ಮನುಕಾಲಕ್ಕೆ ಒಯ್ಯುತ್ತಿರುವ ಶಿಕ್ಷಣದ ಖಾಸಗೀಕರಣ

Update: 2018-10-30 04:56 GMT

90ರ ದಶಕದಿಚೆಗೆ ‘ತ್ರಿಕರಣ’ಗಳು ದೇಶದ ಸಾಮಾಜಿಕ ಸ್ಥಿತಿಗತಿಗಳ ಮೇಲೆ ನೇರ ಪರಿಣಾಮ ಬೀರತೊಡಗಿದವು. ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಇವು ಮೂರು ಒಂದೇ ಕರುಳ ಬಳ್ಳಿಯ ಕುಡಿಗಳು. ಸರಕಾರದ ವ್ಯವಸ್ಥೆಯ ಕುರಿತಂತೆ ಜನರಲ್ಲಿ ಅಸಹನೆಯನ್ನು ಹುಟ್ಟಿಸುತ್ತಾ, ಖಾಸಗೀಕರಣಗೊಂಡರೆ ಎಲ್ಲವೂ ಸರಿಯಾಗುತ್ತದೆ ಎನ್ನುವ ಮನಸ್ಥಿತಿಯನ್ನು ಶ್ರೀಸಾಮಾನ್ಯನಲ್ಲಿ ಹರಡುತ್ತಾ ಒಂದೊಂದೇ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿ ಶಕ್ತಿಗಳು ನುಂಗುತ್ತಾ ಬಂದವು. ಖಾಸಗೀಕರಣದಿಂದ ಗುಣಮಟ್ಟ ಹೆಚ್ಚಿದವೋ ಇಲ್ಲವೋ, ಯಾವಾಗ ಸಾಮಾಜಿಕ ಸೇವೆಯ ಗುಣಲಕ್ಷಣಗಳುಳ್ಳ ಕ್ಷೇತ್ರಗಳೂ ಖಾಸಗಿಯವರ ಪಾಲಾದವೋ, ಅದರ ನೇರ ಪರಿಣಾಮಗಳನ್ನು ತಳಸ್ತರದ ಜನರು ಅನುಭವಿಸತೊಡಗಿದರು.

ಖಾಸಗಿ ವಲಯದಲ್ಲಿ ಮೀಸಲಾತಿ ಇಲ್ಲದೇ ಇರುವುದರಿಂದ, ದಲಿತರು ಸೇರಿದಂತೆ ಶೋಷಿತ ವರ್ಗದ ಜನರು ಉದ್ಯೋಗಗಳಲ್ಲಿ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಾರ್ವಜನಿಕ ಸೇವಾ ಕ್ಷೇತ್ರಗಳು ಬಡವರು, ದುರ್ಬಲರ ಕೈಗೆಟುಕದ ಸ್ಥಿತಿ ನಿರ್ಮಾಣವಾಗುತ್ತಿದೆ. ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ, ಶಿಕ್ಷಣದ ಖಾಸಗೀಕರಣ. ಇದು ಈ ದೇಶದ ಬಡವರನ್ನು, ದುರ್ಬಲಜಾತಿಯ ಜನರನ್ನು ಮತ್ತೆ ಹಿಂದಕ್ಕೆ ಒಯ್ಯುವ ಸೂಚನೆಗಳನ್ನು ನೀಡುತ್ತಿದೆ. ಸ್ವಾತಂತ್ರದ ಅತಿ ಮುಖ್ಯ ಆಶಯಗಳಲ್ಲಿ ಒಂದಾಗಿದೆ ಸರ್ವರಿಗೂ ಶಿಕ್ಷಣ. ಬ್ರಿಟಿಷರು ಈ ದೇಶಕ್ಕೆ ಕಾಲಿಡುವ ಮೊದಲು ಕೆಳ ಜಾತಿಯ ಜನರು ಶಿಕ್ಷಣ ಪಡೆಯುಂತಹ ಸ್ಥಿತಿ ಇರಲಿಲ್ಲ. ಗುರುಕುಲ ಪದ್ಧತಿಯಲ್ಲಿ ಕ್ಷತ್ರಿಯರು ಮತ್ತು ಬ್ರಾಹ್ಮಣರು ಶಿಕ್ಷಣಕ್ಕೆ ಅರ್ಹರಾಗಿದ್ದರು. ಇಂಗ್ಲಿಷ್ ಶಿಕ್ಷಣ ಕಾಲಿಟ್ಟ ಬಳಿಕ, ಕೆಳ ಜಾತಿಯವರಿಗೆ ಶಿಕ್ಷಣ ಹೆಬ್ಬಾಗಿಲು ತೆರೆಯಿತು. ಸ್ವಾತಂತ್ರದ ಬಳಿಕ ಸರ್ವರೂ ಶಿಕ್ಷಣ ಪಡೆಯುವುದು ಹಕ್ಕಾಗಿ ಮಾರ್ಪಟ್ಟಿತು. ಆದರೆ ಶಿಕ್ಷಣದ ಖಾಸಗೀಕರಣ ಮತ್ತೆ ಮನು ವ್ಯವಸ್ಥೆಯ ಕಡೆಗೆ ಸಮಾಜವನ್ನು ಒಯ್ಯುತ್ತಿದೆ. ಸರಕಾರಿ ಶಾಲೆಗಳನ್ನು ಬೇರೆ ಬೇರೆ ನೆಪ ಒಡ್ಡಿ ಮುಚ್ಚಲಾಗುತ್ತಿದೆ. ಇತ್ತ ಖಾಸಗಿ ಶಿಕ್ಷಣ ದುಬಾರಿಯಾಗುತ್ತಿದೆ. ಬಡವರು ಖಾಸಗಿ ಶಾಲೆಗಳ ಮೆಟ್ಟಿಲು ಹತ್ತಲಾಗದಂತಹ ಸ್ಥಿತಿಯಿದೆ. ಈ ಬಡವರಲ್ಲಿ ಶೇ. 90ರಷ್ಟು ಕೆಳಜಾತಿಯ ಜನರು ಎನ್ನುವುದನ್ನು ಗಮನಿಸಬೇಕು.

ಭಾರತಕ್ಕೆ ಸ್ವಾತಂತ್ರ ದೊರೆತ ಆನಂತರ ಕೇಂದ್ರ ಸರಕಾರವು ಶಿಕ್ಷಣದ ಕುರಿತಾಗಿ ಕೆಲವು ನಿರ್ದಿಷ್ಟ ನೀತಿಗಳನ್ನು ಜಾರಿಗೆ ತಂದಿದ್ದು, ಆಯೋಗಗಳನ್ನು ಸ್ಥಾಪಿಸಿದೆ.ದೇಶಾದ್ಯಂತ ಶೈಕ್ಷಣಿಕ ಪರಿವರ್ತನೆಯನ್ನು ತರುವ ಪ್ರಯತ್ನವಾಗಿ ಕೇಂದ್ರ ಸರಕಾರವು ಗ್ರಾಮೀಣ ಜನತೆಯಲ್ಲಿ ಶೈಕ್ಷಣಿಕ ಜಾಗೃತಿಯನ್ನು ಮೂಡಿಸಲು, ಅನಕ್ಷರತೆಯನ್ನು ಹೋಗಲಾಡಿಸಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಪರಿಣಾಮವಾಗಿ ಬಡವರು ಕೂಡಾ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಬಹುದಾಗಿದೆ. ಅವರಿಗೆ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಶಿಕ್ಷಣ ಕೊಡಿಸಲು ಹಂಬಲಿಸಬಹುದಾಗಿತ್ತು. ಆರಂಭದಲ್ಲಿ, ದೇಶದ ಶಿಕ್ಷಣದ ಗುಣಮಟ್ಟವು ತೃಪ್ತಿಕರವಾಗಿತ್ತು. ಸರಕಾರವು ನಡೆಸುವ ಶಿಕ್ಷಣಸಂಸ್ಥೆಗಳಲ್ಲಿ ಶಿಕ್ಷಣವನ್ನು ಪಡೆಯುವುದು ಬಹುತೇಕ ನಾಗರಿಕರಿಗೆ ಆರ್ಥಿಕವಾಗಿ ಹೊರೆಯಾಗುತ್ತಿರಲಿಲ್ಲ. ಬಡ ವಿದ್ಯಾರ್ಥಿಗಳಿಗೆ ಶಿಕ್ಷಣವು ಉಚಿತವಾಗಿತ್ತು. ಬೋಧಕವರ್ಗ ಹಾಗೂ ವಿದ್ಯಾರ್ಥಿಗಳು ತಮ್ಮತಮ್ಮ ಕರ್ತವ್ಯಗಳಿಗೆ ವಿಧೇಯರಾಗಿದ್ದರು. ಶಿಕ್ಷಕರಾಗಿ ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆಯನ್ನು ಹೊಂದಿದ್ದರು ಹಾಗೂ ತಮ್ಮ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ತಮ್ಮಿಂದ ಸಾಧ್ಯವಿರುವಷ್ಟು ಪ್ರಯತ್ನಿಸುತ್ತಿದ್ದರು.

ಸರಕಾರಿ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಅತ್ಯಧಿಕ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತಿತ್ತು. ಸರಕಾರಿ ಶಾಲೆಗಳು ಲಕ್ಷಾಂತರ ವೈದ್ಯರು, ಇಂಜಿನಿಯರ್‌ಗಳು, ಉನ್ನತ ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು, ಬರಹಗಾರರನ್ನು ಸೃಷ್ಟಿಸಿ, ದೇಶ ನಿರ್ಮಾಣಕ್ಕೆ ಕೊಡುಗೆ ನೀಡಿದ್ದವು. ಸಂವಿಧಾನದ 021ಎ ವಿಧಿಯು ಶಿಕ್ಷಣದ ಹಕ್ಕನ್ನು ಪ್ರತಿಪಾದಿಸುತ್ತದೆ. ದೇಶದ ಎಲ್ಲಾ ರಾಜ್ಯಗಳು ಆರರಿಂದ 14 ವರ್ಷ ಪ್ರಾಯದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಒದಗಿಸುವುದನ್ನು ಈ ವಿಧಿಯು ಕಡ್ಡಾಯಗೊಳಿಸುತ್ತದೆ. ಬಡ,ಅವಕಾಶವಂಚಿತ ಮಕ್ಕಳಿಗೆ ಶಿಕ್ಷಣವನ್ನು ಪಡೆಯುವ ಕನಸನ್ನು ಈಡೇರಿಸುವ ಅವಕಾಶವನ್ನು ಅದು ದೊರಕಿಸಿಕೊಟ್ಟಿದೆ. ಆದಾಗ್ಯೂ, ಸರಕಾರಿ ಶಾಲೆಗಳಲ್ಲಿ ಈ ವ್ಯವಸ್ಥೆಯು ಹದಗೆಟ್ಟಿದೆ. ಈಗ ಅದು ಕೇವಲ ಶಿಕ್ಷಣವನ್ನು ಒದಗಿಸುವ ತನ್ನ ಭರವಸೆಯನ್ನು ಮಾತ್ರವೇ ಉಳಿಸಿಕೊಂಡಿದೆಯೇ ಹೊರತು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿಲ್ಲ. ಶಿಕ್ಷಣದ ಖಾಸಗೀಕರಣದಿಂದಾಗಿ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ನಾಯಿಕೊಡೆಗಳಂತೆ ಮೇಲೇಳುತ್ತಿರುವಂತೆಯೇ, ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವು ಶಿಥಿಲಗೊಳ್ಳತೊಡಗಿದೆ.

ಇಂದು ದೇಶದಲ್ಲಿ ನರ್ಸರಿ ಶಾಲೆಯಿಂದ ಹಿಡಿದು ಸ್ನಾತಕೋತ್ತರ ಪದವಿ ಶಿಕ್ಷಣದವರೆಗಿನ ಖಾಸಗಿ ಸಂಸ್ಥೆಗಳು ವ್ಯಾಪಕವಾಗಿ ಬೆಳೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಬಂಡವಾಳಶಾಹಿಗಳು, ಉದ್ಯಮಿಗಳು, ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ವಾಣಿಜ್ಯೀಕರಣಗೊಳಿಸಿದ್ದಾರೆ. ಖಾಸಗಿ ಶಿಕ್ಷಣಸಂಸ್ಥೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಕೆಲವು ನಿರ್ದಿಷ್ಟ ನಗರಗಳಲ್ಲಿ ಧರಣಿಗಳು ನಡೆದಿವೆ. ದಿನದಿಂದ ದಿನಕ್ಕೆ ಶ್ರೀಮಂತರು ಇನ್ನೂ ಹೆಚ್ಚು ಶ್ರೀಮಂತರಾಗುತ್ತಿರುವುದನ್ನು ಮತ್ತು ಬಡವರು ಇನ್ನಷ್ಟು ಬಡವರಾಗುತ್ತಿರುವುದನ್ನು ನಾವೀಗ ಕಾಣುತ್ತಿದ್ದೇವೆ. ಹೀಗೆ, ಮುಖ್ಯವಾಗಿ ನಗರಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ ಖಾಸಗಿ ಶಾಲೆ, ಕಾಲೇಜುಗಳಲ್ಲಿ ಐಷಾರಾಮಿ, ಸುಸಜ್ಜಿತ, ಎಲ್ಲಾ ಸೌಲಭ್ಯಗಳಿರುವುದನ್ನು ನಾವು ಕಾಣುತ್ತಿದ್ದೇವೆ. ಉನ್ನತ ಆದಾಯ ಗುಂಪಿಗೆ ಸೇರಿದವರು ತಮ್ಮ ಮಕ್ಕಳನ್ನು ಇಂತಹ ದುಬಾರಿ ಶಿಕ್ಷಣಸಂಸ್ಥೆಗಳಿಗೆ ಸೇರ್ಪಡೆಗೊಳಿಸಲು ಸ್ವಲ್ಪವೂ ಹಿಂಜರಿಯುವುದಿಲ್ಲ.

ಆದರೆ ಬಡವರ ದಯನೀಯ ಪರಿಸ್ಥಿತಿಯ ಬಗ್ಗೆ ಯಾರಿಗೂ ಕಾಳಜಿಯಿಲ್ಲ. ದಿನದ ಎರಡು ಹೊತ್ತಿನ ಊಟಕ್ಕಾಗಿ ಪರದಾಡುವಂತಹ ವಿದ್ಯಾರ್ಥಿಗೆ ಇಂತಹ ಶಾಲೆಗಳಲ್ಲಿ ಕಲಿಯುವ ಕನಸು ಕಾಣಲು ಸಾಧ್ಯವೇ?. ದಿನದಲ್ಲಿ ಎರಡು ಹೊತ್ತಿನ ಊಟಕ್ಕಾಗಿ ತಮ್ಮ ಶ್ರಮ ಹಾಗೂ ಸಮಯವನ್ನು ವ್ಯಯಿಸುವ ಹೆತ್ತವರು ತಮ್ಮ ಮಕ್ಕಳನ್ನು ಇಂತಹ ಶಾಲೆಗಳಿಗೆ ಕಳುಹಿಸುತ್ತಾರೆಯೇ? ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿಲ್ಲ. ಆದರೆ ಶಿಕ್ಷಕರಿಗೆ ಅಧಿಕ ವೇತನವನ್ನು ನೀಡಲಾಗುತ್ತಿದೆ. ಸರಕಾರಿ ಶಾಲೆಯಲ್ಲಿ ಕೈತುಂಬಾ ಸಂಬಳ ಪಡೆಯುವ ಶಿಕ್ಷಕನು ತನ್ನ ಮಕ್ಕಳನ್ನು ಮಾತ್ರ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾನೆ. ಖಾಸಗಿಶಾಲೆಗಳಷ್ಟೇ ತನ್ನ ಮಕ್ಕಳ ಶಿಕ್ಷಣದ ಕುರಿತಾದ ತನ್ನ ನಿರೀಕ್ಷೆಗಳನ್ನು ಈಡೇರಿಸಬಲ್ಲವು ಎಂಬುದು ಆತನಿಗೆ ಚೆನ್ನಾಗಿ ಅರಿವಿದೆ.

ಕೇವಲ ಉನ್ನತ ಉದ್ಯೋಗಿಗಳು,ಉದ್ಯಮಿಗಳು ಮಾತ್ರವೇ ತಮ್ಮ ಮಕ್ಕಳಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ಕೊಡಲು ಸಾಧ್ಯವಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತ ಸರಕಾರವು ಜಾತಿ,ವರ್ಣ,ಪಂಗಡ, ಲಿಂಗ, ಜನನಸ್ಥಳ, ಆರ್ಥಿಕ ಸ್ಥಾನಮಾನವನ್ನು ಮೀರಿ ಎಲ್ಲರಿಗೂ ಸಮಾನ ಶಿಕ್ಷಣ ಸಿಗುವಂತೆ ಮಾಡುವ ಶೈಕ್ಷಣಿಕ ನೀತಿಗಳನ್ನು ರೂಪಿಸಬೇಕಾಗಿದೆ. ಅಣಬೆಗಳಂತೆ ಮೇಲೇಳುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅಂಕುಶ ಹಾಕಬೇಕಾಗಿದೆ ಹಾಗೂ ಎಲ್ಲರಿಗೂ ಲಭ್ಯವಾಗುವಂತಹ ರೀತಿಯಲ್ಲಿ ಸರಕಾರಿ ಶಾಲೆಗಳನ್ನು ಪುನರ್‌ರೂಪಿಸಬೇಕಾಗಿದೆ. ದೇಶದಲ್ಲಿ ಸಮಾನತಾವಾದಿ ಶಿಕ್ಷಣ ಸಂರಚನೆಯನ್ನು ಸರಕಾರವು ರೂಪಿಸಬೇಕಾಗಿದೆ. ಇಲ್ಲವಾದರೆ ಈ ದೇಶದ ತಳಹದಿ ನಿಧಾನಕ್ಕೆ ದುರ್ಬಲವಾಗುತ್ತಾ, ಉಳ್ಳವರ ಕೈಗೆ ದೇಶದ ಚುಕ್ಕಾಣಿ ಹಸ್ತಾಂತರವಾಗುತ್ತದೆ. ಪ್ರಜಾಸತ್ತೆ ಹೆಸರಿಗಷ್ಟೇ ಅಸ್ತಿತ್ವದಲ್ಲಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News