ಮೇಯರ್ ಗಂಗಾಂಬಿಕೆ ಅವರ ಮೊದಲ ಕೌನ್ಸಿಲ್ ಸಭೆ: ರಸ್ತೆಗೆ ಉಪಮೇಯರ್ ಹೆಸರಿಡಲು ಮನವಿ

Update: 2018-10-29 16:43 GMT

ಬೆಂಗಳೂರು, ಅ.29: ಬಿಬಿಎಂಪಿಯ ನೂತನ ಮೇಯರ್ ಗಂಗಾಂಬಿಕೆ ಅವರ ಮೊದಲ ಕೌನ್ಸಿಲ್ ಸಭೆಯಲ್ಲಿ, ಇತ್ತೀಚಿಗೆ ನಿಧನ ಹೊಂದಿದ ಉಪಮೇಯರ್ ರಮೀಳಾ ಉಮಾಶಂಕರ್ ಅವರಿಗೆ ಸಂತಾಪ ಸೂಚಿಸಲಾಯಿತು. ಈ ವೇಳೆ, ಪಾಲಿಕೆಯ ಸದಸ್ಯರು, ರಮೀಳಾ ಅವರ ಹೆಸರನ್ನು ನಗರದ ರಸ್ತೆಯೊಂದಕ್ಕೆ ಅಥವಾ ವೃತ್ತಕ್ಕೆ ನಾಮಕಾರಣ ಮಾಡಬೇಕೆಂದು ಮನವಿ ಮಾಡಿದರು.

ಸೋಮವಾರ ನಗರದ ಕೆಂಪೇಗೌಡ ಪೌರ ಸಭಾಂಗಣ ಆವರಣದಲ್ಲಿ ರಮೀಳಾ ಉಮಾಶಂಕರ್ ಅವರ ಭಾವಚಿತ್ರವಿಟ್ಟು, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ವಿಪಕ್ಷ ನಾಯಕ ಪದ್ಮನಾಭರೆಡ್ಡಿ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ, ಶಾಂತಕುಮಾರಿ ಸೇರಿದಂತೆ ಪಾಲಿಕೆ ಸದಸ್ಯರು ಪುಷ್ಪನಮನ ಸಲ್ಲಿಸಿದರು.

ಬಳಿಕ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ಮಾತನಾಡಿ, ಕಾವೇರಿಪುರ ವಾರ್ಡ್‌ನ ಸದಸ್ಯೆ ರಮೀಳಾ ಉಮಾಶಂಕರ್ ಅವರ ಮನೆ ಗೋವಿಂದರಾಜನಗರ ವಾರ್ಡ್‌ನಲ್ಲಿದ್ದು, ನಾನು ರಸ್ತೆ ಕಾಮಗಾರಿ ವೀಕ್ಷಣೆಗೆ ರಮೀಳಾ ಅವರ ಮನೆಮುಂದೆ ಹೋಗುವಾಗ ನನ್ನನ್ನು ಕರೆದು ಟೀ ಕುಡಿಸಿ ಕಳುಹಿಸುತ್ತಿದ್ದರು. ಪ್ರತಿಯೊಬ್ಬರೊಂದಿಗೆ ಸೌಜನ್ಯದಿಂದ ಮಾತನಾಡುತ್ತಿದ್ದರು. ಕಾವೇರಿಪುರ ವಾರ್ಡ್‌ನ ರಸ್ತೆ, ವೃತ್ತಕ್ಕೆ ಅವರ ಹೆಸರಿಡಬೇಕು ಎಂದು ಮನವಿ ಮಾಡಿದರು.

ಮೇಯರ್, ಉಪಮೇಯರ್ ಮಹಿಳೆಯರೇ ಆಗಿರುವುದರಿಂದ ನಗರಾಭಿವೃದ್ಧಿ ಸಾಧ್ಯವೇ ಎಂಬ ಮಾಧ್ಯಮದ ಪ್ರಶ್ನೆಗೆ ಏನು ಉತ್ತರ ಕೊಡಬೇಕು ಎಂದು ರಮೀಳಾ ನನ್ನ ಬಳಿ ಕೇಳಿದ್ದರು. ನಾನು ಮಹಿಳೆಯರೇ ಸ್ಟ್ರಾಂಗ್, ಪುರುಷರಿಗಿಂತ ಚೆನ್ನಾಗಿ ಕೆಲಸ ಮಾಡುತ್ತೇವೆ ಎಂದು ಉತ್ತರಿಸಿ. ಬೆಂಗಳೂರು ಅಭಿವೃದ್ಧಿಗೆ ನಿಮ್ಮದೇ ಯೋಜನೆ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದ್ದೆ ಎಂದು ಮಾಜಿ ಮೇಯರ್ ಪದ್ಮಾವತಿ ನೆನಪು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News