ರಾಹುಲ್ ಈಶ್ವರ್ ಗೂ ನಮಗೂ ಯಾವುದೇ ಸಂಬಂಧವಿಲ್ಲ : ಶಬರಿಮಲೆ ಮುಖ್ಯ ತಂತ್ರಿ ಕುಟುಂಬ

Update: 2018-10-30 10:46 GMT

ತಿರುವನಂತಪುರಂ, ಅ. 30: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಮುಖ್ಯ ಅರ್ಚಕರ ಕುಟುಂಬ- ತಝ್ಮೋನ್ ಮಾಧೊಂ ತಂತ್ರಿ ಕುಟುಂಬ ತನಗೂ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರುವ ಅಯ್ಯಪ್ಪ ಧರ್ಮ ಸೇನಾ ಅಧ್ಯಕ್ಷ ರಾಹುಲ್ ಈಶ್ವರ್‍ಗೂ ಯಾವುದೇ ಸಂಬಂಧವಿಲ್ಲವೆಂದು ಸೋಮವಾರ ಹೇಳಿದೆ.

ರಾಹುಲ್ ತಮ್ಮ ಕುಟುಂಬದ ಭಾಗವಾಗಿಲ್ಲ ಹಾಗೂ ದೇವಸ್ಥಾನ ಅಥವಾ ಅದರ ತಂತ್ರಿಗಳ ಪದ್ಧತಿಗಳಿಗೂ ರಾಹುಲ್ ಗೂ ಯಾವುದೇ ಸಂಬಂಧವಿಲ್ಲವೆಂಬ ಸ್ಪಷ್ಟೀಕರಣವೂ ಬಂದಿದೆ.

''ರಾಹುಲ್ ತಮ್ಮ ಕುಟುಂಬಕ್ಕೆ ತನ್ನ ತಾಯಿಯ ಕಡೆಯಿಂದ ಸಂಬಂಧ ಹೊಂದಿದ್ದು ಆತ ಈಶ್ವರನ್ ನಂಬೂದಿರಿ ಹಾಗೂ ಮಲ್ಲಿಕಾ ನಂಬೂದಿರಿಯ ಪುತ್ರನಾಗಿದ್ದಾನೆ. ಆತನ ತಾಯಿ ನನ್ನ ಸೋದರಿಯಾಗಿದ್ದು ನಮ್ಮ ಪಿತೃ ಪ್ರಧಾನ ಪದ್ಧತಿಯ ಪ್ರಕಾರ ಕೇವಲ ಪುತ್ರರಿಗೆ ಮಾತ್ರ ಕುಟುಂಬದ ಮೇಲೆ ಹಕ್ಕಿರುತ್ತದೆ'' ಎಂದು ರಾಹುಲ್ ಈಶ್ವರ್ ಚಿಕ್ಕಪ್ಪ ತಂತ್ರಿ ಕಂದಾವರು ಮೋಹನರಾರು ಹೇಳಿದ್ದಾರೆ.

''ಪ್ರತಿಭಟನೆಗಳ ವೇಳೆ ರಾಹುಲ್ ತಾನು ತಂತ್ರಿ ಕುಟುಂಬದ ದನಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದು ಆದರೆ ಆತ ತನ್ನ ಕೃತ್ಯಗಳಿಂದ ನಮಗೆ ಸಂಚಕಾರ ತಂದಿದ್ದಾನೆ. ಆತ ಅಯ್ಯಪ್ಪ ಭಕ್ತರನ್ನು, ಜನಸಾಮಾನ್ಯರನ್ನು, ಮಾಧ್ಯಮ ಹಾಗೂ ಸರಕಾರವನ್ನು ತನ್ನ ತಾಯಿ ನಮ್ಮ ಕುಟುಂಬಕ್ಕೆ ಸೇರಿದವರೆಂಬ ಒಂದೇ ಕಾರಣಕ್ಕೆ ವಂಚಿಸುತ್ತಿದ್ದಾನೆ'' ಎಂದು ತಂತ್ರಿ ಕುಟುಂಬದ ಹೇಳಿಕೆ ತಿಳಿಸಿದೆ.

ಮಹಿಳೆಯರು ದೇವಸ್ಥಾನ ಪ್ರವೇಶಿಸಿದರೆ ಗಾಯಗಳಿಂದ ಹೊರಬಂದ ರಕ್ತದಿಂದ ದೇವಸ್ಥಾನವನ್ನು ಅಪವಿತ್ರಗೊಳಿಸುವ ಸಂಚಿದೆ ಎಂದು ಹೇಳಿದ ಅವರ ವಿವಾದಾತ್ಮಕ ಭಾಷಣವನ್ನು ಕುಟುಂಬ ಒಪ್ಪುವುದಿಲ್ಲ. ಆತ ಶಬರಿಮಲೆ ಮುಖ್ಯ ತಂತ್ರಿಯ ನಕಲಿ ಲೆಟರ್ ಪ್ಯಾಡ್ ಬಳಸಿ ಅರ್ಚಕನಾಗಲು ಯುತ್ನಿಸಿದ್ದ, ತನ್ನ ಅಜ್ಜನ ಸಹಿಯನ್ನು ಖಾಲಿ ಚೆಕ್ಕುಗಳಿಗೆ ಪಡೆದು ದೊಡ್ಡ ಮೊತ್ತವನ್ನು ಬ್ಯಾಂಕಿನಿಂದ ಪಡೆದುಕೊಂಡಿದ್ದಾನೆ'' ಎಂದೂ ತಂತ್ರಿ ಕುಟುಂಬ ಹೇಳಿಕೆಯಲ್ಲಿ ಆರೋಪಿಸಿದೆ.

ಶಬರಿಮಲೆಯಲ್ಲಿ ಪ್ರತಿಭಟನಕಾರರನ್ನು ಪ್ರಚೋದಿಸಿದ ಆರೋಪದ ಮೇಲೆ ರಾಹುಲ್ ಈಶ್ವರ್ ರನ್ನು ಎರಡು ಬಾರಿ ಬಂಧಿಸಿ ಬಿಡುಗಡೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News