭವನ್‍ನ ರೂಂ ಸರ್ವಿಸ್ ಸಿಬ್ಬಂದಿ ತಿಲಕ್ ನಾರಾಯಣ್ ನಾಗ್ಪುರ  ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ ಆ ದಿನ ಅಪರಾಹ್ನದ ತನಕ ಆತ ಕರ್ತವ್ಯದಲ್ಲಿದ್ದಷ್ಟು ಸಮಯ ಯಾವುದೇ ನ್ಯಾಯಾಧೀಶರು ರವಿ ಭವನ್‍ಗೆ ಬಂದಿರಲಿಲ್ಲ.

ಜಸ್ಟಿಸ್ ಲೋಯಾ ಪ್ರಕರಣವನ್ನು ತನಿಖೆ ನಡೆಸುವಂತೆ ನಾಗ್ಪುರದ ಅಜ್ನಿ ಪೊಲೀಸ್ ಠಾಣೆಗೆ  ಆದೇಶಿಸಬೇಕೆಂದು ಕೋರಿ ನಾಗ್ಪುರ ಜಿಲ್ಲಾ ನ್ಯಾಯಾಲಯಕ್ಕೆ ವಕೀಲ ಮತ್ತು ಹೋರಾಟಗಾರ ಸತೀಶ್ ಉಕೆ ಎಂಬವರು ಸಲ್ಲಿಸಿದ ಅಪೀಲಿನ ಜತೆಗೆ ಲಗತ್ತಿಸಲಾದ ಹಲವು ದಾಖಲೆಗಳಲ್ಲಿ ತಿಲಕ್ ನಾರಾಯಣ್ ಪೊಲೀಸರಿಗೆ ನವೆಂಬರ್ 23, 2017ರಂದು ನೀಡಿದ ಈ ಹೇಳಿಕೆಯೂ ಕೂಡ ಸೇರಿದೆ. ತಿಲಕ್ ನಾರಾಯಣ್ ಹೇಳಿಕೆಯು ಇಬ್ಬರು ನ್ಯಾಯಾಧೀಶರುಗಳ ಹೇಳಿಕೆಯ ಸತ್ಯಾಸತ್ಯತೆಯ ಮೇಲೆ ಸಂಶಯ ಮೂಡಿಸುತ್ತದೆಯೆಲ್ಲದ ಮಹಾರಾಷ್ಟ್ರ ಸರಕಾರ ಈ ಮಹತ್ವದ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಮುಂದೆ ಉದ್ದೇಶಪೂರ್ವಕವಾಗಿ ಇಟ್ಟಿಲ್ಲ ಎಂಬುದನ್ನೂ ಸ್ಪಷ್ಟ ಪಡಿಸುತ್ತದೆ.

ಲೋಯಾ ಸಾವಿನ ದಿನ ನಡೆದ ಘಟನಾವಳಿಗಳು ಕುಲಕರ್ಣಿ, ಮೋದಕ್ ಸಹಿತ ವಿ ಸಿ ಬರ್ದೆ ಹಾಗೂ ರೂಪೇರ್ಶ ರಥಿ ಎಂಬ ನ್ಯಾಯಾಧೀಶರುಗಳು ಹೇಳಿಕೆಯ ಮೇಲೆ ಆಧರಿತವಾಗಿದೆ. ತಾವು ಲೋಯಾ ಜತೆ ಅವರ ಸಾವಿನ ಸಂದರ್ಭ ಇದ್ದುದಾಗಿ ಅವರು ಹೇಳಿದ್ದರು. ಆವರ ಹೇಳಿಕೆಗಳನ್ನೇ  ಮಹಾರಾಷ್ಟ್ರ ರಾಜ್ಯ ಗುಪ್ತಚರ ಇಲಾಖೆಗೆ ಸಲ್ಲಿಸಲಾಗಿತ್ತು.  ಗುಪ್ತಚರ ಇಲಾಖೆ ತನ್ನ ‘ಗೌಪ್ಯ ತನಿಖೆ'ಯ ವರದಿಯನ್ನು ಮಹಾರಾಷ್ಟ್ರ ಸರಕಾರಕ್ಕೆ ಸಲ್ಲಿಸಿದ್ದರೆ ಮುಂದೆ ಲೋಯಾ ಸಾವು ಪ್ರಕರಣದ ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಸಲಾದ ಅಪೀಲುಗಳ ವಿಚಾರಣೆ ವೇಳೆಗೆ ಇದೇ ವರದಿಯನ್ನು ಸರಕಾರ ಸುಪ್ರೀಂ ಕೋರ್ಟಿನ ಮುಂದೆ ಇರಿಸಿತ್ತು.

ಆಗಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮೀಶ್ರಾ ನೇತೃತ್ವದ ಹಾಗೂ ಜಸ್ಟಿಸ್ ಎ.ಎಂ. ಖನ್ವಿಲ್ಕರ್,  ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಮಹಾರಾಷ್ಟ್ರ ರಾಜ್ಯ ಗುಪ್ತಚರ ಇಲಾಖೆಯ ವರದಿಯಂತೆ ಲೋಯಾ ಹೃದಯಾಘಾತದಿಂದ ಸಾವನ್ನಪ್ಪಿದ್ದರೆಂಬ ಅಂಶವನ್ನು ಎತ್ತಿ ಹಿಡಿದಿತ್ತು. ಈ ಗುಪ್ತಚರ ಇಲಾಖೆಯ ವರದಿ ನಾಲ್ಕು ಮಂದಿ ನ್ಯಾಯಾಧೀಶರುಗಳ ಹೇಳಿಕೆಯ ಆಧಾರದಲ್ಲಿಯೇ ಮೂಡಿ ಬಂದಿತ್ತು.

ಮಹಾರಾಷ್ಟ್ರ ಸರಕಾರ ಲೋಯಾ ಪ್ರಕರಣದ `ಗೌಪ್ಯ ತನಿಖೆ'ಗೆ ಆದೇಶಿಸಿದ ದಿನದಂದೇ ತಿಲಕ್ ನಾರಾಯಣ್ ತಮ್ಮ ಹೇಳಿಕೆಯನ್ನು ಸದರ್ ಪೊಲೀಸ್ ಠಾಣೆಯಲ್ಲಿ ನೀಡಿದ್ದರು. ನಾರಾಯಣ್ ಪ್ರಕಾರ ನವೆಂಬರ್ 30, 2014ರ ದಿನಕ್ಕೆ  ಕೊಠಡಿ ಸಂಖ್ಯೆ, 2, 3,5, 10 ಹಾಗೂ 20 ಹೀಗೆ ಐದು ಕೊಠಡಿಗಳನ್ನು ಕಾದಿರಿಸಲಾಗಿತ್ತು. ``ಆ ದಿನ ನನ್ನ ಕರ್ತವ್ಯ ಬೆಳಗ್ಗಿನ ಅವಧಿಯಲ್ಲಿತ್ತು. ಹೈಕೋರ್ಟ್ ಸಿಬ್ಬಂದಿ ಹಾಜರಿದ್ದರು.  ಆಗ ನಾನು ಅವರಿಗೆ ಕೊಠಡಿಗಳ ಕೀಲಿಕೈಗಳನ್ನು ನೀಡಿದ್ದೆ. ಆದರೆ ನಾನು ಕರ್ತವ್ಯದಲ್ಲಿದ್ದಷ್ಟು ಸಮಯ ಯಾವುದೇ ಅಧಿಕಾರಿ ಕೊಠಡಿಗೆ ಬಂದಿರಲಿಲ್ಲ. ಹೈಕೋರ್ಟ್ ಸಿಬ್ಬಂದಿ ಅಲ್ಲಿಗೆ ಅಧಿಕಾರಿಗಳ ಸಹಾಯಕ್ಕೆಂದು ಬಂದಿದ್ದರು. ನನ್ನ ಕರ್ತವ್ಯ ಅವಧಿ ಮುಗಿದ ಬಳಿಕ ಅಪರಾಹ್ನ ಮನೆಗೆ ಹೋದೆ.'' ಈ ಹೇಳಿಕೆಯನ್ನು ನಾಗ್ಪುರ ಪೊಲೀಸರು ಸಂಗ್ರಹಿಸಿದ್ದು ಅದು  ಮಹಾರಾಷ್ಟ್ರ ಸರಕಾರದ ಬಳಿಯಿದ್ದರೂ ಸುಪ್ರೀಂ ಕೋರ್ಟಿನ ಮುಂದೆ ಸಲ್ಲಿಸಲಾದ ವರದಿಯ ಭಾಗವಾಗಿರಲಿಲ್ಲ.

ತನಿಖೆಗೆ ಅಪೀಲು ಸಲ್ಲಿಸಿರುವ ಸತೀಶ್ ಉಕೆ ಅವರು ನಾರಾಯಣ್ ಸದರ್ ಠಾಣೆಯಲ್ಲಿ ನೀಡಿದ ಹೇಳಿಕೆಯನ್ನು ಅಕ್ಟೋಬರ್ ನಲ್ಲಿ ಸಲ್ಲಿಸಲಾಗಿದ್ದ ಆರ್ ಟಿಐ ಅರ್ಜಿಯ ಮೂಲಕ ಪಡೆದಿದ್ದರು. ಸತೀಶ್ ಅವರು ತಮ್ಮ ಅಪೀಲಿನಲ್ಲಿ ನಾರಾಯಣ್ ಹೇಳಿಕೆಯ ಹೊರತಾಗಿ  ರವಿ ಭವನ್  ದಾಖಲೆಗಳನ್ನು ತಿರುಚಲಾಗಿತ್ತು ಎಂದು ಸೂಚಿಸುವ ದಾಖಲೆಗಳು ಹಾಗೂ ಲೋಯಾ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಅಲ್ಲಿಗೆ ಆಗಮಿಸಿದ್ದರು ಎಂದು ಹೇಳಲಾಗಿದ್ದರೂ ಅಲ್ಲಿನ ದಾಖಲೆಯಲ್ಲಿ ಲೋಯಾ ನಾಗ್ಪುರಕ್ಕೆ ಸರಕಾರಿ ಕೆಲಸಕ್ಕೆ ಪಯಣಿಸುತ್ತಿದ್ದರೆಂದು ಬರೆಯಲಾಗಿದ್ದನ್ನು ಉಲ್ಲೇಖಿಸಿದ್ದಾರೆ. ಈ ಅಪೀಲಿನ ಮೇಲಿನ ವಿಚಾರಣೆ ನವೆಂಬರ್ 12ರಂದು ನಡೆಯಲಿದೆ.

ಕೃಪೆ: caravanmagazine.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News