ಕಾಶ್ಮೀರದಲ್ಲಿ ಎನ್‌ಕೌಂಟರ್: ಜೈಶ್ ಮುಖ್ಯಸ್ಥನ ಅಳಿಯ ಹತ್ಯೆ

Update: 2018-10-31 03:44 GMT

ಶ್ರೀನಗರ, ಅ. 31: ದಕ್ಷಿಣ ಕಾಶ್ಮೀರದ ಟ್ರಾಲ್ ಎಂಬಲ್ಲಿ ಮಂಗಳವಾರ ಸಂಜೆ ಉಗ್ರರು ಮತ್ತು ಭದ್ರತಾ ಪಡೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಜೈಶ್-ಇ-ಮೊಹ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನ ಅಳಿಯ ಸೇರಿದಂತೆ ಇಬ್ಬರು ಉಗ್ರರು ಹತರಾಗಿದ್ದಾರೆ.

ಮಸೂದ್‌ ಅಳಿಯ ಉಸ್ಮಾನ್ ಹೈದರ್, ಕಳೆದ ವಾರ ಟ್ರಾಲ್‌ನಲ್ಲಿ ನಡೆದ ದಾಳಿಯಲ್ಲಿ ಷಾಮೀಲಾಗಿರುವ ಶಂಕೆ ಇದೆ. ಈ ದಾಳಿಯಲ್ಲಿ ಸಹಸ್ರಸೀಮಾಬಲದ ಒಬ್ಬ ಸಿಬ್ಬಂದಿ ಮತ್ತು ಸೈನಿಕ ಮೃತಪಟ್ಟಿದ್ದರು.

ಉಗ್ರರಿಂದ ಅಮೆರಿಕ ನಿರ್ಮಿತ ಎಂ4 ಕಾರ್ಬನ್ ರೈಫಲ್ ವಶಪಡಿಸಿಕೊಳ್ಳಲಾಗಿದೆ. ಇದನ್ನು ಟ್ರಾಲ್ ದಾಳಿಯಲ್ಲಿ ಬಳಸಲಾಗಿತ್ತು ಎಂದು ಭದ್ರತಾ ಪಡೆ ಮೂಲಗಳು ಹೇಳಿವೆ.

ಗುಂಡಿನ ಚಕಮಕಿಯಲ್ಲಿ ಹತನಾದ ವ್ಯಕ್ತಿ ಉಸ್ಮಾನ್ ಹೈದರ್ ಎಂದು ಜೈಶ್-ಇ-ಮೊಹ್ಮದ್ ಸಂಘಟನೆ, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ವೀಡಿಯೊದಲ್ಲಿ ಸ್ಪಷ್ಟಪಡಿಸಲಾಗಿದೆ. ಹಲವು ಬಾರಿ ಇಂಥ ದಾಳಿಯಲ್ಲಿ ಈತ ಪಾಲ್ಗೊಂಡಿದ್ದ ಎಂದು ಸಂಘಟನೆ ಹೇಳಿಕೊಂಡಿದೆ.

ಪುಲ್ವಾನಾ ಜಿಲ್ಲೆಯ ಟ್ರಾಲ್ ಬಳಿಯ ಚಾನ್‌ಕೆತಾರ್ ಗ್ರಾಮದಲ್ಲಿ ಆರು ಗಂಟೆಗೂ ಹೆಚ್ಚು ಕಾಲ ಚಕಮಕಿ ನಡೆಯಿತು. ಎನ್‌ಕೌಂಟರ್ ಸ್ಥಳದ ಪಕ್ಕಕ್ಕೆ ಯಾರೂ ಹೋಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದ್ದು, ಇಲ್ಲಿ ಸ್ಫೋಟಕಗಳನ್ನು ಬಚ್ಚಿಟ್ಟಿರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News