ನ್ಯಾಯಾಲಯಕ್ಕೆ ಧಾರ್ಮಿಕ ವಿಷಯದ ತೀರ್ಪು ನೀಡುವ ಹಕ್ಕಿಲ್ಲ: ನ್ಯಾ.ಸಂತೋಷ್ ಹೆಗ್ಡೆ

Update: 2018-10-30 14:41 GMT

ಬೆಂಗಳೂರು, ಅ.30 : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮುದಾಯದ ಹಕ್ಕುಗಳನ್ನು ಗೌರವಿಸಬೇಕಾಗಿರುವುದರಿಂದ ನ್ಯಾಯಾಂಗಕ್ಕೆ ಧರ್ಮಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ತೀರ್ಪು ನೀಡುವ ಹಕ್ಕು ಇಲ್ಲ ಎಂದು ಸುಪ್ರಿಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ಕಲಾಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಇತ್ತೀಚಿನ ಸುಪ್ರೀಂಕೋರ್ಟ್‌ನ ತೀರ್ಪುಗಳಿಂದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಲಯದ ಮೇಲಾದ ಪ್ರಭಾವ ವಿಷಯಕ್ಕೆ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇತ್ತೀಚಿಗೆ ನ್ಯಾಯಾಲಯಗಳು ತಮ್ಮ ಮಿತಿಯನ್ನು ಮೀರಿ ತೀರ್ಪುಗಳನ್ನು ನೀಡುತ್ತಿವೆ. ಕಳೆದ ಹದಿನೈದು ದಿನಗಳಲ್ಲಿ ಸುಪ್ರೀಂಕೋರ್ಟ್ ಶಬರಿಮಲೆಗೆ ಮಹಿಳೆಯರ ಪ್ರವೇಶ ಹಾಗೂ ರಾಮಮಂದಿರದ ಎರಡು ಮಹತ್ವ ವಿಚಾರಗಳನ್ನು ಕೈಗೆತ್ತಿಕೊಂಡಿದೆ. ಆದರೆ, ಧಾರ್ಮಿಕ ವಿಚಾರಗಳು ಸಮುದಾಯದಕ್ಕೆ ಬಿಟ್ಟ ವಿಚಾರ. ಅದರಲ್ಲಿ ನ್ಯಾಯಾಲಯಗಳ ಹಸ್ತಕ್ಷೇಪ ಸರಿಯಾದುದಲ್ಲ ಎಂದು ಹೇಳಿದರು.

ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ತಾತ್ಕಾಲಿಕ ತೀರ್ಪುಗಳನ್ನು ನೀಡಬೇಕು. ಅನಂತರ ಶಾಸಕಾಂಗ ಮತ್ತು ಕಾರ್ಯಾಂಗ ಅಲ್ಲಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ನಿರ್ದೇಶನ ನೀಡಬೇಕು. ಯಾವುದು ಸರಿ-ತಪ್ಪು ಎಂಬುದನ್ನು ತೀರ್ಮಾನ ಮಾಡಿಕೊಳ್ಳಲು ಕಾಲಾವಕಾಶ ನೀಡಬೇಕು ಎಂದ ಅವರು, ಇತ್ತೀಚಿಗೆ ಸುಪ್ರೀಂಕೋರ್ಟ್ ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪು ಸಹ ತಮ್ಮ ಮಿತಿಯಿಂದ ಹೊರಗಿದೆ ಎಂದರು.

ದೇಶದಲ್ಲಿ ಪಟಾಕಿ ಹೊಡೆಯುವುದನ್ನು ಹತ್ತಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ನ್ಯಾಯಾಲಯ ಮಧ್ಯಪ್ರವೇಶ ಮಾಡುವ ಅಗತ್ಯವಿರಲಿಲ್ಲ ಎಂದ ಅವರು, ಹಸಿರು ಪಟಾಕಿ ತಯಾರಿಸಿ, ವಿತರಣೆ ಮಾಡುವಂತೆ ಶಾಸಕಾಂಗಕ್ಕೆ ನಿರ್ದೇಶನ ನೀಡಬಹುದು ಎಂದು ತಿಳಿಸಿದರು.

ಹಿಂದಿನ ದಿನಗಳಲ್ಲಿ ದೇಶದಲ್ಲಿ ರಾಜರು ಆಡಳಿತ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಜನರು ಅಧಿಕಾರ ನಡೆಸುವವರ ವಿರುದ್ಧ ಮಾತನಾಡಲು ಮುಕ್ತ ಅವಕಾಶವಿರಲಿಲ್ಲ. ಅಲ್ಲದೆ, ಸ್ವಾತಂತ್ರದ ನಂತರವೂ ನ್ಯಾಯಾಲಯಗಳು ಸರಕಾರದ ವಿರುದ್ಧವಾದ ತೀರ್ಪುಗಳನ್ನು ನೀಡಲು ಮುಕ್ತವಾದ ವಾತಾವರಣವಿರಲಿಲ್ಲ. ಅನಂತರ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾದ್ದರಿಂದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿಗೆ ಸರಿಸಮಾನವಾದ ತೀರ್ಪು ಬರಲು ಸಾಧ್ಯವಾಯಿತು ಎಂದು ನುಡಿದರು.

ಸುಪ್ರೀಂಕೋರ್ಟ್‌ನ ಬಗ್ಗೆ ದೇಶ-ವಿದೇಶದಲ್ಲಿ ಅಪಾರವಾದ ಗೌರವವಿದೆ. ಆದರೆ, ಇತ್ತೀಚಿಗೆ ಸುಪ್ರೀಂಕೋರ್ಟ್‌ನ ಮೂವರು ಮುಖ್ಯನ್ಯಾಯಾಧೀಶರು ಹೊರಗಡೆ ಬಂದು ಪತ್ರಿಕಾಗೋಷ್ಠಿ ನಡೆಸಿರುವುದು ಸರಿಯಲ್ಲ. ನಾನು 35 ವರ್ಷಗಳ ಕಾಲ ಕೆಲಸ ಮಾಡಿದ ಹೆಮ್ಮೆಯಿದೆ. ಆದರೆ, ಇಂದಿನ ಪರಿಸ್ಥಿತಿ ನೋಡಿದರೆ ಬೇಸರವಾಗುತ್ತಿದೆ. ಮುಂದಿನ ದಿನಗಳಲ್ಲಿ ಬದಲಾಗಿ ಸಮಾಜದ ಹೆಮ್ಮೆಯ ಭಾಗವಾಗಿ ಉಳಿಯುತ್ತದೆ ಎಂಬ ಭರವಸೆಯಿದೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.

ರಾಜಕೀಯ ವಿಶ್ಲೇಷಕ ಪ್ರೊ.ಸಂದೀಪ್ ಶಾಸ್ತ್ರಿ ಮಾತನಾಡಿ, ಶಾಸಕಾಂಗ ಹಾಗೂ ಕಾರ್ಯಾಂಗ ತನ್ನ ಜವಾಬ್ದಾರಿಯನ್ನು ನಿರ್ವಹಿಸದೇ ಇದ್ದ ಸಂದರ್ಭದಲ್ಲಿ ನ್ಯಾಯಾಂಗ ಮಧ್ಯಪ್ರವೇಶ ಮಾಡಬೇಕಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ವ್ಯವಸ್ಥೆಯು ಐಸಿಯುನಲ್ಲಿದೆ. ಹೀಗಾಗಿ, ಸುಪ್ರೀಂಕೋರ್ಟ್ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದೆ. ಎರಡೂ ಅಂಗಗಳು ಗುಣಮುಖವಾಗಿ ಹೊರಬರಬೇಕಿದೆ ಎಂದು ಹೇಳಿದರು.

ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಹಾಗೂ ಅಧಿಕಾರಕ್ಕಾಗಿ ಪ್ರಯತ್ನಿಸುತ್ತಿರುವ ರಾಜಕೀಯ ಪಕ್ಷಗಳು ವ್ಯವಸ್ಥೆಯನ್ನು ಐಸಿಯುನಲ್ಲಿ ಇಡಲು ಸತತ ಪ್ರಯತ್ನ ಮಾಡುತ್ತಾ, ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಮುಂದಾಗಿವೆ. ಹೀಗಾಗಿ, ಅನೇಕ ವಿಷಯಗಳನ್ನು ಮುನ್ನೆಲೆಗೆ ಬಾರದಂತೆ ಮಾಡಲಾಗುತ್ತಿದೆ ಎಂದ ಅವರು, ಶಬರಿಮಲೆ, ಅಯೋಧ್ಯೆಯ ರಾಮಮಂದಿರದಂತಹ ಭಾವನಾತ್ಮಕ ವಿಷಯಗಳಿಗೆ ನ್ಯಾಯಾಲಯದಿಂದ ಪರಿಹಾರ ಸಾಧ್ಯವಿಲ್ಲ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಅಜ್ಜಕಲ ಗಿರೀಶ್ ಭಟ್, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಮಲ್ಲೇಶ್ವರಪ್ಪ ಉಪಸ್ಥಿತರಿದ್ದರು.

ಭಾರತದಲ್ಲಿ ಸುಪ್ರೀಂಕೋರ್ಟ್ ಸ್ಥಾಪನೆಯಾದ ನಂತರ ಸಾವಿರಾರು ತೀರ್ಪುಗಳು ಜನರ ಪರವಾಗಿ ನೀಡುವ ಮೂಲಕ ದೇಶದಲ್ಲಿ ಶಾಂತಿ ಸ್ಥಾಪನೆಗೆ ಕಾರಣವಾಗಿದೆ. ಅಂತಹ ನ್ಯಾಯಾಲಯ ವ್ಯವಸ್ಥೆ ಶಾಶ್ವತವಾಗಿ ಉಳಿಯಬೇಕಿದೆ. ಜನರ ನಂಬಿಕೆ ಮತ್ತು ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕು, ನ್ಯಾಯಾಧೀಶರು ತಮ್ಮ ವೈಯಕ್ತಿಕ ವಿಚಾರಗಳನ್ನು ತೀರ್ಪುಗಳಲ್ಲಿ ತರುವುದು ಸರಿಯಲ್ಲ.

-ಎನ್.ಸಂತೋಷ್ ಹೆಗ್ಡೆ, ನಿವೃತ್ತ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News