ಕುಲ್ಫಿ ಐಸ್‌ಕ್ರೀಮ್ ಮಾರುತ್ತಿದ್ದಾರೆ ಅರ್ಜುನ ಪ್ರಶಸ್ತಿ ಪುರಸ್ಕೃತ ಬಾಕ್ಸರ್ !

Update: 2018-10-29 09:26 GMT

   ಹೊಸದಿಲ್ಲಿ , ಅ.29: ದಿನೇಶ್ ಕುಮಾರ್ ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ ಹರಿಯಾಣದ ಬಾಕ್ಸರ್. 2010ರಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕೃಗೊಂಡಿರುವ ಬಾಕ್ಸರ್ ದಿನೇಶ್ ಕುಮಾರ್ ಇದೀಗ ಜೀವನ ಸಾಗಿಸಲು ಉದ್ಯೋಗವಿಲ್ಲದೆ ಹರಿಯಾಣದ ಭಿವಾನಿ ನಗರದ ರಸ್ತೆಗಳಲ್ಲಿ ಐಸ್ ಕ್ರೀಮ್ ಮಾರುವ ಕಾಯಕದಲ್ಲಿ ನಿರತರಾಗಿದ್ದಾರೆ.

      30ರ ಹರೆಯದ ದಿನೇಶ್ ಅವರು ‘ದಿನೇಶ್ ಕುಲ್ಫಿ ’ ಎಂಬ ಹೆಸರಿನ ತಳ್ಳು ಗಾಡಿಯಲ್ಲಿ ಕುಲ್ಫಿ ಐಸ್ ಕ್ರೀಮ್ ಮಾರುತ್ತಿದ್ದಾರೆ. 2010ರಲ್ಲಿ ದಿನೇಶ್ ಕುಮಾರ್ ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಆ ಬಳಿಕ ಅವರಿಗೆ ಅರ್ಜುನ ಪ್ರಶಸ್ತಿ ಒಲಿದು ಬಂದಿತ್ತು.

ದಿನೇಶ್ ಕುಮಾರ್ ಬಾಕ್ಸಿಂಗ್‌ನಲ್ಲಿ 17 ಚಿನ್ನ , 1 ಬೆಳ್ಳಿ ಮತ್ತು 5 ಕಂಚು ಪಡೆದಿದ್ದರು. ಇಷ್ಟೆಲ್ಲಾ ಸಾಧನೆ ಮಾಡಲು ಅವರ ತಂದೆ ಭಾರೀ ಸಾಲ ಮಾಡಿದ್ದರು. ಅಷ್ಟು ಮಾತ್ರವಲ್ಲ ಲಾರಿಯೊಂದಕ್ಕೆ ಅವರ ಕಾರು ಢಿಕ್ಕಿ ಹೊಡೆದ ಪರಿಣಾಮವಾಗಿ ದಿನೇಶ್ ಕುಮಾರ್ ಗಾಯಗೊಂಡರು. ದಿನೇಶ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅವರ ತಂದೆ ಮತ್ತೆ ಸಾಲ ಪಡೆದರು. ಇದು ದಿನೇಶ್ ಕುಮಾರ್‌ಗೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು.

 ಇನ್ನೂ ನಿರುದ್ಯೋಗಿಯಾಗಿರುವ ದಿನೇಶ್ ಕುಮಾರ್ ಸಾಲದ ಹೊರೆಯನ್ನು ತಾಳಲಾರದೆ ಇದೀಗ ಬೀದಿಯಲ್ಲಿ ಕುಲ್ಫಿ ಐಸ್ ಕ್ರೀಮ್ ಮಾರುತ್ತಾ ತನ್ನ ಭವಿಷ್ಯ ರೂಪಿಸಲು ತಂದೆ ಮಾಡಿಟ್ಟ ಸಾಲದ ಹೊರೆಯನ್ನು ಇಳಿಸಲು ಹೋರಾಡುತ್ತಿದ್ದಾರೆ. ದಿನೇಶ್ ಕುಮಾರ್ ಕಷ್ಟದಲ್ಲಿ ಸಿಲುಕಿಕೊಂಡಿದ್ದರೂ ಸರಕಾರ ಅವರ ಕಡೆಗೆ ಗಮನ ಹರಿಸಿಲ್ಲ.

  ‘‘ ನಾನು ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ನನ್ನ ವೃತ್ತಿ ಜೀವನದಲ್ಲಿ 17 ಚಿನ್ನ, 1 ಬೆಳ್ಳಿ ಮತ್ತು 5 ಕಂಚು ಪಡೆದಿದ್ದೆ.ನನಗೆ ಅಂತರ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತೆರಳಲು ತಂದೆ ಭಾರೀ ಸಾಲ ಮಾಡಿ ನನಗೆ ನೆರವಾಗಿದ್ದರು. ಸಾಲವನ್ನು ಮರುಪಾವತಿಸಲು ಇದೀಗ ಬೇರೆ ದಾರಿ ಕಾಣದೆ ನಾನು ನನ್ನ ತಂದೆಯ ಜೊತೆ ಐಸ್ ಕ್ರೀಮ್ ಮಾರುತ್ತಿದ್ದೇನೆ. ಹಿಂದಿನ ಅಥವಾ ಈಗಿನ ಸರಕಾರ ನನಗೆ ಯಾವುದೇ ನೆರವು ನೀಡಿಲ್ಲ. ನಾನೊಬ್ಬ ಉತ್ತಮ ಆಟಗಾರ. ಸಾಲ ಮರು ಪಾವತಿಸಲು ಸರಕಾರ ನನಗೆ ನೆರವಾಗಲಿ. ನನಗೆ ಸರಕಾರ ಉದ್ಯೋಗ ನೀಡಲಿ. ಯುವಕರನ್ನು ಅಂತರ್ ರಾಷ್ಟ್ರೀಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆಗಳಿಗೆ ತಯಾರು ಮಾಡುವ ಸಾಮರ್ಥ್ಯ ನನ್ನಲ್ಲಿದೆ ’’ ಎಂದು ದಿನೇಶ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News