ರಿಸರ್ವ್ ಬ್ಯಾಂಕ್-ಸರಕಾರದ ನಡುವಿನ ಸಂಘರ್ಷ

Update: 2018-11-01 04:44 GMT

ಮೂರು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಜಗತ್ತಿನಲ್ಲೇ ಅತ್ಯಂತ ಎತ್ತರದ ಸರ್ದಾರ್ ಪಟೇಲರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಇದು ‘ಏಕತೆಯ ಪ್ರತಿಮೆ’ ಎಂದು ಕರೆದಿದ್ದಾರೆ. ಇದಕ್ಕಿಂತ ಅಪಹಾಸ್ಯದ ಸಂಗತಿ ಇನ್ನೊಂದಿಲ್ಲ. ರಾಷ್ಟ್ರದ ಏಕತೆ, ಸೌಹಾರ್ದವನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸಿದ ಪಕ್ಷದ ಸರಕಾರವೊಂದಕ್ಕೆ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಂತಹ ಪ್ರತಿಮಾ ಪ್ರಹಸನ ಅಗತ್ಯವಿತ್ತೇನೋ! ಜನರ ನಡುವಿನ ಏಕತೆ ಒತ್ತಟ್ಟಿಗಿರಲಿ, ಸರಕಾರದ ಸ್ವಾಯತ್ತ ಸಂಸ್ಥೆಗಳ ನಡುವೆ ಕದನದ ವಾತಾವರಣವನ್ನೇ ನಿರ್ಮಿಸಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ಯಾವುದೂ ಸರಿಯಿಲ್ಲ. ಸಿಬಿಐ ವಿರುದ್ಧ ಸಿಬಿಐ, ರಿಸರ್ವ್ ಬ್ಯಾಂಕ್ ವಿರುದ್ಧ ಹಣಕಾಸು ಸಚಿವಾಲಯ, ದಲಿತರ ವಿರುದ್ಧ ದಲಿತೇತರರ ದ್ವೇಷ, ಹೀಗೆ ದೇಶವನ್ನು, ಜನರನ್ನು ಒಡೆದು ಹೋಳು ಮಾಡುತ್ತಲೇ ಬಂದ ಸರಕಾರ; ಪ್ರತಿಮೆ ನಿಲ್ಲಿಸಿ ಏಕತೆಯ ಕಪಟ ನಾಟಕ ಆಡುತ್ತಿದೆ.

ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರಕಾರದ ನಡುವಿನ ಸಂಘರ್ಷ ಈಗ ಬೀದಿಗೆ ಬಂದಿದೆ. ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸನ್ನಿವೇಶ ನಿರ್ಮಾಣವಾಗಿದೆ. ಸರಕಾರ ರಿಸರ್ವ್ ಬ್ಯಾಂಕ್‌ನ ಸ್ವಾಯತ್ತೆೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರ್‌ಬಿಐನ ಉಪ ಗವರ್ನರ್ ವಿರಲ್ ಆಚಾರ್ಯ ಇತ್ತೀಚೆಗೆ ಆರೋಪಿಸಿದ್ದರು. ಇದರ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ರಿಸರ್ವ್ ಬ್ಯಾಂಕ್ 2008-2014ರ ಅವಧಿಯಲ್ಲಿ ಬೇಕಾಬಿಟ್ಟಿ ಸಾಲ ಹಂಚಿಕೆಯಾಗುತ್ತಿದ್ದರೂ ಸುಮ್ಮನಿತ್ತು ಎಂದು ಆರೋಪಿಸಿದ್ದಾರೆ.

ಇಷ್ಟು ದಿನ ಗಾಢ ನಿದ್ರೆಯಲ್ಲಿದ್ದ ಆರೆಸ್ಸೆಸ್‌ನ ‘ಸ್ವದೇಶಿ ಜಾಗರಣ ಮಂಚ್’ ಕೂಡಾ ರಿಸರ್ವ್ ಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ರೂಪಾಯಿ ಅಪಮೌಲ್ಯಕ್ಕೆ ಆರ್‌ಬಿಐ ಕಾರಣ ಎಂದು ಅದು ಆಪಾದಿಸಿದೆ. ಬಂಡವಾಳ ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಹಾಗೂ ಮರು ಪಾವತಿಯಾಗದ ಸಾಲ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವ 11 ಬ್ಯಾಂಕುಗಳು ಸಾಲ ವಿತರಣೆ ಮಾಡದಂತೆ ಆರ್‌ಬಿಐ ಹೇರಿರುವ ನಿರ್ಬಂಧ ಸಡಿಲಿಸಬೇಕೆಂಬುದು ಸರಕಾರದ ಆಗ್ರಹವಾಗಿದೆ. ಆದರೆ ರಿಸರ್ವ್ ಬ್ಯಾಂಕ್ ಇದಕ್ಕೆ ಒಪ್ಪುತ್ತಿಲ್ಲ. ಇದರೊಂದಿಗೆ ಸರಕಾರದ ಹಸ್ತಕ್ಷೇಪದ ಬಗ್ಗೆ ಆರ್‌ಬಿಐ ಉಪಗವರ್ನರ್ ವಿರಲ್ ಆಚಾರ್ಯ ಆಡಿದ ಮಾತಿನ ಬಗ್ಗೆ ಪ್ರಧಾನಿ ಕಾರ್ಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸಂಘ ಪರಿವಾರ ನಿಯಂತ್ರಿತ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಸ್ವಾಯತ್ತ ಸಂಸ್ಥೆಗಳು ಪ್ರಾಣ ಸಂಕಟ ಅನುಭವಿಸುತ್ತಿವೆ. ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಈ ಸರಕಾರ ನೆಹರೂ ಕಾಲದಿಂದ ಅಸ್ತಿತ್ವದಲ್ಲಿರುವ ಸ್ವಾಯತ್ತ ಸಂಸ್ಥೆಗಳನ್ನು ನಾಶ ಮಾಡಲು ಹೊರಟಿದೆ. ಅಧಿಕಾರಕ್ಕೆ ಬಂದ ತಕ್ಷಣ ಯೋಜನಾ ಆಯೋಗವನ್ನು ರದ್ದುಪಡಿಸಿ ನೀತಿ ಆಯೋಗವನ್ನು ರಚಿಸಿತು. ಆನಂತರ ವಿಶ್ವವಿದ್ಯಾನಿಲಯ ಧನ ವಿನಿಯೋಗ ಆಯೋಗ(ಯುಜಿಸಿ)ವನ್ನು ರದ್ದು ಮಾಡಿತು. ಪಂಚ ವಾರ್ಷಿಕ ಯೋಜನೆಗಳನ್ನು ಹಳ್ಳ ಹಿಡಿಸಲಾಯಿತು.

ಇತ್ತೀಚೆಗೆ ಸಿಬಿಐನಲ್ಲಿ ಕಿತ್ತಾಟ ಹಚ್ಚಿ ಈ ಉನ್ನತ ಮಟ್ಟದ ತನಿಖಾ ಸಂಸ್ಥೆಯನ್ನು ದುರ್ಬಲಗೊಳಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಕೈ ಹಾಕಿ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಸ್ವಾಯತ್ತೆಯನ್ನು ನಾಶ ಮಾಡಿ ಅದನ್ನು ಕೋಮುವಾದೀಕರಣಗೊಳಿಸುವ ಹುನ್ನಾರ ನಡೆದಿದೆ. ಹೀಗೆ ಕಳೆದ ಎಪ್ಪತ್ತು ವರ್ಷಗಳ ಕಾಲ ಈ ದೇಶ ಸಾಧಿಸಿದ್ದನ್ನು ಮೋದಿ ಸರಕಾರ ನಾಶ ಮಾಡಲು ಹೊರಟಿದೆ. ಭಾರತದ ಬ್ಯಾಂಕುಗಳಲ್ಲಿ ಅದರಲ್ಲೂ ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿನ ಭಾರೀ ಪ್ರಮಾಣದ ವಸೂಲಾಗದ ಸಾಲ(ಎನ್‌ಪಿಎ)ಕ್ಕೆ ರಿಸರ್ವ್ ಬ್ಯಾಂಕ್ ಮಾತ್ರ ಕಾರಣವಲ್ಲ. ಈ ದೇಶವನ್ನಾಳಿದ ಹಿಂದಿನ ಮತ್ತು ಇಂದಿನ ಸರಕಾರಗಳ ಆರ್ಥಿಕ ಧೋರಣೆಗಳು ಕೂಡಾ ಇದಕ್ಕೆ ಕಾರಣ. ಸರಕಾರ ತನ್ನ ನೀತಿಯನ್ನು ಬದಲಿಸದೆ ಆರ್‌ಬಿಐ ಮೇಲೆ ಹರಿ ಹಾಯ್ದರೆ ಪ್ರಯೋಜನವಿಲ್ಲ, ಕಾರ್ಪೊರೇಟ್ ಬಂಡವಾಳಶಾಹಿಯ ರಕ್ಷಣೆ ಮಾಡುವ ನೀತಿಯನ್ನು ಚಾಚೂ ತಪ್ಪದೆ ಪಾಲಿಸುತ್ತ ತನ್ನ ವೈಫಲ್ಯಗಳಿಗೆ ರಿಸರ್ವ್‌ಬ್ಯಾಂಕ್ ಮೇಲೆ ಹರಿ ಹಾಯ್ದು ಅದರ ಸ್ವಾಯತ್ತೆೆಗೆ ಧಕ್ಕೆ ತರುವುದು ಸರಿಯಲ್ಲ.

ರಿಸರ್ವ್ ಬ್ಯಾಂಕ್ ಜೊತೆಗಿನ ಮೋದಿ ಸರಕಾರದ ಕಿತ್ತಾಟ ಇದೇ ಮೊದಲ ಬಾರಿಯಲ್ಲ. ಈ ಸರಕಾರ ಅಸ್ತಿತ್ವಕ್ಕೆ ಬಂದಾಗ ಆರ್‌ಬಿಐ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಪ್ರಧಾನಿ ಮೋದಿ ಜೊತೆಗೆ ಭಿನ್ನಾಭಿಪ್ರಾಯ ಬಂದು ರಾಜೀನಾಮೆ ನೀಡಿದ್ದರು. ಆನಂತರ ಬಹಿರಂಗವಾಗಿ ಸರಕಾರವನ್ನು ಟೀಕಿಸಿದ್ದರು. ಆನಂತರ ಮೋದಿ ಅವರು ತಾವೇ ಇಷ್ಟಪಟ್ಟು ತಂದ ಗವರ್ನರ್ ಜೊತೆಗೂ ಚೆನ್ನಾಗಿರಲಿಲ್ಲ. ನೋಟು ಅಮಾನ್ಯೀಕರಣವನ್ನು ಮಾಡುವ ಮುನ್ನ ರಿಸರ್ವ್ ಬ್ಯಾಂಕ್‌ಗೆ ತಿಳಿಸಲಿಲ್ಲ. ಹೀಗಾಗಿ ಆರ್‌ಬಿಐ ಅಸಮಾಧಾನಗೊಂಡಿತ್ತು. ಈ ಬಾರಿ ಮತ್ತೆ ಅದು ಮರುಕಳಿಸಿದೆ. ಭಾರೀ ಉದ್ಯಮಪತಿಗಳ ಹಿತ ರಕ್ಷಿಸಲು ಆರ್‌ಬಿಐನ 7 ನೇ ವಿಧಿಯೆಂಬ ಬ್ರಹ್ಮಾಸ್ತ್ರ ಪ್ರಯೋಗಿಸಿ ರಿಸರ್ವ್ ಬ್ಯಾಂಕನ್ನು ನಿಯಂತ್ರಿಸಲು ಹೊರಟಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಲಿಕ್ವಿಡಿಟಿ, ದುರ್ಬಲ ಬ್ಯಾಂಕುಗಳ ಬಂಡವಾಳ ಅಗತ್ಯ ಮತ್ತು ಸಣ್ಣ ಹಾಗೂ ಮಧ್ಯಮಗಾತ್ರದ ಉದ್ಯಮಪತಿಗಳಿಗೆ ಸಾಲ ಸೌಲಭ್ಯ ನೀಡಲು ಈ 7ನೇ ವಿಧಿಯನ್ನು ಬಳಸಿ ಆರ್‌ಬಿಐಗೆ ನಿರ್ದೇಶನ ನೀಡಿದೆ. ಹಿಂದೆ ಯಾವ ಸರಕಾರವೂ ಈ ವಿಧಿಯನ್ನು ಬಳಸಿ ರಿಸರ್ವ್ ಬ್ಯಾಂಕ್‌ಗೆ ನಿರ್ದೇಶನ ನೀಡಿಲ್ಲ. 1991ರ ತೀವ್ರ ಬಿಕ್ಕಟ್ಟಿನ ಸಮಯದಲ್ಲಿ ಹಾಗೂ 2008ರ ಬಿಕ್ಕಟ್ಟಿನ ಸಂದರ್ಭದಲ್ಲಿ ಕೂಡ ಈ ವಿಧಿ ಬಳಸಿಲ್ಲ. ಈಗ ಮೋದಿ ಸರಕಾರ ಈ ವಿಧಿ ಬಳಸಿ ರಿಸರ್ವ್ ಬ್ಯಾಂಕ್‌ಗೆ ಮೂಗುದಾರ ಹಾಕಲು ಹೊರಟಿದೆ.

ಮೋದಿ ಸರಕಾರ ಸ್ವಾಯತ್ತ ಸಂಸ್ಥೆ ಗಳನ್ನು ಒಂದೊಂದಾಗಿ ದುರ್ಬಲಗೊಳಿಸಿ ನಿರ್ನಾಮ ಮಾಡುತ್ತ ಹೊರಟಿರುವುದು ಖಂಡನೀಯವಾಗಿದೆ. ಸರ್ವಾಧಿಕಾರದತ್ತ ಹೊರಟ ಸರಕಾರ ಮಾತ್ರ ಇಂಥ ತಪ್ಪುಗಳನ್ನು ಮಾಡುತ್ತದೆ. ಜನರೇ ಇವರಿಗೆ ಪಾಠಕಲಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News