ಪ್ರತಿ ದಿನ 1,000ಕ್ಕೂ ಅಧಿಕ ಮಂದಿಗೆ ಉಚಿತ ಆಹಾರ ಒದಗಿಸುವ ಅಝರ್ ಮಕ್ಸೂಸಿ

Update: 2018-10-30 06:25 GMT

ಹೈದರಾಬಾದ್, ಅ. 30: ಬಡವರಿಗೆ ಉಚಿತ ಆಹಾರ ನೀಡುವುದನ್ನು ತಮ್ಮ ಧ್ಯೇಯವಾಗಿಸಿದ ಅಪರೂಪದ ಸಮಾಜ ಸೇವಕ, ಹೈದರಾಬಾದ್‍ನ ಅಝರ್ ಮಕ್ಸೂಸಿ ಅವರು. ನಗರದ ಗಾಂಧಿ ಜನರಲ್ ಆಸ್ಪತ್ರೆಯ ಹೊರಗೆ ಹಾಗೂ ದಬೀರ್ಪುರ ಪ್ರದೇಶದಲ್ಲಿ ಅವರು ಬಡವರಿಗೆ ಆಹಾರ ನೀಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ನಗರದಲ್ಲಿ ಪ್ರತಿ ದಿನ ಸುಮಾರು 400 ಜನರಿಗೆ ಅವರು ಆಹಾರದ  ಏರ್ಪಾಟು ಮಾಡುತ್ತಾರೆ.

ಮಕ್ಸೂಸಿ ಅವರೂ ಬಡ ಕುಟುಂಬದಿಂದ ಬಂದವರು. ಅವರು ನಾಲ್ಕು ವರ್ಷದವರಿರುವಾಗಲೇ ಅವರ ತಂದೆ ತೀರಿದ್ದರು. ''ನನ್ನ ಕುಟುಂಬ ಹಸಿದ ಹೊಟ್ಟೆಯಲ್ಲಿಯೇ ಹಲವು ಬಾರಿ ಮಲಗಿದ್ದುಂಟು'' ಎಂದು ಅವರು ನೆನಪಿಸಿಕೊಳ್ಳುತ್ತಾರೆ.

''ಒಂದು ದಿನ ಒಬ್ಬಳು ಮಹಿಳೆ ಆಹಾರಕ್ಕಾಗಿ ಅಲೆದಾಡುವುದನ್ನು ನೋಡಿದೆ. ಆಗ ನಾನು ಉದ್ಯೋಗದಲ್ಲಿದ್ದೆ. ನನ್ನಲ್ಲಿದ್ದ ಹಣವನ್ನು ಆಕೆಗೆ ಆಹಾರ ಖರೀದಿಸಿ ಕೊಟ್ಟೆ. ಬಡವರಿಗೆ ಸಹಾಯ ಮಾಡಲು ನನಗೆ ದಾರಿ ತೋರಿಸುವಂತೆ ಆ ದಿನ ನಾನು ದೇವರಿಗೆ ಬೇಡಿದೆ'' ಎಂದು ಮಕ್ಸೂಸಿ ಹೇಳುತ್ತಾರೆ.

ಏಳು ವರ್ಷಗಳ ಹಿಂದೆ ತನ್ನಲ್ಲಿದ್ದ ಹಣದಿಂದ ಸಾಧ್ಯವಾದಷ್ಟು ಮಂದಿಗೆ ಉಚಿತ ಆಹಾರ ವಿತರಿಸುವ  ಕಾರ್ಯ ಆರಂಭಿಸಿದ್ದಾಗಿ ಅವರು ತಿಳಿಸುತ್ತಾರೆ. ಮೂರು ವರ್ಷಗಳ ನಂತರ ಹಲವು ಜನರು ಜತೆಯಾಗಿ ತಮಗೆ ಅಗತ್ಯ ವಸ್ತುಗಳನ್ನು ಒದಗಿಸಿ ಸಹಕರಿಸಲು ಆರಂಭಿಸಿದರು. ಈ ಯೋಜನೆಯನ್ನು  ವಿಸ್ತರಿಸಿ ಗಾಂಧಿ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತ ಆಹಾರ ನೀಡಲು ಆರಂಭಿಸಿದೆ. ಪ್ರತಿ ದಿನ ಈ ಆಸ್ಪತ್ರೆ ಹಾಗೂ ದರ್ಬೀಪುರ ಪ್ರದೇಶದಲ್ಲಿ 300ರಿಂದ 400 ಮಂದಿ ಆಹಾರ ಪಡೆಯುತ್ತಾರೆ'' ಎಂದು ಅವರು ವಿವರಿಸುತ್ತಾರೆ.

ಬಡವರಿಗಾಗಿ ಈ ಉಚಿತ ಆಹಾರ ಯೋಜನೆಯನ್ನು ಮಕ್ಸೂಸಿ ಕ್ರಮೇಣವಾಗಿ ಬೆಂಗಳೂರು, ರಾಯಚೂರು ಹಾಗೂ ಜಾರ್ಖಂಡ್, ಅಸ್ಸಾಂನ ಇತರೆಡೆ ವಿಸ್ತರಿಸಿದರು. ''ನಮ್ಮ  ಈ ಯೋಜನೆಯಿಂದ ಈಗ ಒಟ್ಟು 1,000 ದಿಂದ 1,200 ಮಂದಿಗೆ ಪ್ರಯೋಜನವಾಗುತ್ತಿದೆ. ಬಡವರಿಗೆ ಸಹಾಯ ಮಾಡುವಲ್ಲಿಯೇ ನನಗೆ ಸಂತೃಪ್ತಿಯಿದೆ'' ಎಂದು ಮಕ್ಸೂಸಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News