ಮೋದಿ ವಿರೋಧಾಭಾಸದ ಪ್ರಧಾನಿ: ಮನಮೋಹನ್ ಸಿಂಗ್

Update: 2018-10-27 14:44 GMT

ಹೊಸದಿಲ್ಲಿ,ಅ.27: ನರೇಂದ್ರ ಮೋದಿಯವರು ವಿರೋಧಾಭಾಸದ ಪ್ರಧಾನಿಯಾಗಿದ್ದಾರೆ. ಅವರು ಮತದಾರರನ್ನು ನಿರಾಶಗೊಳಿಸಿದ್ದಾರೆ ಮತ್ತು ನಾಲ್ಕೂವರೆ ವರ್ಷಗಳಲ್ಲಿ ತನ್ನ ಭರವಸೆಗಳಲ್ಲಿ ಮತದಾರರ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಟೀಕಿಸಿದ್ದಾರೆ.

ಸಂಸದ ಶಶಿ ತರೂರ್ ಅವರ ಮೋದಿ ಕುರಿತ ‘ದಿ ಪ್ಯಾರಾಡಾಕ್ಸಿಯಲ್ ಪ್ರೈಮ್ ಮಿನಿಸ್ಟರ್’ ಕೃತಿಯನ್ನು ಶುಕ್ರವಾರ ಇಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಸಿಂಗ್, ಭಾರತದ ಎಲ್ಲ ಜನರ ಪ್ರಧಾನಿ ಎಂದು ಭರವಸೆ ನೀಡಿದ್ದರೂ ಮೋದಿ ಸರಕಾರವು ವ್ಯಾಪಕವಾಗಿ ನಡೆಯುತ್ತಿರುವ ಕೋಮು ಹಿಂಸಾಚಾರ,ಗುಂಪಿನಿಂದ ಥಳಿಸಿ ಹತ್ಯೆ ಮತ್ತು ತಥಾಕಥಿತ ಗೋರಕ್ಷಣೆಯ ಕುರಿತು ಮೌನವಾಗಿದೆ ಎಂದರು. ಈ ಸರಕಾರವು ಶೈಕ್ಷಣಿಕ ಸ್ವಾತಂತ್ರವನ್ನು ಹತ್ತಿಕ್ಕಲು ಬಯಸಿದೆ ಮತ್ತು ನಮ್ಮ ವಿವಿಗಳು ಹಾಗೂ ಸಿಬಿಐನಂತಹ ರಾಷ್ಟ್ರೀಯ ಸಂಸ್ಥೆಗಳಲ್ಲಿಯ ವಾತಾವರಣವನ್ನು ಮಲಿನಗೊಳಿಸುತ್ತಿದೆ,ಭಿನ್ನಾಭಿಪ್ರಾಯಗಳನ್ನು ಉಡುಗಿಸುತ್ತಿದೆ ಎಂದರು.

ಭಯಗ್ರಸ್ತ ಜನತೆ, ಅವಿವೇಕದ ಕ್ರಮಗಳಿಂದ ಹಿನ್ನಡೆಯನ್ನು ಕಂಡಿರುವ ಆರ್ಥಿಕತೆ, ಉದ್ಯೋಗಾವಕಾಶಗಳ ಕೊರತೆ, ಕೃಷಿಕ ಸಮುದಾಯದಲ್ಲಿ ಬೆಳೆಯುತ್ತಿರುವ ಅಪನಂಬಿಕೆ, ಭಾರೀ ಸಂಖ್ಯೆಯಲ್ಲಿ ಕೃಷಿಕರ ಆತ್ಮಹತ್ಯೆಗಳು, ಅಭದ್ರ ಗಡಿಗಳು, ಕಾಶ್ಮೀರದಲ್ಲಿ ಅಸ್ಥಿರತೆ ಹಾಗೂ ಸ್ವಚ್ಛ ಭಾರತ, ಕೌಶಲ್ಯಾಭಿವೃದ್ಧಿ, ಮೇಕ್ ಇನ್ ಇಂಡಿಯಾ ಮತ್ತು ಬೇಟಿ ಬಚಾವೋ ಬೇಟಿ ಪಡಾವೋದಂತಹ ಪ್ರಶಂಸನೀಯ ಉಪಕ್ರಮಗಳ ಅನುಷ್ಠಾನದಲ್ಲಿಯೂ ಎದ್ದುಕಾಣುತ್ತಿರುವ ವೈಫಲ್ಯ ಇವು ಪ್ರಧಾನಿ ಮೋದಿಯವರ ಸಾಧನೆಗಳಾಗಿವೆಯೇ ಹೊರತು ನಮ್ಮ ಹಿರಿಯರು ಕನಸು ಕಂಡಿದ್ದ ಮತ್ತು ಸ್ವತಂತ್ರ ಭಾರತದ ಮೊದಲ ಆರೂವರೆ ದಶಕಗಳಲ್ಲಿ ನಿರ್ಮಿಸಿದ್ದ ಜಾತ್ಯತೀತ, ಬಹುವೈವಿಧ್ಯದ, ಮುಕ್ತ ಮತ್ತು ಸಮಾನ ಸಮಾಜವಲ್ಲ ಎಂದು ಸಿಂಗ್ ಹೇಳಿದರು.

ಮೋದಿಯವರು ಭರವಸೆಗಳ ಮಹಾಪೂರವನ್ನೇ ಹರಿಸಿ ಅಧಿಕಾರಕ್ಕೇರಿದ್ದಾರೆ,ಆದರೆ ಮತದಾರರನ್ನು ನಿರಾಶಗೊಳಿಸಿದ್ದಾರೆ ಎಂದ ಅವರು ಆರ್ಥಿಕ ಕ್ಷೇತ್ರದ ಕುರಿತಂತೆ,ವಿದೇಶಗಳಲ್ಲಿರುವ ಕಪ್ಪುಹಣವನ್ನು ವಾಪಸ್ ತರಲು ಯಾವುದೇ ದೃಢಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಅವಸರದಿಂದ ಜಾರಿಗೊಳಿಸಿದ ನೋಟು ನಿಷೇಧ ಮತ್ತು ಜಿಎಸ್‌ಟಿ ಕ್ರಮಗಳು ವಿಫಲಗೊಂಡಿವೆ. ಇಂಧನ ಬೆಲೆಗಳು ಐತಿಹಾಸಿಕ ಎತ್ತರವನ್ನು ತಲುಪಿವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News