ದಾವೂದ್ ಸೋದರ ಇಕ್ಬಾಲ್‌ಗೆ ಜೈಲಿನಲ್ಲಿ ಬಿರಿಯಾನಿ, ಸಿಗರೇಟ್ ಪೂರೈಕೆ:ಐವರು ಪೊಲೀಸರ ಅಮಾನತು

Update: 2018-10-27 17:33 GMT

ಮುಂಬೈ,ಅ.27: ಥಾಣೆ ಕೇಂದ್ರ ಕಾರಾಗೃಹದಲ್ಲಿರುವ ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹೀಂ ಸೋದರ ಇಕ್ಬಾಲ್ ಕಾಸ್ಕರ್‌ಗೆ ರಾಜೋಪಚಾರವನ್ನು ಒದಗಿಸಿದ ಆರೋಪದಲ್ಲಿ ಓರ್ವ ಎಸ್‌ಐ ಸೇರಿದಂತೆ ಐವರು ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಕಳೆದ ವರ್ಷ ಹಫ್ತಾ ವಸೂಲಿ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಕಾಸ್ಕರ್ ಗುರುವಾರ ಹಲ್ಲುನೋವು ಮತ್ತು ಎದೆನೋವಿನ ಬಗ್ಗೆ ದೂರಿಕೊಂಡಿದ್ದು,ಆತನನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವಂತೆ ನ್ಯಾಯಾಲಯವು ಆದೇಶಿಸಿತ್ತು. ಈ ವೇಳೆ ಆತನಿಗೆ ವಿಶೇಷ ಉಪಚಾರವನ್ನು ಒದಗಿಸಿದ್ದು ನಮ್ಮ ಗಮನಕ್ಕೆ ಬಂದಿದ್ದು,ಖಾಸಗಿ ಟಿವಿ ವಾಹಿನಿಯೊಂದುಇಡೀ ಘಟನೆಯನ್ನು ವೀಡಿಯೊ ಚಿತ್ರೀಕರಿಸಿದೆ ಎಂದು ಥಾಣೆ ಕ್ರೈಂ ಬ್ರಾಂಚ್ ಡಿಸಿಪಿ ದೀಪಕ ದೇವರಾಜ್ ತಿಳಿಸಿದರು.

 ಕಾಸ್ಕರ್‌ನನ್ನು ಹಿಂದೆ ಅನೇಕ ಬಾರಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಈ ಬಾರಿ ಆತ ಪೊಲೀಸರ ಎದುರು ಸಿಗರೇಟ್ ಸೇದುತ್ತಿರುವುದು,ಅವರಿಗೆ ಹಣ ನೀಡುತ್ತಿರುವುದು ಮತ್ತು ಪೊಲೀಸರು ಆತನಿಗೆ ಬಿರಿಯಾನಿ ಪೂರೈಸಿರುವುದು ಕಂಡು ಬಂದಿದೆ. ಕಾಸ್ಕರ್ ಬೆಳಿಗ್ಗೆ ಆಸ್ಪತ್ರೆಗೆ ತೆರಳಿದ್ದು ಸಂಜೆ ಜೈಲಿಗೆ ವಾಪಸಾಗಿದ್ದಾನೆ. ಮಾಮೂಲು ವೈದ್ಯಕೀಯ ತಪಾಸಣೆಗೆ ಇಷ್ಟು ಸಮಯ ಬೇಕಾಗಿಲ್ಲ ಎಂದು ಹೆಸರು ತಿಳಿಸಲು ಬಯಸದ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಅಮಾನತುಗೊಂಡಿರುವ ಪೊಲೀಸರ ಮೇಲಿನ ಆರೋಪಗಳು ಸಾಬೀತಾದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಇದರಲ್ಲಿ ಇತರ ಪೊಲೀಸರೂ ಭಾಗಿಯಾಗಿದ್ದರೇ ಎನ್ನುವುದನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಥಾಣೆ ಕಮಿಷನರ್ ಕಚೇರಿಯ ಪೊಲೀಸ್ ಅಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News