ಮೀಟೂ ಪ್ರತಿಕ್ರಿಯೆ: ವಿವಾದ ಸೃಷ್ಟಿಸಿದ ರಾಜ್ ನಾಥ್ ಸಿಂಗ್ ಹೇಳಿಕೆ

Update: 2018-10-28 08:37 GMT

ಹೈದರಾಬಾದ್, ಅ.28: ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಮತ್ತು ಚುನಾವಣಾ ವರ್ಷದಲ್ಲಿ ಮೈತ್ರಿಗೆ ಮುಂದಾಗಿರುವ ವಿರೋಧ ಪಕ್ಷಗಳಿಗೆ ಎಚ್ಚರಿಕೆ ನೀಡುವ ಭರದಲ್ಲಿ ಗೃಹಸಚಿವ ರಾಜ್ ನಾಥ್ ಸಿಂಗ್ ನೀಡಿರುವ ಹೇಳಿಕೆ ಹೊಸ ವಿವಾದ ಹುಟ್ಟುಹಾಕಿದೆ.

"ಕಾಂಗ್ರೆಸ್ ಜತೆ ಕೈಜೋಡಿಸಿದ ಎಲ್ಲ ಪಕ್ಷಗಳೂ ವಿಫಲವಾಗಿವೆ. ಕಾಂಗ್ರೆಸ್‍ನಿಂದ ವಿಶ್ವಾಸದ್ರೋಹಕ್ಕೆ ಒಳಗಾಗುವ ಬದಲು, ಎಲ್ಲ ವಿರೋಧ ಪಕ್ಷಗಳು ಮೈತ್ರಿ ಮಾಡಿಕೊಳ್ಳದಿರುವುದು ಲೇಸು. ಅವರು ಕಾಂಗ್ರೆಸ್ ವಿರುದ್ಧ ‘ಮೀಟೂ’ ಅಭಿಯಾನವನ್ನು ಆರಂಭಿಸುವುದು ಅನಿವಾರ್ಯವಾಗುತ್ತದೆ" ಎಂದು ರಾಜ್ ನಾಥ್ ಸಿಂಗ್ ಹೇಳಿದ್ದರು. ಲೈಂಗಿಕ ಶೋಷಣೆ ವಿರುದ್ಧ ನಡೆಯುತ್ತಿರುವ ‘ಮೀಟೂ’ ಚಳವಳಿಯನ್ನು ರಾಜಕೀಯ ಹೇಳಿಕೆಯಲ್ಲಿ ಸಚಿವರು ಹೆಸರಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ರಾಜ್ ನಾಥ್ ಸಿಂಗ್ ಅವರು ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳವನ್ನು ತಡೆಯುವ ನಿಟ್ಟಿನಲ್ಲಿ ಮಾರ್ಗೋಪಾಯ ಸಿದ್ಧಪಡಿಸುವ ಉನ್ನತ ಮಟ್ಟದ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ.

ಚಳವಳಿಯನ್ನು ಅಣಕಿಸುವ ರೀತಿಯಲ್ಲಿ ಸಚಿವರು ಹೇಳಿಕೆ ನೀಡಿರುವುದು ಖಂಡನೀಯ ಎಂದು ಹಲವರು ಹೇಳಿದ್ದಾರೆ. ಸಚಿವರು ನೀಡಿರುವ ಉದಾಹರಣೆ ತಪ್ಪು ಎಂದು ಮತ್ತೆ ಕೆಲವರು ವಿಶ್ಲೇಷಿಸಿದ್ದಾರೆ.

"ಗೃಹಸಚಿವರು ಮಹಿಳೆಯರ ಮೀಟೂ ಚಳವಳಿಯನ್ನು ಹಾಸ್ಯವಾಗಿ ತೆಗೆದುಕೊಂಡಿದ್ದಾರೆ. ಬಿಜೆಪಿ ಮುಖಂಡರ ಮುಖಗಳಲ್ಲಿ ಹಾಗೂ ಅವರು ಬಳಸುವ ಭಾಷೆಯಲ್ಲಿ ಹತಾಶೆ ಎದ್ದುಕಾಣುತ್ತದೆ" ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಶುತಾಪ ಪಾಲ್ ಎಂಬ ಯುವ ಪತ್ರಕರ್ತೆಯೊಬ್ಬರು ಸಿಂಗ್ ಅವರ ಸಹೋದ್ಯೋಗಿ ಎಂ.ಜೆ.ಅಕ್ಬರ್ ಅವರ ನಿದರ್ಶನವನ್ನು ಉದಾಹರಿಸಿ ಟ್ವೀಟ್ ಮಾಡಿ, "ಲೈಂಗಿಕ ಕಿರುಕುಳದ ಬಗ್ಗೆ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರುವ ಬಗ್ಗೆ ರಚಿಸಿರುವ ಸಚಿವರ ಸಮಿತಿಯಲ್ಲಿ ಅಧ್ಯಕ್ಷರಾಗಿರುವ ರಾಜ್ ನಾಥ್ ಸಿಂಗ್ ಹೇಳಿಕೆ ನಿಜಕ್ಕೂ ಖೇದಕರ. ಅವರ ಸಹೋದ್ಯೋಗಿ ತಾನೇನೂ ತಪ್ಪು ಮಾಡಿಲ್ಲ ಎಂದು ಹೇಳುತ್ತಾ ಬಂದಿದ್ದು, ಚಳವಳಿ ಬಲಗೊಂಡಾಗ ರಾಜೀನಾಮೆ ನೀಡಬೇಕಾಯಿತು" ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News