ಅಮೆಝಾನ್‌ನಲ್ಲಿ ಫೋನ್ ಬುಕ್ ಮಾಡಿದ್ದಕ್ಕೆ ಬಂದದ್ದೇನು ಗೊತ್ತೇ ?

Update: 2018-10-31 03:33 GMT

ನೋಯ್ಡ, ಅ. 31: ಅಗ್ರಗಣ್ಯ ಇ-ಕಾಮರ್ಸ್ ಸಂಸ್ಥೆಯಾದ ಅಮೆಝಾನ್‌ನಲ್ಲಿ ಗ್ರಾಹಕರೊಬ್ಬರು ಫೋನ್ ಬುಕ್ ಮಾಡಿದ್ದರೆ, ಅವರಿಗೆ ವಿತರಣೆಯಾದದ್ದು ಸಾಬೂನು. ಈ ಹಿನ್ನೆಲೆಯಲ್ಲಿ ಅಮೆಝಾನ್‌ನ ಭಾರತ ಮುಖ್ಯಸ್ಥ ಮತ್ತು ಇತರ ಮೂರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಉತ್ತರ ಪ್ರದೇಶದ ಗ್ರೇಟರ್ ನೋಯ್ಡದ ಬಿಸ್ರಾಖ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಎಲ್ಲ ವಂಚನೆ ಪ್ರಕರಣಗಳನ್ನು ಕಂಪನಿ ಗಂಭೀರವಾಗಿ ಪರಿಗಣಿಸುತ್ತದೆ ಹಾಗೂ ಪೊಲೀಸರಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಕಂಪನಿ ಸ್ಪಷ್ಟನೆ ನೀಡಿದೆ.

"ಅಮೆಝಾನ್ ವೆಬ್‌ಸೈಟ್ ಮೂಲಕ ಗ್ರಾಹಕರೊಬ್ಬರು ಮೊಬೈಲ್ ಫೋನ್ ಬುಕ್ ಮಾಡಿದ್ದರು. ಆದರೆ ಅ. 27ರಂದು ಅವರಿಗೆ ವಿತರಣೆಯಾದ ಪಾರ್ಸೆಲ್ ತೆರೆದು ನೋಡಿದಾಗ, ಫೋನ್ ಬದಲಾಗಿ ಅದರಲ್ಲಿ ಸಾಬೂನು ಇತ್ತು ಎಂದು ಅವರು ದೂರು ನೀಡಿದ್ದಾರೆ" ಎಂದು ಸಿಪಿಐ ನಿಶಾಂಕ್ ಶರ್ಮಾ ವಿವರಿಸಿದ್ದಾರೆ.

ಕಂಪನಿಯ ಭಾರತ ಮುಖ್ಯಸ್ಥ ಅಮಿತ್ ಅಗರ್‌ವಾಲ್, ಲಾಜಿಸ್ಟಿಕ್ಸ್ ಸಂಸ್ಥೆಯಾದ ದರ್ಶಿತಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಪ್ರದೀಪ್ ಕುಮಾರ್, ರವೀಶ್ ಅಗರ್‌ವಾಲ್ ಮತ್ತು ವಿತರಣೆ ಮಾಡಿದ ಅನಿಲ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡಸಂಹಿತೆಯ ಸೆಕ್ಷನ್ 420 (ವಂಚನೆ), 406 (ವಿಶ್ವಾಸಕ್ಕೆ ಧಕ್ಕೆ ಅಪರಾಧ) ಮತ್ತು 120 ಬಿ (ಅಪರಾಧ ಪಿತೂರಿಯಲ್ಲಿ ಷಾಮೀಲು) ಪ್ರಕರಣ ದಾಖಲಾಗಿದೆ. ಕಾನೂನು ಪ್ರಕ್ರಿಯೆ ಮುಂದುವರಿದಿದೆ ಎಂದು ಶರ್ಮಾ ಸ್ಪಷ್ಟಪಡಿಸಿದ್ದಾರೆ.

ಈ ಘಟನೆಯನ್ನು ಅಮೆಝಾನ್ ದೃಢಪಡಿಸಿದ್ದು, ದೂರುದಾರರಿಗೆ ಹಣ ಮರಳಿಸಲು ಕ್ರಮ ಕೈಗೊಂಡಿದ್ದಾಗಿ ಹೇಳಿದೆ. "ಭಾರತದ ವಿಶ್ವಾಸಾರ್ಹ ಆನ್‌ಲೈನ್ ಮಾರುಕಟ್ಟೆಯಾಗಿ, ಈ ವಂಚನೆ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಪೊಲೀಸರಿಗೆ ಪ್ರಕರಣದ ತನಿಖೆಯಲ್ಲಿ ಎಲ್ಲ ಅಗತ್ಯ ಮಾಹಿತಿ ನೀಡುವ ಮೂಲಕ ಸಹಕರಿಸುತ್ತೇವೆ" ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News