​ಶಬರಿಮಲೆ ವಿವಾದ: ಅಮಿತ್ ಶಾ ನ್ಯಾಯಾಂಗ ನಿಂದನೆ?

Update: 2018-10-29 03:54 GMT

ಕಣ್ಣೂರು, ಅ.29: ಶಬರಿಮಲೆ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಮುಕ್ತ ಪ್ರವೇಶ ನೀಡುವ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಭಕ್ತರಿಂದ ನಡೆಯುತ್ತಿರುವ ಪ್ರತಿಭಟನೆ ಪರವಾಗಿ ಬಿಜೆಪಿ ಬಂಡೆಕಲ್ಲಿನಂತೆ ನಿಲ್ಲಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿರುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. "ದೇಶದ ಸಂವಿಧಾನ ಹಾಗೂ ಸುಪ್ರೀಂಕೋರ್ಟ್ ಬಗ್ಗೆ ಆರೆಸ್ಸೆಸ್-ಬಿಜೆಪಿಗೆ ಗೌರವ ಇಲ್ಲ ಎನ್ನುವುದನ್ನು ಇದು ಸಾಬೀತುಪಡಿಸಿದೆ" ಎಂದು ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿವೆ.

ಸರ್ಕಾರ ಮತ್ತು ನ್ಯಾಯಾಲಯಗಳು ಅನುಷ್ಠಾನಯೋಗ್ಯ ಆದೇಶಗಳನ್ನು ನೀಡಬೇಕು ಎಂದು ಕಣ್ಣೂರಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಅಮಿತ್ ಶಾ ಅಭಿಪ್ರಾಯಪಟ್ಟಿದ್ದರು. ಜತೆಗೆ ಜನರ ನಂಬಿಕೆಗಳಿಗೆ ಧಕ್ಕೆ ತರುವಂಥ ತೀರ್ಪು ನೀಡಬಾರದು ಎಂದು ಹೇಳಿದ್ದರು.

"ಸುಪ್ರೀಂತೀರ್ಪಿನ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗೆ ಕುಮ್ಮಕ್ಕು ಎಲ್ಲಿಂದ ಎನ್ನುವುದು ಇದೀಗ ಬಹಿರಂಗಾಗಿದೆ" ಎಂದು ಆಡಳಿತಾರೂಢ ಎಲ್‌ಡಿಎಫ್ ಮೈತ್ರಿಕೂಟದ ಪ್ರಧಾನ ಪಕ್ಷವಾಗಿರುವ ಸಿಪಿಎಂ ಕುಟುಕಿದೆ.

"ಕೇಂದ್ರದಲ್ಲಿ ಆಡಳಿತಾರೂಢ ಪಕ್ಷದ ಅಧ್ಯಕ್ಷರು ಸುಪ್ರೀಂ ತೀರ್ಪನ್ನು ಕಟುವಾಗಿ ಟೀಕಿಸಿದ್ದು, ಇದು ನ್ಯಾಯಾಲಯ ಹಾಗೂ ಸಂವಿಧಾನದ ಬಗ್ಗೆ ಆರೆಸ್ಸೆಸ್-ಬಿಜೆಪಿಗೆ ಗೌರವ ಇಲ್ಲ ಎನ್ನುವುದಕ್ಕೆ ನಿದರ್ಶನ. ಸುಪ್ರೀಂ ತೀರ್ಪನ್ನೇ ಎತ್ತಿಹಿಡಿದಲ್ಲಿ ರಾಜ್ಯ ಸರ್ಕಾರವನ್ನು ಬುಡಮೇಲು ಮಾಡಲೂ ಹಿಂದೇಟು ಹಾಕುವುದಿಲ್ಲ ಎಂದು ನೀಡಿರುವ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ ಹಾಗೂ ಸರ್ವಾಧಿಕಾರಿ ಧೋರಣೆಯ ಪ್ರತೀಕ" ಎಂದು ಸಿಪಿಎಂ ಪಾಲಿಟ್‌ ಬ್ಯೂರೊ ಹೇಳಿಕೆ ನೀಡಿದೆ.

 ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಕೂಡಾ "ಅಮಿತ್ ಶಾ ಅವರ ಹೇಳಿಕೆ ವಿವೇಚನಾರಹಿತ ಮತ್ತು ಕ್ಷುಲ್ಲಕ" ಎಂದು ಟೀಕಿಸಿದ್ದಾರೆ. ತನ್ನ ಹಿತಾಸಕ್ತಿಗಾಗಿ ಬಿಜೆಪಿ ಸಂಸ್ಥೆಗಳನ್ನು ದುರ್ಬಲಗೊಳಿಸಲು ಮತ್ತು ನಾಶಪಡಿಸಲು ಮುಂದಾಗಿದೆ ಎಂದು ಅವರು ಟೀಕಿಸಿದ್ದಾರೆ. ಸಿಬಿಐ, ಚುನಾವಣಾ ಆಯೋಗ, ಸಿವಿಸಿ ಮತ್ತು ಸಿಐಸಿ ಹೀಗೆ ಒಂದೊಂದನ್ನೇ ನಾಶಪಡಿಸಲು ಬಿಜೆಪಿ ಮುಂದಾಗಿದೆ ಎಂದು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News