ರನಿಲ್ ವಿಕ್ರಮಸಿಂಘೆಯನ್ನು ಪ್ರಧಾನಿಯಾಗಿ ಗುರುತಿಸಿದ ಶ್ರೀಲಂಕಾ ಸ್ಪೀಕರ್

Update: 2018-10-28 15:01 GMT

ಕೊಲಂಬೊ,ಅ.28: ಶ್ರೀಲಂಕಾ ಅಧ್ಯಕ್ಷರಿಂದ ಉಚ್ಛಾಟಿಸಲ್ಪಟ್ಟ ಪ್ರಧಾನ ಮಂತ್ರಿ ರನಿಲ್ ವಿಕ್ರಮಸಿಂಘೆಯನ್ನು ರವಿವಾರ ಲೋಕಸಭಾ ಸ್ಪೀಕರ್ ದೇಶದ ಕಾನೂನುಬದ್ಧ ಪ್ರಧಾನಿ ಎಂದು ಗುರುತಿಸಿದ್ದಾರೆ. ತನ್ನ ಆಘಾತಕಾರಿ ಉಚ್ಛಾಟನೆಯನ್ನು ಕಾನೂನುಬಾಹಿರ ಎಂದು ದೂರಿರುವ ವಿಕ್ರಮಸಿಂಘೆ, ತನ್ನ ಅಧಿಕೃತ ನಿವಾಸವನ್ನು ತೊರೆಯಲು ನೀಡಿದ್ದ ರವಿವಾರದ ಗಡುವನ್ನು ನಿರ್ಲಕ್ಷಿಸಿ ತನ್ನ ಪರ ಬೆಂಬಲವನ್ನು ಕ್ರೋಡೀಕರಿಸುವ ಉದ್ದೇಶದಿಂದ ಮಿತ್ರಪಕ್ಷಗಳ ಜೊತೆ ಸಭೆಗಳನ್ನು ನಡೆಸಿದರು.

ಸಂಸತ್‌ನಲ್ಲಿ ಇನ್ನೋರ್ವ ಅಭ್ಯರ್ಥಿ ಬಹುಮತವನ್ನು ಸಾಬೀತುಪಡಿಸುವವರೆಗೆ ತನ್ನ ಭದ್ರತೆ ಮತ್ತು ಸೌಲಭ್ಯಗಳನ್ನು ಹಿಂಪಡೆದುಕೊಳ್ಳಬಾರದು ಎಂಬ ವಿಕ್ರಮಸಿಂಘೆಯವರ ಮನವಿ ನ್ಯಾಯಸಮ್ಮತವಾಗಿದೆ ಎಂದು ಸ್ಪೀಕರ್ ಕರು ಜಯಸೂರ್ಯ ತಿಳಿಸಿದ್ದಾರೆ. ಪ್ರಧಾನಿಯ ಮನವಿಯು ಪ್ರಜಾಸತಾತ್ಮಕ ಮತ್ತು ನ್ಯಾಯಬದ್ಧವಾಗಿದೆ ಎಂದು ನನಗನಿಸುತ್ತದೆ ಎಂದು ವಿಕ್ರಮಸಿಂಘೆಯನ್ನು ಉಚ್ಚಾಟಿಸಿದ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾಗೆ ಬರೆದ ಪತ್ರದಲ್ಲಿ ಸ್ಪೀಕರ್ ತಿಳಿಸಿದ್ದಾರೆ. ವಿಕ್ರಮಸಿಂಘೆಯನ್ನು ಉಚ್ಚಾಟಿಸಿದ ನಂತರ ತನ್ನ ಹಳೆಯ ವೈರಿ ಮಹಿಂದ ರಾಜಪಕ್ಸೆಯನ್ನು ನೂತನ ಪ್ರಧಾನಿಯಾಗಿ ನೇಮಿಸಿದ ಅಧ್ಯಕ್ಷರು, ರಾಜಪಕ್ಸೆಯ ನೇಮಕದ ವಿರುದ್ಧ ಯಾವುದೇ ಸವಾಲು ಎದುರಾಗುವುದನ್ನು ತಡೆಯಲು ಸಂಸತನ್ನು ಅಮಾನತುಗೊಳಿಸಿದ್ದರು. ಆದರೆ ಸ್ಪೀಕರ್, ವಿಕ್ರಮಸಿಂಘೆಯನ್ನು ಪ್ರಜಾಪ್ರಭುತ್ವವನ್ನು ಭದ್ರಪಡಿಸಲು ಮತ್ತು ಉತ್ತಮ ಆಡಳಿತ ನೀಡಲು ಜನಾದೇಶವನ್ನು ಪಡೆದುಕೊಂಡಿರುವ ಸರಕಾರದ ನಾಯಕ ಎಂದು ತಿಳಿಸಿದ್ದಾರೆ.

ಸ್ಪೀಕರ್ ಆಗಿ ಕರು ಜಯಸೂರ್ಯ ತಟಸ್ಥ ನಿಲುವು ಹೊಂದಿದ್ದಾರೆ. ಆದರೆ ಅವರು ಮೂಲತಃ ವಿಕ್ರಮಸಿಂಘೆಯ ಯುನೈಟೆಡ್ ನ್ಯಾಶನಲ್ ಪಾರ್ಟಿ(ಯುಎನ್‌ಪಿ)ಗೆ ಸೇರಿದವರಾಗಿದ್ದಾರೆ. ನವೆಂಬರ್ 16ರವರೆಗೆ ಸಂಸತನ್ನು ಅಮಾನತಿನಲ್ಲಿಡುವುದರಿಂದ ದೇಶದ ಮೇಲೆ ಗಂಭೀರ ಮತ್ತು ಆಘಾತಕಾರಿ ಪರಿಣಾಮವನ್ನು ಬೀರಲಿದೆ. ಹಾಗಾಗಿ ಈ ನಿರ್ಧಾರವನ್ನು ಬದಲಿಸುವಂತೆ ಸ್ಪೀಕರ್ ಜಯಸೂರ್ಯ ಅಧ್ಯಕ್ಷರಾದ ಸಿರಿಸೇನಾಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News