ಚುನಾವಣಾ ಆಯೋಗದಿಂದ ವಿಶಿಷ್ಟ ಚೇತನರ ಮನೆ ಬಾಗಿಲಿಗೆ ವಾಹನ ವ್ಯವಸ್ಥೆ

Update: 2018-10-29 13:40 GMT

ಬೆಂಗಳೂರು, ಅ.29: ಲೋಕಸಭೆ ಹಾಗೂ ವಿಧಾನಸಭಾ ಉಪಚುನಾವಣೆಯಲ್ಲಿ ಗರಿಷ್ಠ ಮಟ್ಟದ ಮತದಾನ ದಾಖಲಿಸಲು ಚುನಾವಣಾ ಆಯೋಗ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದು, ವಿಶಿಷ್ಟ ಚೇತನರ ಮನೆ ಬಾಗಿಲಿಗೆ ವಾಹನ ವ್ಯವಸ್ಥೆಯನ್ನು ಕಲ್ಪಿಸಲು ಆಯೋಗ ಮುಂದಾಗಿದೆ.

ದೇಶದಲ್ಲೇ ಮೊದಲ ಬಾರಿಗೆ ಈ ಬಾರಿಯ ರಾಜ್ಯದ ಉಪ ಚುನಾವಣೆಯಲ್ಲಿ ವಿಶಿಷ್ಟ ಚೇತನರಿಗೆ ವಾಹನ ಹಾಗೂ ಗಾಲಿ ಕುರ್ಚಿ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶಿಷ್ಟ ಚೇತನರು ಮೊದಲೇ ನೋಂದಣಿ ಮಾಡಿ ಗಾಲಿಕುರ್ಚಿ ಮತ್ತು ವಾಹನ ಸೌಲಭ್ಯವನ್ನು ಪಡೆಯುವ ವ್ಯವಸ್ಥೆಯನ್ನು ಉಪ ಚುನಾವಣೆಯಲ್ಲಿ ನೀಡಲಾಗಿದೆ.

ಮತದಾರರ ಗುರುತಿನ ಚೀಟಿ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆಯಲ್ಲಿ ಅಥವಾ ಚುನಾವಣೆ ಎಂಬ ಆ್ಯಪ್‌ನಲ್ಲಿ ನೋಂದಣಿ ಮಾಡಿದರೆ ಚುನಾವಣಾ ದಿನದಂದು ವಿಶಿಷ್ಟ ಚೇತನರ ಮನೆಗೆ ವಾಹನ ಬಂದು ಅವರನ್ನು ಕರೆದುಕೊಂಡು ಹೋಗುತ್ತದೆ.

ನ.1ರ ಮಧ್ಯರಾತ್ರಿವರೆಗೆ ವಿಶೇಷ ಚೇತನರು ನೋಂದಾವಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ವಿಶಿಷ್ಟ ಚೇತನರಿಗೆ ವೀಲ್‌ಚೇರ್ ಕಲ್ಪಿಸಲು ನಿರ್ಧರಿಸಲಾಗಿದೆ. ಉಪ ಚುನಾವಣೆ ಯಲ್ಲಿ ಹೆಚ್ಚಿನ ಮತದಾನ ನಡೆಯಬೇಕು ಎಂಬುದು ಆಯೋಗದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಇಂತಹ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿಯೂ ಇವುಗಳನ್ನು ಮುಂದುವರಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News