ಲಂಕಾ: ಸಂಸತ್ತನ್ನು ಅಮಾನತಿನಲ್ಲಿಟ್ಟ ಸಿರಿಸೇನ

Update: 2018-10-27 15:14 GMT

ಕೊಲಂಬೊ, ಅ. 27: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ, ಶನಿವಾರ ಜಾರಿಗೆ ಬರುವಂತೆ ಸಂಸತ್ತನ್ನು ಅಮಾನತಿನಲ್ಲಿಟ್ಟಿದ್ದಾರೆ.

 ಪ್ರಧಾನಿ ರನಿಲ್ ವಿಕ್ರಮೆಸಿಂಘೆ ಯನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿ, ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸರನ್ನು ನೂತನ ಪ್ರಧಾನಿಯಾಗಿ ನೇಮಿಸಿದ ಒಂದು ದಿನದ ಬಳಿಕ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ.

‘‘ಅಧ್ಯಕ್ಷರು ನವೆಂಬರ್ 16ರವರೆಗೆ ಸಂಸತ್ತನ್ನು ಅಮಾನತಿನಲ್ಲಿಟ್ಟಿದ್ದಾರೆ’’ ಎಂದು ಸಂಪುಟ ವಕ್ತಾರ ರಜಿತ ಸೇನಾರತ್ನೆ ಸುದ್ದಿಗಾರರಿಗೆ ತಿಳಿಸಿದರು.

ತಾನು ಪ್ರಧಾನಿಯಾಗಿ ಮುಂದುವರಿದಿದ್ದೇನೆ ಎಂದು ಪದಚ್ಯುತಗೊಂಡಿರುವ ವಿಕ್ರಮೆಸಿಂಘೆ ಹೇಳಿಕೊಳ್ಳುತ್ತಿದ್ದಾರೆ. ತನ್ನ ಸಂಸದೀಯ ಬಹುಮತವನ್ನು ಸಾಬೀತುಪಡಿಸಲು ರವಿವಾರ ಸಂಸತ್ತಿನ ಅಧಿವೇಶನವನ್ನು ಕರೆಯುವಂತೆ ಅವರು ಸ್ಪೀಕರ್‌ರನ್ನು ಒತ್ತಾಯಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಸಂಸತ್ತನ್ನೇ ಅಮಾನತಿನಲ್ಲಿಟ್ಟಿದ್ದಾರೆ.

ತನ್ನನ್ನು ಸಂಸತ್ತು ಮಾತ್ರ ಪದ್ಯಚುತಗೊಳಿಸಬಹುದು ಎಂದು ವಿಕ್ರಮೆಸಿಂೆ ಹೇಳಿದ್ದಾರೆ. ಸಂಸತ್ತಿನಲ್ಲಿ ಅವರ ಪಕ್ಷ ಬಹುಮತವನ್ನು ಹೊಂದಿದೆ.

ತನ್ನ ವಿರುದ್ಧದ ಅಸಾಂವಿಧಾನಿಕ ಕ್ರಮದ ವಿರುದ್ಧ ಕಾನೂನು ಸಮರ ನಡೆಸುವುದಾಗಿಯೂ ಅವರು ಘೋಷಿಸಿದ್ದಾರೆ.

ಅಧ್ಯಕ್ಷ ಸಿರಿಸೇನರ ನಿರ್ಧಾರ ದ್ವೀಪ ರಾಷ್ಟ್ರದಲ್ಲಿ ಅಭೂತಪೂರ್ವ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ.

ಕಾನೂನು ಸಲಹೆ ಪಡೆದು ತೀರ್ಮಾನ: ಸ್ಪೀಕರ್

 ತಾನು ಕಾನೂನು ಸಲಹೆಯನ್ನು ಪಡೆಯುತ್ತಿದ್ದೇನೆ ಹಾಗೂ ಮಹಿಂದ ರಾಜಪಕ್ಸರನ್ನು ನೂತನ ಪ್ರಧಾನಿಯಾಗಿ ತಾನು ಮಾನ್ಯ ಮಾಡುತ್ತೇನೆಯೇ ಇಲ್ಲವೇ ಎನ್ನುವುದನ್ನು ಶನಿವಾರ ತಿಳಿಸುತ್ತೇನೆ ಎಂಬುದಾಗಿ ಸ್ಪೀಕರ್ ಹೇಳಿದ್ದಾರೆ.

ಬಂಡಾಯ ಸಾರಿದ ವಿಕ್ರಮೆಸಿಂಘೆ

ಪ್ರಧಾನಿ ಹುದ್ದೆಯನ್ನು ತ್ಯಜಿಸುವಂತೆ ಹಾಗೂ ಉಚ್ಚಾಟನೆಯನ್ನು ಸ್ವೀಕರಿಸುವಂತೆ ಸೂಚಿಸಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಶನಿವಾರ ರನಿಲ್ ವಿಕ್ರಮೆಸಿಂಘೆಗೆ ಔಒಪಚಾರಿಕ ನೋಟಿಸ್ ಕಳುಹಿಸಿದ್ದಾರೆ.

ಮಾಜಿ ರಾಜಕೀಯ ಮಿತ್ರನನ್ನು ಉಚ್ಚಾಟಿಸಿದ ಗಂಟೆಗಳ ಬಳಿಕ ಸಿರಿಸೇನ ಈ ಬಗ್ಗೆ ಅಧಿಕೃತ ಗಝೆಟ್ ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಆದರೆ, ಪ್ರಧಾನಿಯ ಅಧಿಕೃತ ನಿವಾಸ ‘ಟೆಂಪಲ್ ಟ್ರೀಸ್’ನಲ್ಲಿನ ವಾಸವನ್ನು ವಿಕ್ರಮೆಸಿಂೆ ಮುಂದುವರಿಸಿದ್ದಾರೆ ಹಾಗೂ ತಾನು ಈಗಲೂ ಅಧಿಕಾರದಲ್ಲಿದ್ದೇನೆ ಎಂಬುದಾಗಿ ಸಿರಿಸೇನಗೆ ಬರೆದ ಪತ್ರವೊಂದರಲ್ಲಿ ಹೇಳಿದ್ದಾರೆ.

ತನ್ನನ್ನು ಸಂಸತ್ತು ಮಾತ್ರ ತೆರವುಗೊಳಿಸಬಹುದು ಎಂದು ಅವರು ಹೇಳಿದ್ದಾರೆ.

ಸಂಸತ್ತಿನಲ್ಲಿ ಅವರ ಪಕ್ಷ ಬಹುಮತವನ್ನು ಹೊಂದಿದೆ.

ತನ್ನ ವಿರುದ್ಧ ಅಸಾಂವಿಧಾನಿಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿರುವ ಅವರು, ಇದರ ವಿರುದ್ಧ ಕಾನೂನು ಸಮರ ನಡೆಸುತ್ತೇನೆ ಎಂದು ಹೇಳಿದ್ದಾರೆ.

ಶುಕ್ರವಾರ ರಾತ್ರಿ ಪತ್ರಿಕಾಗೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘ನಾನು ಶ್ರೀಲಂಕಾದ ಪ್ರಧಾನಿಯಾಗಿ ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದೇನೆ’’ ಎಂದು ಹೇಳಿದರು.

‘‘ನಾನು ಪ್ರಧಾನಿಯಾಗಿ ಮುಂದುವರಿಯುತ್ತೇನೆ ಹಾಗೂ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತೇನೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News