ಇಂದಿರಾಗಾಂಧಿ ಪುಣ್ಯತಿಥಿ: ಸೋನಿಯಾ, ರಾಹುಲ್, ಮನಮೋಹನ್ ರಿಂದ ಶ್ರದ್ಧಾಂಜಲಿ

Update: 2018-10-31 16:27 GMT

ಹೊಸದಿಲ್ಲಿ, ಅ.31: ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 34ನೇ ಪುಣ್ಯತಿಥಿಯ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಹೊಸದಿಲ್ಲಿಯ ಶಕ್ತಿಸ್ಥಳದಲ್ಲಿರುವ ಮಾಜಿ ಪ್ರಧಾನಿಯ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. “ದೇಶದ ಜನತೆಯ ಏಳಿಗೆಗಾಗಿ ಬಹಳಷ್ಟು ಕೊಡುಗೆ ನೀಡಿದ ನನ್ನ ಅಜ್ಜಿ ಇಂದಿರಾರನ್ನು ನೆನಪಿಸಿಕೊಳ್ಳುವಾಗ ಸಂತಸವಾಗುತ್ತದೆ. ಅವರ ಬಗ್ಗೆ ಅಪಾರ ಗೌರವದ ಭಾವನೆಯಿದೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇಂದಿರಾ ಪುಣ್ಯತಿಥಿಯ ಸಂದರ್ಭ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ದೇಶದ ಪ್ರಪ್ರಥಮ ಮಹಿಳಾ ಪ್ರಧಾನಿಯವರಿಗೆ ಇಂದು ನಾವು ಗೌರವ ಸಲ್ಲಿಸುತ್ತಿದ್ದೇವೆ. ಅವರ ಸ್ಫೂರ್ತಿದಾಯಕ ನಾಯಕತ್ವದಲ್ಲಿ ನಮ್ಮ ದೇಶವು ಅದ್ಭುತ ಗೆಲುವು ಹಾಗೂ ಅಭೂತಪೂರ್ವ ಅಭಿವೃದ್ಧಿ ದಾಖಲಿಸಿದೆ. ಸಮಾಜದ ಎಲ್ಲಾ ವರ್ಗದ ಜನತೆಯ ಉನ್ನತಿಗಾಗಿ ಅವರು ಕಾರ್ಯನಿರ್ವಹಿಸಿದ್ದರು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News