'ಆಳ್ವಾಸ್' ವಿದ್ಯಾರ್ಥಿನಿಯರ ಅಸಹಜ ಸಾವು ಪ್ರಕರಣ: ಸರಕಾರಿ ವಕೀಲರಿಂದ ಹೈಕೋರ್ಟ್‌ಗೆ ತನಿಖಾ ಪ್ರಗತಿ ವರದಿ ಸಲ್ಲಿಕೆ

Update: 2018-10-29 16:40 GMT

ಬೆಂಗಳೂರು, ಅ.29: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ವಸತಿ ಕಾಲೇಜಿನ ವಿದ್ಯಾರ್ಥಿನಿಯರಿಬ್ಬರ ಅಸಹಜ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರಕಾರಿ ಪರ ವಕೀಲರು ಪ್ರಕರಣದ ತನಿಖಾ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿತು.

ಮೃತ ವಿದ್ಯಾರ್ಥಿನಿಯರಾದ ಕಾವ್ಯ ಪೂಜಾರಿ ಹಾಗೂ ರಚನಾ ಮಂಜುನಾಥ್ ಪಾಲಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಈ ವೇಳೆ ಪ್ರಕರಣದ ತನಿಖಾ ಪ್ರಗತಿ ವರದಿಯನ್ನು ಸರಕಾರಿ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣವೇನು: ಆಳ್ವಾಸ್ ಎಜುಕೇಶನ್ ಫೌಂಡೇಶನ್ ನಡೆಸುತ್ತಿರುವ ಶಾಲೆ ಮತ್ತು ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿದ್ದ ಕಾವ್ಯ ಪೂಜಾರಿ 2017ರಲ್ಲಿ ಮತ್ತು ರಚನಾ ಮಂಜುನಾಥ್ 2018ರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ರಾಜ್ಯ ಪೊಲೀಸರು ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಿಭಾಯಿಸಿಲ್ಲ. ತನಿಖೆಯಲ್ಲಿ ಸಾಕಷ್ಟು ಲೋಪಗಳಿವೆ. ಆಳ್ವಾಸ್ ಫೌಂಡೇಶನ್‌ನ ಟ್ರಸ್ಟಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪೊಲೀಸರು ಕೆಲಸ ಮಾಡುತ್ತಿದ್ದು, ತನಿಖೆ ತಾರತಮ್ಯದಿಂದ ಕೂಡಿದೆ. ಪ್ರಕರಣದ ದೂರು ನೀಡಿರುವ ನಮಗೆ ಪೊಲೀಸರು ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಅರ್ಜಿದಾರರು, ಪ್ರಕರಣದ ತನಿಖೆ ಸಿಬಿಐಗೆ ವಹಿಸಲು ಸರಕಾರಕ್ಕೆ ಆದೇಶಿಸಬೇಕು ಹಾಗೂ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಸಮಯ ನಿಗದಿಪಡಿಸಬೇಕು ಎಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News