ಫೆರೇರಾ, ವೆರ್ನನ್ ಜೆಎನ್‌ಯು ವಿದ್ಯಾರ್ಥಿಗಳನ್ನು ಮಾವೋವಾದಿ ಚಟುವಟಿಕೆಗೆ ಸೇರಿಸುತ್ತಿದ್ದರು: ಪೊಲೀಸರ ಹೇಳಿಕೆ

Update: 2018-10-27 16:57 GMT

ಹೊಸದಿಲ್ಲಿ, ಅ.27: ಸಾಮಾಜಿಕ ಹೋರಾಟಗಾರರಾದ ಅರುಣ್ ಫೆರೇರಾ ಹಾಗೂ ವೆರ್ನನ್ ಗೊನ್ಸಾಲ್ವಿಸ್ ದೇಶದ ಸಾರ್ವಭೌಮತೆ ಹಾಗೂ ಅಖಂಡತೆಗೆ ಬೆದರಿಕೆ ಒಡ್ಡುವಂತಹ ವಿಸ್ತೃತ ಒಳಸಂಚಿನಲ್ಲಿ ಶಾಮೀಲಾಗಿದ್ದರು ಎಂದು ಪುಣೆ ಪೊಲೀಸರು ಸ್ಥಳೀಯ ನ್ಯಾಯಾಲಯದಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಇವರಿಬ್ಬರು ಜವಾಹರಲಾಲ್ ನೆಹರೂ ವಿವಿ ಮತ್ತು ಟಾಟ ಇನ್ಸ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈಯನ್ಸ್‌ನ ವಿದ್ಯಾರ್ಥಿಗಳನ್ನು ಮಾವೋವಾದಿ ನಕ್ಸಲ್ ಚಟುವಟಿಕೆಗೆ ಸೇರಿಸುತ್ತಿದ್ದರು ಎಂದು ಆರೋಪಿಸಿದ್ದು ಇಬ್ಬರನ್ನೂ 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.

 ಇವರಿಬ್ಬರ ನಿವಾಸದಿಂದ ವಶಪಡಿಸಿಕೊಂಡಿರುವ ದಾಖಲೆ ಪತ್ರಗಳು ಇದಕ್ಕೆ ಪುರಾವೆಯಾಗಿದೆ. ಅಲ್ಲದೆ ಕರೆ ವಿವರದ ದಾಖಲೆಯ ಪರಿಶೀಲನೆ ನಡೆಸಿದಾಗ ಇವರಿಬ್ಬರು ನಿಷೇಧಿತ ಮಾವೋವಾದಿ ಸಂಘಟನೆಯ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಮಾವೋವಾದಿಗಳೊಂದಿಗೆ ಸಂಪರ್ಕದಲ್ಲಿದ್ದುದು ಮಾತ್ರವಲ್ಲ, ಅವರಿಗೆ ಆರ್ಥಿಕ ನೆರವೂ ನೀಡುತ್ತಿದ್ದರು ಎಂದು ಪ್ರಾಸಿಕ್ಯೂಷನ್ ಪರ ವಕೀಲೆ ಉಜ್ವಲಾ ಪವಾರ್ ನ್ಯಾಯಾಲಯಕ್ಕೆ ತಿಳಿಸಿದರು. ಹೊಸದಾಗಿ ಮಾವೋವಾದಿ ಸಂಘಟನೆಗೆ ಸೇರಿಕೊಂಡಿರುವ ಯುವಕರ ಬಗ್ಗೆ ತಿಳಿದುಕೊಳ್ಳಬೇಕಿದ್ದು ಈ ಕಾರಣ ಇಬ್ಬರು ಹೋರಾಟಗಾರರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಅವರು ಮನವಿ ಮಾಡಿಕೊಂಡರು.

 ಆದರೆ ಪೊಲೀಸರು ಈಗಾಗಲೇ ದಾಖಲೆಗಳನ್ನು ವಶಪಡಿಸಿಕೊಂಡಿರುವ ಕಾರಣ ಪೊಲೀಸ್ ಕಸ್ಟಡಿಯ ಅಗತ್ಯವಿಲ್ಲ. ಅಲ್ಲದೆ ಸುಪ್ರೀಂಕೋರ್ಟ್ ಹೋರಾಟಗಾರರ ಗೃಹಬಂಧನಕ್ಕೆ ಸೂಚಿಸಿರುವ ಕಾರಣ ಪೊಲೀಸ್ ಕಸ್ಟಡಿಗೆ ನೀಡಿದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಪ್ರತಿವಾದಿಗಳ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ಬಳಿಕ ನ್ಯಾಯಾಲಯ ಇಬ್ಬರು ಹೋರಾಟಗಾರರಿಗೆ ನವೆಂಬರ್ 6ರವರೆಗೆ ಪೊಲೀಸ್ ಕಸ್ಟಡಿ ವಿಧಿಸಿತು. ಈ ಬಗ್ಗೆ ಬಾಂಬೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ವಕೀಲರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News