ಕೇಂದ್ರದ ಉದ್ಯೋಗ ನೀತಿ; ಒಕ್ಕೂಟ ವ್ಯವಸ್ಥೆಗೆ ಬಗೆದ ದ್ರೋಹ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2018-11-01 14:35 GMT

ಬೆಂಗಳೂರು, ನ. 1: ನೇಮಕಾತಿ ನಿಯಮಗಳಿಗೆ ಕೇಂದ್ರ ಸರಕಾರ 2015ರಲ್ಲಿ ತಂದಿರುವ ತಿದ್ದುಪಡಿಯು ಕರ್ನಾಟಕದ ಯುವಕರ ಉದ್ಯೋಗಕ್ಕೆ ಕುತ್ತು ತಂದಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ಬಗೆದ ದ್ರೋಹವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಗುರುವಾರ ಕನ್ನಡ ಸಂಘರ್ಷ ಸಮಿತಿಯ 39ನೆಯ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಭಾಷೆಯೂ ಅನ್ನದ ಭಾಷೆಯೇ. ಅದನ್ನು ಕಸಿದುಕೊಳ್ಳುವ ಮೂಲಕ ಕೇಂದ್ರ ಸರಕಾರ ಸಂಧಾನದ ಆಶಯಕ್ಕೇ ಅಪಚಾರವೆಸಗುತ್ತಿದೆ. ರಾಜ್ಯದ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು, ಕೇಂದ್ರ ಸಚಿವರು ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ತಂದು, ರಾಜ್ಯದಲ್ಲಿರುವ ರೈಲ್ವೆ ಇಲಾಖೆ, ಅಂಚೆ, ಕೇಂದ್ರ ಸರಕಾರದ ಅಧೀನದಲ್ಲಿವ ಉದ್ಯಮಗಳು, ಬ್ಯಾಂಕುಗಳು ಹಾಗೂ ಕೇಂದ್ರ ಸರಕಾರದ ವಿವಿಶ ಇಲಾಖೆಗಳಲ್ಲಿ ಖಾಲಿ ಹುದ್ದೆಗಳಿಗೆ ಭರ್ತಿಯ ಸಂದರ್ಭದಲ್ಲಿ ಈ ಮೊದಲು ಇದ್ದಂತೆ ‘ಸ್ಥಳೀಯ ಭಾಷಾಜ್ಞಾನ ಕಡ್ಡಾಯ’ ಎಂಬುದನ್ನು ಪುನಃ ಜಾರಿಗೊಳಿಸುವಂತೆ ಒತ್ತಾಯಿಸಬೇಕೆಂದರು. ನಾಡಗೀತೆಯನ್ನು ವಾದ್ಯ ಶೇಷಗಳಿಲ್ಲದೆ, ಪುನರಾವರ್ತನೆ ಮಾಡದೆ, ಯಾವುದೇ ಸಾಲಿಗೆ ಕತ್ತರಿ ಹಾಕದೆ ಆಲಾಪ ರಹಿತವಾಗಿ ಪ್ರಸ್ತುತಪಡಿಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು. ಕನ್ನಡ ಸಂಘರ್ಷ ಸುತಿ ಕನ್ನಡ ಪ್ರಜ್ಞೆಯನ್ನು ಸ್ತರಿಸುವ ಕಾರ್ಯ ಮಾಡುತ್ತಲೇ ನಾಡಿನಲ್ಲಿ ನೈತಿಕ ಎಚ್ಚರ ಮೂಡಿಸುತ್ತಿದೆ. ಕರೀಂಖಾನ್, ರಹಮಾನ್ ಖಾನ್ ಅವರ ನೆನೆಪಿನಲ್ಲಿ ಜಾನಪದ ಗೀತೆಗಳನ್ನು ಉಳಿಸುವ, ಕನ್ನಡ ಕಟ್ಟಾಳು ಪ್ರಶಸ್ತಿ ನೀಡುವ ಸಮಿತಿಯ ಕಾರ್ಯ ಶ್ಲಾಘನೀಯ ಎಂದರು.

ಸಾಕಮ್ಮ ಮುದ್ದಪ್ಪ ಅವರ ಹೆಸರಿನಲ್ಲಿ ನೀಡುತ್ತಿರುವ ನಿಸ್ಸೀಮ ಕನ್ನಡತಿ ಪ್ರಶಸ್ತಿಗೆ ಮಂಗಳೂರಿನ ರಂಜಿನಿಶೆಟ್ಟಿ ಅವರನ್ನು ಆಯ್ಕೆ ಮಾಡುವ ಮೂಲಕ ಪ್ರಾದೇಶಿಕ ನ್ಯಾಯಕ್ಕೆ ಒತ್ತು ಕೊಟ್ಟಿದ್ದಾರೆ. ಹಿರಿಯರಿಂದ ಕಿರಿಯರ ವರೆಗೆ ಪ್ರಶಸ್ತಿಗಳ ಬೆನ್ನು ಹತ್ತುವ ಪ್ರವೃತ್ತಿಯೇ ವಿಜೃಂಭಿಸುತ್ತಿರುವ ವರ್ತಮಾನದಲ್ಲಿ ಎಲೆಮರೆಯ ಕಾಯಿಯಂತೆ ಕನ್ನಡಕ್ಕಾಗಿ ದುಡಿಯುತ್ತಿರುವವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸ್ತುತ್ಯಾರ್ಹ ಎಂದರು.

ಆಶಯ ಭಾಷಣ ಮಾಡಿದ ಪ್ರಾಧ್ಯಾಪಕ, ಕನ್ನಡ ಸಂಘರ್ಷ ಸಮಿತಿಯ ಅಧ್ಯಕ್ಷ ಡಾ.ಕೋ.ವೆಂ.ರಾಮಕೃಷ್ಣೇಗೌಡ ರಾಜ್ಯೋತ್ಸವ ಸಮಾರಂಭಗಳು ಕನ್ನಡಿಗರ ಆತ್ಮಾವಲೋಕನದ ವೇದಿಕೆಗಳಾಗಬೇಕೇ ಹೊರತು ಅನುಷ್ಠಾನವಲ್ಲದ ಶುಷ್ಕ ಘೋಷಣೆ ಮಾಡುವಂತಾಗಬಾರದು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ, ಜಲವಾದ, ಗಡಿ ಸಮಸ್ಯೆ, ನಾಡಿನ ಬಾವುಟ, ನಾಡಗೀತೆ, ಕನ್ನಡ ಮಾಧ್ಯಮ ಶಾಲೆಗಳ ಮುಚ್ಚುಕೆ, ಕನ್ನಡ ಅನುಷ್ಠಾನ, ಸರೋಜಿನಿ ಮ ಪರಿಷ್ಕೃತ ವರದಿಯ ಅನುಷ್ಠಾನ ಹೀಗೆ ವಿವಿಧ ಸಮಸ್ಯೆಗಳು ನಾಡನ್ನು ಕಿತ್ತು ತಿನ್ನುತ್ತಿರುವಾಗ ಆಡಂಬರದ ರಾಜ್ಯೋತ್ಸವಗಳು ಅರ್ಥ ಕಳೆದುಕೊಳ್ಳುತ್ತಿವೆ ಎಂದು ಕಳವಳ ವ್ಯಕ್ತಮಾಡಿದರು.

ಅಧ್ಯಕ್ಷತೆ ವಸಿದ್ದ ಕನ್ನಡ ಸಾತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್, ಯೋಗ್ಯರಿಗೆ ಅವರ ಅರ್ಹತೆಯನ್ನು ಗುರುತಿಸಿ ಪ್ರಶಸ್ತಿ ನೀಡುವ ಕನ್ನಡಪರ ಹೋರಾಟ ಸಂಸ್ಥೆಗಳಲ್ಲಿ ಕನ್ನಡ ಸಂಘರ್ಷ ಸುತಿ ಮಾದರಿ ಸಂಸ್ಥೆಯಾಗಿದೆ ಎಂದರು. ಕನ್ನಡ ಕಟ್ಟಾಳು ಪ್ರಶಸ್ತಿಯು ನಾಡೋಜ ಪ್ರಶಸ್ತಿಯಂತೆ ತನ್ನದೇ ವಿಶಿಷ್ಟತೆಯನ್ನು ಪಡೆದುಕೊಂಡಿದೆ ಎಂದು ಹೇಳಿದ ಕವಿ ಜರಗನಹಳ್ಳಿ ಶಿವಶಂಕರ್ ನೊಬೆಲ್ ಪ್ರಶಸ್ತಿ ವಿಷಾದದ ಪ್ರಶಸ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಹಿರಿಯ ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿ ಮುಖ್ಯ ಅತಿಥಿಯಾಗಿ ಭಾಗವಸಿದ್ದರು. ರಹಮಾನ್ ಖಾನ್ ಸ್ಮಾರಕ ಕನ್ನಡ ಕಟ್ಟಾಳು ಪ್ರಶಸ್ತಿಯನ್ನು ಹನುಮಂತರಾಯ ಅವರಿಗೆ, ನಿಸ್ಸೀಮ ಕನ್ನಡತಿ ಪ್ರಶಸ್ತಿಯನ್ನು ಮಂಗಳೂರಿನ ರಂಜಿನಿಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.

ಜಾನಪದ ಜಂಗಮ ಡಾ.ಎಸ್.ಕೆ.ಕರೀಂಖಾನ್ ನೆನಪಿನ, ಲೇರಿನಾ ಜಾಕೊಬ್ ಲೋಬೊ ದತ್ತಿಯಡಿ ನಡೆದ ಜನಪದ ಗೀತೆಗಳ ಗಾಯನ ಸ್ಪರ್ಧೆಯ ಕಿರಿಯರ ಭಾಗದಲ್ಲಿ ಬಹುಮಾನ ಪಡೆದ ಡಿ.ಬಿ.ಪ್ರತೀಕ್ಷಾ ಆರ್.ಲಕ್ಷ್ಮಿದೇವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News