ಮೋದಿಯ ತಪ್ಪುಗಳಿಂದ ಜಮ್ಮು ಮತ್ತು ಕಾಶ್ಮೀರ ಹೊತ್ತಿಉರಿಯುತ್ತಿದೆ: ರಾಹುಲ್ ಗಾಂಧಿ

Update: 2018-10-29 14:19 GMT

ಉಜ್ಜೈನ್(ಮ.ಪ್ರ),ಅ.29: ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಮಾಡಿರುವ ತಪ್ಪುಗಳ ಪರಿಣಾಮವಾಗಿ ಇಂದು ಕಣಿವೆ ರಾಜ್ಯ ಹೊತ್ತಿ ಉರಿಯುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಚುನಾವಣೆಗೆ ಸಜ್ಜಾಗಿರುವ ಮಧ್ಯಪ್ರದೇಶದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ, ಒನ್ ರ್ಯಾಂಕ್, ಒನ್ ಪೆನ್ಶನ್ (ಒಆರ್‌ಒಪಿ) ಯೋಜನೆಯನ್ನು ಇನ್ನೂ ಜಾರಿ ಮಾಡಲಾಗಿಲ್ಲ ಮತ್ತು ಪ್ರಧಾನಿ ಮೋದಿ ಈ ವಿಷಯದಲ್ಲಿ ಸುಳ್ಳುಗಳನ್ನೇ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಒಆರ್‌ಒಪಿ ವಿಷಯದಲ್ಲಿ ನಾವು ಮೋದಿಯನ್ನು ನಂಬಿದ್ದೆವು. ಆದರೆ ಈಗ ನಮಗೆ ನಿರಾಶೆಯಾಗಿದೆ ಎಂದು ಕೆಲದಿನಗಳ ಹಿಂದೆ ನನ್ನನ್ನು ಭೇಟಿ ಮಾಡಿದ್ದ ನಿವೃತ್ತ ಯೋಧರ ನಿಯೋಗ ತಿಳಿಸಿತ್ತು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ಒಆರ್‌ಒಪಿಯನ್ನು ಜಾರಿಗೆ ತರಲಾಗಿದೆ ಎಂದು ಪ್ರಧಾನಿಯವರು ಹೇಳುತ್ತಾರೆ, ಆದರೆ ಅವರು ಸುಳ್ಳು ಹೇಳುತ್ತಿದ್ದಾರೆ. ಈವರೆಗೂ ಒಆರ್‌ಒಪಿಯನ್ನು ಅನುಷ್ಟಾನಗೊಳಿಸಲಾಗಿಲ್ಲ. ಮೋದಿ ಹೇಳುತ್ತಾರೆ ಆದರೆ ನಿವೃತ್ತ ಯೋಧರು ಇದನ್ನು ನಿರಾಕರಿಸುತ್ತಾರೆ ಎಂದು ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.

ಮೋದಿ ಸರಕಾರದ ಜಮ್ಮು ಮತ್ತು ಕಾಶ್ಮೀರದ ಬಾಗಿಲನ್ನು ಉಗ್ರರಿಗೆ ತೆರೆದಿದೆ. ಅಲ್ಲಿ ಯಾವೊಬ್ಬ ರಾಜಕಾರಣಿಯೂ ಹುತಾತ್ಮನಾಗುತ್ತಿಲ್ಲ. ಬದಲಿಗೆ ಯೋಧರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದೆಲ್ಲ ನಡೆಯುತ್ತಿರುವುದು ಮೋದಿ ಮಾಡಿದ ತಪ್ಪಿನಿಂದ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಪ್ರಧಾನಿ ಸರ್ಜಿಕಲ್ ಸ್ಟ್ರೈಕ್, ಸೇನೆ, ವಾಯುಪಡೆ ಬಗ್ಗೆ ಮಾತನಾಡುತ್ತಾರೆ. ಆದರೆ ಯೋಧರ ಕುರಿತು ಮಾತನಾಡುವುದಿಲ್ಲ. ಅವರು ಹೇಳಿಕೆಗಳನ್ನು ನೀಡುತ್ತಾರೆ. ಕನಿಷ್ಟಪಕ್ಷ, ಸರ್ಜಿಕಲ್ ಸ್ಟ್ರೈಕ್ ನಡೆಸಿದ ಯೋಧರಿಗೆ ನೀವೇನು ಮಾಡಿದ್ದೀರಿ ಎಂಬುದನ್ನಾದರೂ ತಿಳಿಸಿ ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಮೋದಿಯ ಪಕೋಡ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್ ಅಧ್ಯಕ್ಷ, ನೀವು ಪಕೋಡಾ ತಯಾರಿಸಿದರೆ ಬಿಜೆಪಿ ಎಣ್ಣೆಯ ಹಣವನ್ನೇ ಲೂಟಿ ಮಾಡುತ್ತದೆ. ಅಷ್ಟು ಮಾತ್ರವಲ್ಲ, ಅದು ಕಾಯಿಸಿದ ಪಕೋಡವನ್ನೂ ತಿನ್ನುತ್ತದೆ ಎಂದು ವ್ಯಂಗ್ಯ ಮಾಡಿದ್ದಾರೆ. ಮೋದಿ ಮತ್ತು ಜೇಟ್ಲಿ ಸೇರಿ ಮದ್ಯದ ದೊರೆ ವಿಜಯ್ ಮಲ್ಯ, ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ದೇಶದ ಹಣದ ಜೊತೆ ಪರಾರಿಯಾಗಲು ಅವಕಾಶ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News