ಖಶೋಗಿ ಹತ್ಯೆಗೆ ಆದೇಶ ನೀಡಿದ್ದು ಯಾರು? ಅವರ ಮೃತದೇಹ ಎಲ್ಲಿದೆ?: ಸೌದಿಗೆ ಎರ್ದೊಗಾನ್ ಒತ್ತಾಯ

Update: 2018-10-27 15:33 GMT

ಇಸ್ತಾಂಬುಲ್, ಅ. 27: ಸೌದಿ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಗೆ ಯಾರು ಆದೇಶ ನೀಡಿದರು ಹಾಗೂ ಅವರ ಪ್ರಾರ್ಥೀವ ದೇಹ ಎಲ್ಲಿದೆ ಎನ್ನುವುದನ್ನು ಬಹಿರಂಗಪಡಿಸುವಂತೆ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಶುಕ್ರವಾರ ಸೌದಿ ಅರೇಬಿಯವನ್ನು ಒತ್ತಾಯಿಸಿದ್ದಾರೆ.

ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಕಟು ಟೀಕಾಕಾರರಾಗಿದ್ದ ಪತ್ರಕರ್ತನ ಹತ್ಯೆ ಬಗ್ಗೆ ಈವರೆಗೆ ಹೊರಗೆ ನೀಡಿರುವ ಮಾಹಿತಿಗಿಂತ ಹೆಚ್ಚು ಮಾಹಿತಿಯನ್ನು ಟರ್ಕಿ ಹೊಂದಿದೆ ಎಂದು ಎರ್ದೊಗಾನ್ ಹೇಳಿದರು.

ಅಮೆರಿಕದಲ್ಲಿ ವಾಸಿಸುತ್ತಿದ್ದ ಸೌದಿ ಪತ್ರಕರ್ತ ಖಶೋಗಿ ಅಕ್ಟೋಬರ್ 2ರಂದು ಟರ್ಕಿಯ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯ ಕೌನ್ಸುಲೇಟ್ ಕಚೇರಿಯಿಂದ ತನ್ನ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ದಾಖಲೆಗಳನ್ನು ತರಲು ಹೋಗಿದ್ದಾಗ ಅವರನ್ನು ಕಚೇರಿಯಲ್ಲೇ ಚಿತ್ರಹಿಂಸೆ ನೀಡಿ ಕೊಲ್ಲಲಾಗಿತ್ತು.

‘‘ಖಶೋಗಿಯ ಹತ್ಯೆ ಬಳಿಕ ಅವರ ದೇಹವನ್ನು ವಿಲೇವಾರಿಗಾಗಿ ಸ್ಥಳೀಯ ವ್ಯಕ್ತಿಯೊಬ್ಬನಿಗೆ ಹಸ್ತಾಂತರಿಸಲಾಗಿತ್ತು ಎಂಬುದಾಗಿ ಸೌದಿ ಅಧಿಕಾರಿಗಳು ಹೇಳಿದ್ದಾರೆ. ಆ ವ್ಯಕ್ತಿ ಯಾರು ಎನ್ನುವುದನ್ನು ಅವರು ಬಹಿರಂಗಪಡಿಸಬೇಕು’’ ಎಂದು ಎರ್ದೊಗಾನ್ ಹೇಳಿದರು.

ಟರ್ಕಿಗೆ ಸೌದಿ ಪ್ರಾಸಿಕ್ಯೂಟರ್ ಭೇಟಿ

ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆ ಬಗ್ಗೆ ಟರ್ಕಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಸೌದಿ ಅರೇಬಿಯದ ಮುಖ್ಯ ಪ್ರಾಸಿಕ್ಯೂಟರ್ ಇಸ್ತಾಂಬುಲ್‌ಗೆ ಭೇಟಿ ನೀಡಲಿದ್ದಾರೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಶುಕ್ರವಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News