ಉಗ್ರರನ್ನು ಕೊಂದು ಉಗ್ರವಾದ ದಮನಿಸಬಹುದೆಂದು ನಾನಂದುಕೊಂಡಿಲ್ಲ: ಜಮ್ಮು ಕಾಶ್ಮೀರ ರಾಜ್ಯಪಾಲ

Update: 2018-10-29 08:16 GMT

ಶ್ರೀನಗರ್, ಅ.29: ಉಗ್ರರನ್ನು ಕೊಲ್ಲುವ ಮೂಲಕ ಉಗ್ರವಾದವನ್ನು ಮಟ್ಟ ಹಾಕಬಹುದೆಂದು ತಾನು ಅಂದುಕೊಂಡಿಲ್ಲ ಎಂದು ಹೇಳಿರುವ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್, ಉಗ್ರವಾದ ಮನುಷ್ಯನ ಮನಸ್ಸಿನಲ್ಲಿದೆ ಎಂದಿದ್ದಾರೆ.

ರಾಜ್ಯದ ಯುವಜನತೆಯ ವಿಶ್ವಾಸವನ್ನು ಮರಳಿ ಸಂಪಾದಿಸುವುದು ತನ್ನ ಕೆಲಸ ಎಂದು ಹೇಳಿದ ಅವರು, ರಾಜ್ಯದ ಯುವಜನತೆಗೆ ರಾಜಕೀಯ ಪಕ್ಷಗಳಲ್ಲಿ ನಂಬಿಕೆಯಿಲ್ಲ ಹಾಗೂ ಅವರು ಭಾರತ ಸರಕಾರದ ಬಗ್ಗೆ ಆಕ್ರೋಶ ಹೊಂದಿದ್ದಾರೆ ಎಂದರು.

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ ಎರಡು ತಿಂಗಳ ನಂತರ, ಆಗಸ್ಟ್‍ನಲ್ಲಿ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಮಲಿಕ್ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ``ಪ್ರಧಾನಿ ಮಾತುಕತೆಯ ಪರವಾಗಿದ್ದಾರೆ, ಬಂದೂಕು ತೊರೆದು ನಮ್ಮ ಬಳಿ ಮಾತುಕತೆಗೆ ಬರಬೇಕೆಂದು ವಿನಂತಿಸುತ್ತೇನೆ'' ಎಂದರು. ಈ ಹಿಂದೆ ದಿಲ್ಲಿ ಮತ್ತು ಶ್ರೀನಗರದಲ್ಲಿ ತಪ್ಪುಗಳು ನಡೆದಿವೆ. ಚುನಾವಣೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು  ಒಪ್ಪಿಕೊಳ್ಳುತ್ತೇನೆ, ಜನರನ್ನು ಅವರ ನಾಯಕರುಗಳೇ ಕೈಬಿಟ್ಟರು. ಸಂವಿಧಾನದ ವಿಧಿ370 ಹಾಗೂ 35 ಎ ನಿಮಗಿದೆ, ಮಾತುಕತೆಯ ಮೇಜಿಗೆ ಬನ್ನಿ. ಭಾರತದ ಸಂವಿಧಾನದಡಿ ನಿಮಗೆ ಏನು ಬೇಕಾದರೂ  ಕೊಡಲು ಸಿದ್ಧ,'' ಎಂದರಲ್ಲದೆ ರಾಜ್ಯದ ಯುವಜನತೆ ಪಾಕಿಸ್ತಾನದ ಬಗ್ಗೆಯೂ ಭ್ರಮನಿರಸನ ಹೊಂದಿದೆ ಎಂದರು.

ಹುರಿಯತ್ ನಾಯಕರುಗಳು ಸ್ವತಂತ್ರ ನಿಲುವು ತಾಳಬೇಕು ಎಂದೂ ಸಲಹೆ ನೀಡಿದ ಅವರು ತಾವು ಪಾಕಿಸ್ತಾನವನ್ನು  ತೊಂದರೆ ಸೃಷ್ಟಿಸುವ ದೇಶವಾಗಿ ಪರಿಗಣಿಸುವುದಾಗಿ ತಿಳಿಸಿದರು.

ತಾವು ರಾಜ್ಯಪಾಲರಾಗಿ ಅಧಿಕಾರ ವಹಿಸಿದಾಗಿನಿಂದ ಒಬ್ಬನೇ ಒಬ್ಬ ಯುವಕ ಉಗ್ರವಾದದತ್ತ ಹೊರಳಿಲ್ಲ ಹಾಗೂ ಯಾವುದೇ ಕಲ್ಲು ತೂರಾಟ ಘಟನೆಗಳೂ ನಡೆದಿಲ್ಲ ಎಂದು ಅವರು ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News