ಪಾರ್ಶ್ವವಾಯು ಅಂಗ ವೈಖಲ್ಯತೆಗೆ ಕಾರಣ: ನ್ಯಾ.ಎಂ.ಎನ್.ವೆಂಕಟಾಚಲಯ್ಯ

Update: 2018-10-29 15:08 GMT

ಬೆಂಗಳೂರು, ಅ. 29: ಪಾರ್ಶ್ವವಾಯು ಒಂದು ಗಂಭೀರ ಕಾಯಿಲೆ ಆಗಿದ್ದು, ಇದು ಜನರನ್ನು ಕಾಡುತ್ತಿದೆ. ಇದರ ಪರಿಣಾಮದಿಂದ ಅಂಗ ವೈಕಲ್ಯತೆ ಹಾಗೂ ಪ್ರಾಣಹಾನಿಗೆ ಪ್ರಮುಖ ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸೋಮವಾರ ನಗರದ ರಾಜಭವನ ರಸ್ತೆಯ ಖಾಸಗಿ ಹೊಟೇಲ್ನ ಸಭಾಂಗಣದಲ್ಲಿ ಬಿಆರ್ ಲೈಫ್ ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆ ಏರ್ಪಡಿಸಿದ್ದ, ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಅಂಚೆ ಇಲಾಖೆ ಹೊರ ತಂದಿರುವ ವಿಶೇಷ ಅಂಚೆಚೀಟಿಗಳನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಬಿಡುಗಡೆ ಮಾಡಿ ಮಾತನಾಡಿದರು.

ಪಾರ್ಶ್ವವಾಯು ಕಾಯಿಲೆಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ದೊರೆಯುವ ವಾತಾವರಣ ನಿರ್ಮಾಣ ಆಗಬೇಕು. ಹಾಗೂ ಪ್ರತಿಯೊಬ್ಬರು ಜೀವನ ಕ್ರಮವನ್ನು ಅತ್ಯಂತ ಆರೋಗ್ಯಕಾರಿಯಾಗಿ ನಿಭಾಯಿಸಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.

ಆಸ್ಪತ್ರೆಯ ನರರೋಗ ವಿಭಾಗದ ಮುಖ್ಯಸ್ಥ ಡಾ.ಎಸ್.ಕೆ.ವೆಂಕಟರಮಣ ಮಾತನಾಡಿ, ಪಾರ್ಶ್ವವಾಯು ಒಂದು ಗುಣಪಡಿಸುವ ಕಾಯಿಲೆ ಆಗಿದೆ. ರೋಗದ ಮೊದಲ ಹಂತದಲ್ಲೇ, ಚಿಕಿತ್ಸೆ ಪಡೆಯಲು ಮುಂದಾದರೆ, ದೇಹವನ್ನು ಸಂಪೂರ್ಣವಾಗಿ ಆರೋಗ್ಯವಾಗಿಡಬಹುದು ಎಂದು ತಿಳಿಸಿದರು.

ಪಾರ್ಶ್ವವಾಯು ಎಂಬುದು ವೈದ್ಯಕೀಯ ತುರ್ತು ಆಗಿದ್ದು, ಐದು ನಿಮಿಷಗಳ ಅವಧಿಯಲ್ಲಿ ವ್ಯಕ್ತಿಯ ಸಾವಿಗೆ ಕಾರಣವಾಗಬಹುದಾಗಿದೆ. ಪಾರ್ಶ್ವವಾಯು ರಕ್ತದ ಹರಿವನ್ನು ಮೆದುಳಿಗೆ ಸ್ಥಗಿತಗೊಳಿಸಲಿದ್ದು, ಮೆದುಳಿನ ಕಣಗಳಿಗೆ ಪ್ರತಿ ಗಂಟೆಗೆ ಲಕ್ಷಾಂತರ ಕಣಗಳಿಗೆ ಹಾನಿ ಉಂಟುಮಾಡಬಲ್ಲದು. ಪ್ರತಿ ವರ್ಷ ಕಾಡುತ್ತಿರುವ ಪಾರ್ಶ್ವವಾಯುವಿನ ಸ್ವರೂಪವೂ ಭಿನ್ನವಾಗಿದೆ. ಸಾಮಾನ್ಯವಾಗಿ ಕಾಡುವ ಎರಡು ಪಾರ್ಶ್ವವಾಯುವೆಂದರೆ ಇಶ್ಚೆಮಿಕ್ ಸ್ಟ್ರೋಕ್ ಮತ್ತು ಹೆಮಿರೊಚಾರ್ಜಿಕ್ ಸ್ಟ್ರೋಕ್. ಇಶ್ಚೆಮಿಕ್ ಸ್ಟ್ರೋಕ್‌ನಿಂದ ಸಾಮಾನ್ಯವಾಗಿ ರಕ್ತನಾಳದಲ್ಲಿ ಬ್ಲಾಕೇಜ್ ಇರುತ್ತದೆ. ರಕ್ತದ ಹರಿವನ್ನು ಮೆದುಳಿಗೆ ಸ್ಥಗಿತಗೊಳಿಸಲಿದೆ. ಆಂತರಿಕ ರಕ್ತಸ್ರಾವ ಎರಡನೇ ಸ್ವರೂಪದ ಪಾರ್ಶ್ವವಾಯುವಿನಲ್ಲಿ ಸಾಮಾನ್ಯವಾಗಿದೆ. ಸುಮಾರು 30 ರಿಂದ 60ರಷ್ಟು ಮಂದಿ ಎರಡನೇ ಸ್ವರೂಪದ ಪಾರ್ಶ್ವ ವಾಯುವಿನಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೋ, ಬಿಆರ್ ಲೈಫ್ ಆಸ್ಪತ್ರೆಯ ಸಿಇಒ ಕರ್ನಲ್ ಹೇಮರಾಜ್ ಸಿಂಗ್ ಪರ್ಮಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News