ಲೈಂಗಿಕ ಕಿರುಕುಳ: ಸುಹೇಲ್ ಸೇಥ್ ಟಾಟಾ ಗುಂಪಿನಿಂದ ಹೊರಕ್ಕೆ

Update: 2018-10-29 16:10 GMT

ಮುಂಬೈ, ಅ. 29: ದೇಶಾದ್ಯಂತ ಹಬ್ಬುತ್ತಿರುವ ‘ಮೀ ಟೂ’ ಚಳವಳಿಯ ಹಿನ್ನೆಲೆಯಲ್ಲಿ ಹಲವು ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ವ್ಯಕ್ತಪಡಿಸಿದ ಬಳಿಕ ಬ್ರಾಂಡ್ ಕನ್ಸಲ್ಟೆಂಟ್ ಸುಹೇಲ್ ಸೇಥ್ ಅವರನ್ನು ಟಾಟಾ ಸಮೂಹ ಸಂಸ್ಥೆಯಿಂದ ಕೈಬಿಡಲು ನಿರ್ಧರಿಸಿದೆ.

ಬ್ರಾಂಡ್ ಕನ್ಸಲ್ಟೆಂಟ್‌ರೊಂದಿಗೆ ಕಂಪೆನಿ ಸಂಬಂಧ ಕಡಿದುಕೊಳ್ಳಲು ಪರಿಶೀಲನೆ ನಡೆಸುತ್ತಿದೆ ಎಂದು ಆರಂಭದಲ್ಲಿ ಹೇಳಿದ ಬಳಿಕ ಟಾಟಾ ಸಮೂಹದ ಹೋಲ್ಡಿಂಗ್ ಕಂಪೆನಿ ಟಾಟಾ ಸನ್ಸ್ ಸೇಥ್ ಅವರ ಗುತ್ತಿಗೆ ಅಂತಿಮಗೊಳಿಸಲು ತೀರ್ಮಾನಿಸಿದೆ. ಟಾಟಾ ಸನ್ಸ್‌ನೊಂದಿಗಿನ ಕೌನ್ಸೆಲೇಜ್ (ಸುಹೇಲ್ ಸೇಥ್ ಸಂಸ್ಥೆ) ನ ಗುತ್ತಿಗೆ 2018 ನವೆಂಬರ್ 30ರಂದು ಅಂತ್ಯಗೊಳ್ಳಲಿದೆ ಎಂದು ಟಾಟಾ ಸಮೂಹದ ಹೇಳಿಕೆ ಮಂಗಳವಾರ ತಿಳಿಸಿದೆ. ಮಹಿಳೆಯರು ಆರೋಪ ವ್ಯಕ್ತಪಡಿಸಿದ ಕೂಡಲೇ ಟಾಟಾ ವಕ್ತಾರ, ಮಹಿಳೆಯರಿಗೆ ಸುರಕ್ಷಿತ ಕೆಲಸದ ಸ್ಥಳ ಒದಗಿಸಲು ಟಾಟಾ ಗುಂಪು ಬದ್ಧವಾಗಿದೆ. ಸೇಥ್ ಅವರ ಕುರಿತು ಮಾಧ್ಯಮದಲ್ಲಿ ಇತ್ತೀಚೆಗೆ ವರದಿಯಾದ ವಿಷಯಗಳನ್ನು ನಾವು ಗಮನಿಸಿದ್ದೇವೆ. ಈ ವಿಷಯಕ್ಕೆ ಸಂಬಂಧಿಸಿ ನಾವು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ.

ಮೋಡೆಲ್ ಡಯಾಂದ್ರ ಸೋರ್ಸ್‌, ಲೇಖಕಿ ತ್ರಿವೇದಿ ಹಾಗೂ ಚಿತ್ರನಿರ್ದೇಶಕಿ ನತಾಶ್ ರಾಥೋಡ್ ಸಹಿತ ಆರು ಮಹಿಳೆಯರು ಸೇಥ್ ವಿರುದ್ಧ ಲೈಂಗಿಕ ಆರೋಪ ಹೊರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News