ಹೈಕೋರ್ಟ್‌ನಲ್ಲಿ ಸಹೋದ್ಯೋಗಿಯ ಕೊಲೆ ಪ್ರಕರಣ: ವಕೀಲನಿಗೆ ಜೀವಾವಧಿ ಶಿಕ್ಷೆ

Update: 2018-10-28 12:32 GMT

ಬೆಂಗಳೂರು, ಅ.28: ಕರ್ನಾಟಕ ಹೈಕೋರ್ಟ್‌ನಲ್ಲಿ ಸಹೋದ್ಯೋಗಿಯನ್ನು ಕೊಲೆ ಮಾಡಿದ್ದ ಆರೋಪಿಗೆ ಸಿಟಿ ಸಿವಿಲ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧಿ ಸಹ ವಕೀಲನಾಗಿದ್ದು, 8 ವರ್ಷಗಳ ಹಿಂದೆ ಈ ಘಟನೆ ನಡೆದಿತ್ತು. 

ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಅಪರಾಧಿ ರಾಜಪ್ಪಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ರಾಜಪ್ಪ ತನ್ನ ಸಯೋದ್ಯೋಗಿ ಜೆ.ಎಸ್.ನವೀನಾ(25) ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಜುಲೈ 8, 2010ರಂದು ಕರ್ನಾಟಕ ಹೈಕೋರ್ಟ್‌ನ ಕೋರ್ಟ್ ನಂಬರ್ 4ರ ಬಳಿ ಮಧ್ಯಾಹ್ನ 1.45ರ ಸುಮಾರಿಗೆ ಈ ಘಟನೆ ನಡೆದಿತ್ತು. ನವೀನಾ ಹತ್ಯೆ ಮಾಡಿದ ಬಳಿಕ ಕೋರ್ಟ್‌ನ ಶೌಚಾಲಯಕ್ಕೆ ತೆರಳಿದ್ದ ರಾಜಪ್ಪ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಆದರೆ, ಚಿಕಿತ್ಸೆ ಬಳಿಕ ಬದುಕುಳಿದಿದ್ದ.

ಕೋಲಾರ ಮೂಲದ ರಾಜಪ್ಪ ಮತ್ತು ನವೀನಾ ಇಬ್ಬರೂ ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದರು. ಇಬ್ಬರೂ ಮದುವೆಯಾಗಲು ಬಯಸಿದ್ದರು. ಆದರೆ, ನವೀನಾ ಅವರು ಮತ್ತೊಬ್ಬ ವಕೀಲರ ಜೊತೆ ಕ್ಲೋಸ್ ಆಗಿದ್ದಾರೆ ಎಂದು ರಾಜಪ್ಪ ಜಗಳವಾಡಿದ್ದ. ಜುಲೈ 8ರಂದು ಕರ್ನಾಟಕ ಹೈಕೋರ್ಟ್‌ಗೆ ಚಾಕು ಹಿಡಿದು ಬಂದಿದ್ದ ರಾಜಪ್ಪ, ನವೀನಾ ಮೇಲೆ ಹಲ್ಲೆ ಮಾಡಿದ್ದ. ಕುತ್ತಿಗೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದ. ನವೀನಾ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಕೋರ್ಟ್ ಕಾರಿಡಾರ್‌ನಲ್ಲಿದ್ದ ವಕೀಲರಿಗೆ ಚಾಕು ತೋರಿಸಿ ಬೆದರಿಸಿದ್ದ ರಾಜಪ್ಪ ಶೌಚಾಲಯಕ್ಕೆ ಓಡಿ ಹೋಗಿ ವಿಷ ಕುಡಿದಿದ್ದ. ಚಾಕು ಚುಚ್ಚುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ, ವಕೀಲರು ಮತ್ತು ವಿಧಾನಸೌಧ ಪೊಲೀಸರು ಆತನನ್ನು ರಕ್ಷಣೆ ಮಾಡಿ ಬಂಧಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್ ಅಪರಾಧಿ ರಾಜಪ್ಪಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 5 ಸಾವಿರ ರೂ.ದಂಡವನ್ನು ವಿಧಿಸಲಾಗಿದ್ದು, ಅದನ್ನು ಮೃತ ನವೀನಾ ಪೋಷಕರಿಗೆ ನೀಡಲು ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News