ಕಂಡಲ್ಲಿ ಕಸ ಹಾಕಿದರೆ 500 ರೂ. ದಂಡ: ಡಾ.ಜಿ.ಪರಮೇಶ್ವರ್

Update: 2018-11-02 13:40 GMT

ಬೆಂಗಳೂರು, ನ.2: ನಗರದಲ್ಲಿರುವ ಕಸದ ಸಮಸ್ಯೆಯನ್ನು ಗಂಭೀರವಾಗಿ ಸ್ವೀಕರಿಸಿದ್ದು, ಕಂಡ ಕಂಡಲ್ಲಿ ಕಸ ಎಸೆಯುವವರಿಗೆ ಪಾಲಿಕೆ ವಿಧಿಸುತ್ತಿದ್ದ 100 ರೂ. ದಂಡವನ್ನು 500 ರೂ.ಗಳಿಗೆ ಹೆಚ್ಚಿಸಿ, ಕಠಿಣವಾಗಿ ಈ ನಿಯಮವನ್ನು ಪಾಲಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ತ್ಯಾಜ್ಯ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದ ಅವರು, ತ್ಯಾಜ್ಯ ಸಮಸ್ಯೆ ನಿವಾರಣೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತಂತೆ ಮಾಹಿತಿ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸ ವಿಲೇವಾರಿ ಕುರಿತು ದೇಶವೇ ಬೆಂಗಳೂರಿನೆಡೆಗೆ ನೋಡುವ ಹಾಗಾಗಿದೆ. ಹೈಕೋರ್ಟ್ ನಿರ್ದೇಶನವನ್ನು ನಾನು ಸ್ವಾಗತಿಸುತ್ತೇನೆ. ಈ ಹಿಂದೆ ತ್ಯಾಜ್ಯ ನಿರ್ವಹಣೆ ಬಿಬಿಎಂಪಿ ಹಿಡಿತಕ್ಕೆ ಸಿಕ್ಕಿರಲಿಲ್ಲ. ಆದರೀಗ, ಅದನ್ನು ಹಿಡಿತಕ್ಕೆ ತೆಗೆದುಕೊಂಡಿದ್ದು, ಸಮಸ್ಯೆ ನಿವಾರಿಸಲು ಕೆಲಸ ಮಾಡಲಾಗುತ್ತಿದೆ ಎಂದರು.

ನಗರದಲ್ಲಿ ಕೆಲವರು ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದರಿಂದ ವಿಲೇವಾರಿಗೆ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂಡ ಕಂಡಲ್ಲಿ ಕಸ ಹಾಕುವವರಿಗೆ ಈ ಹಿಂದೆ ಪಾಲಿಕೆ 100 ರೂ. ದಂಡ ವಿಧಿಸಲಾಗುತ್ತಿದ್ದು, ಅದನ್ನು 500 ರೂ.ಗಳಿಗೆ ಹೆಚ್ಚಿಸಲು ಪ್ರಸ್ತಾವನೆ ಬಂದಿದ್ದು, ಸರಕಾರ ಅದಕ್ಕೆ ಶೀಘ್ರವೇ ಒಪ್ಪಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

ಪ್ರತಿವಾರ್ಡ್‌ಗೆ ಒಬ್ಬರಂತೆ ಮಾರ್ಷಲ್‌ಗಳ ನೇಮಕ ಮಾಡಲಾಗುತ್ತಿದೆ. ಜತೆಗೆ ವಿಧಾನಸಭಾ ಕ್ಷೇತ್ರಕ್ಕೊಬ್ಬರಂತೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಹಿರಿಯ ಆರೋಗ್ಯ ಪರಿವೀಕ್ಷಕರನ್ನು ನೇಮಿಸಲಾಗುತ್ತಿದೆ. ಪ್ರತಿವಾರ್ಡ್‌ಗೆ ಇಬ್ಬರಿಂದ ಮೂವರಂತೆ ದಫೇದಾರ್‌ಗಳನ್ನು ನೇಮಿಸುತ್ತಿದ್ದು, ಅವರೆಲ್ಲರೂ ಕಸ ನಿರ್ವಹಣೆ ಕುರಿತು ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ 1.30 ಕೋಟಿ ಜನರು ವಾಸಿಸುತ್ತಿದ್ದಾರೆ. ಅದರ ಜತೆಗೆ 20 ರಿಂದ 30 ಲಕ್ಷ ಜನರು ಪ್ರತಿನಿತ್ಯ ಬೆಂಗಳೂರಿಗೆ ಬಂದು ಹೋಗುತ್ತಿದ್ದಾರೆ. ಅದೇ ರೀತಿ ನಗರದಲ್ಲಿ 29 ಲಕ್ಷ ಮನೆಗಳಿದ್ದು, 5 ಲಕ್ಷ ವಾಣಿಜ್ಯ ಕಟ್ಟಡಗಳಿವೆ. ಪ್ರತಿದಿನ ವಸತಿ ಕಟ್ಟಡಗಳಿಂದ 4,200 ಟನ್ ತ್ಯಾಜ್ಯ ಮತ್ತು ಸಗಟು ಉತ್ಪಾದಕರಿಂದ 1,500 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದನ್ನು ಪ್ರತಿದಿನ ನಿರ್ವಹಣೆ ಮಾಡಬೇಕಿದೆ. ಒಂದು ದಿನ ಅದರಲ್ಲಿ ವ್ಯತ್ಯಾಸವಾದರೂ ಸಮಸ್ಯೆ ಉದ್ಭವವಾಗಲಿದೆ. ಅದಕ್ಕಾಗಿ ಎಚ್ಚರಿಕೆಯಿಂದ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

3 ತಿಂಗಳ ನಂತರ ಸಮಸ್ಯೆ ಹೆಚ್ಚಳ: ನಗರದ ಬಹುಪಾಲು ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಬೆಳ್ಳಳ್ಳಿ ಕಲ್ಲು ಕ್ವಾರಿ ಮುಂದಿನ ಮೂರು ತಿಂಗಳಲ್ಲಿ ಭರ್ತಿಯಾಗುತ್ತಿದ್ದು, ಆನಂತರ ತ್ಯಾಜ್ಯ ವಿಲೇವಾರಿ ಹೇಗೆ ಎಂಬುದರ ಬಗ್ಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಪರಮೇಶ್ವರ್ ಕಸದ ಸಮಸ್ಯೆ ಉದ್ಭವವಾಗುವ ಕುರಿತು ಮುನ್ಸೂಚನೆ ನೀಡಿದ್ದಾರೆ.

ತ್ಯಾಜ್ಯ ಸಂಗ್ರಹಕ್ಕಾಗಿ 4,213 ಆಟೋ ಟಿಪ್ಪರ್, 566 ಕಾಂಪ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದೆ. ಜತೆಗೆ ರಸ್ತೆ ಕಸಗುಡಿಸಲು 8 ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳಿದ್ದು, 18,500 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ 166 ಒಣತ್ಯಾಜ್ಯ ಸಂಗ್ರಹ ಘಟಕಗಳು, 11 ಬಯೋಮಿಥನೈಸೇಷನ್ ಘಟಕ ಮತ್ತು 8 ಬೃಹತ್ ತ್ಯಾಜ್ಯ ಸಂಸ್ಕರಣಾ ಘಟಕಗಳಿವೆ. ಆದರೆ, ಬೃಹತ್ ಪ್ರಮಾಣದಲ್ಲಿ ಸಂಗ್ರಹವಾಗುವ ಮಿಶ್ರತ್ಯಾಜ್ಯ ವಿಲೇವಾರಿಗಿರುವ ಬೆಳ್ಳಳ್ಳಿ ಕ್ವಾರಿ ಇನ್ನು 3 ತಿಂಗಳಲ್ಲಿ ತ್ಯಾಜ್ಯದಿಂದ ಭರ್ತಿಯಾಗಲಿದೆ. ಅದಾದ ನಂತರ ತ್ಯಾಜ್ಯ ಎಲ್ಲಿ ವಿಲೇವಾರಿ ಮಾಡಬೇಕು ಎಂಬದು ಪ್ರಶ್ನೆಯಾಗಿದ್ದು, ಅದಕ್ಕಾಗಿ ಪರಿಹಾರ ಹುಡುಕಲಾಗುತ್ತಿದೆ ಎಂದು ತಿಳಿಸಿದರು.

ಅಧಿಕಾರಿಗಳಿಗೆ ತರಾಟೆ: ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಡಿಸಿಎಂ ಪರಮೇಶ್ವರ್, ನೀವು ಕೆಲಸ ಮಾಡದಿದ್ದರೆ ನ್ಯಾಯಾಲಯದಿಂದ ಸರಕಾರ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತಿದೆ. ಅದು ನಮಗೆ ಬೇಕಾ? ಇಷ್ಟೊಂದು ಹಣ ಖರ್ಚು ಮಾಡಲಾಗುತ್ತಿದೆ, ಆದರೂ ಸಮಸ್ಯೆ ನಿವಾರಣೆಯಾಗುತ್ತಿಲ್ಲ. ಸರಿಯಾಗಿ ಕೆಲಸ ಮಾಡೋಕೆ ಆಗಲ್ವಾ ನಿಮಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಸ ಕ್ವಾರಿಗಳ ಗುರುತು

ಬೆಳ್ಳಳ್ಳಿ ಘಟಕದ ನಂತರ ತ್ಯಾಜ್ಯ ವಿಲೇವಾರಿ ಮಾಡುವ ಸಂಬಂಧ ಬಾಗಲೂರು, ಉಳ್ಳಳ್ಳಿ ಮತ್ತು ಮಾರೇನಹಳ್ಳಿಯಲ್ಲಿನ ಕಲ್ಲು ಕ್ವಾರಿಯನ್ನು ಗುರುತಿಸಲಾಗಿದೆ. ಆದರೆ, ಅವುಗಳು ತ್ಯಾಜ್ಯ ವಿಲೇವಾರಿಗೆ ಸೂಕ್ತವಾಗಿವೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅದರ ಜತೆಗೆ ಈಗಿರುವ 8 ಸಂಸ್ಕರಣಾ ಘಟಕಗಳನ್ನು ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕವನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ತ್ಯಾಜ್ಯ ಅಕ್ರಮ ಸಿಐಡಿಗೆ

‘ನಗರದಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಅಕ್ರಮ ನಡೆದಿರುವ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪಾಲಿಕೆಯಿಂದ ವರದಿ ಕೇಳಲಾಗಿದ್ದು, ವರದಿ ಸಲ್ಲಿಸಿದ ಬಳಿಕ ಪರಿಶೀಲನೆ ನಡೆಸಿ ಅದರ ಆಧಾರದ ಮೇಲೆ ಪ್ರಕರಣವನ್ನು ಸಿಐಡಿ ಅಥವಾ ಎಸಿಬಿಗೆ ವಹಿಸಬೇಕಾ ಎಂದು ನಿರ್ಧಾರ ಮಾಡಲಾಗುವುದು’

-ಡಾ.ಜಿ.ಪರಮೇಶ್ವರ್, ಬೆಂಗಳೂರು ನಗರಾಭಿವೃದ್ಧಿ ಸಚಿವ

ನಗರದ ಬೆಳ್ಳಳ್ಳಿ ಕ್ವಾರಿ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರ ವಿರೋಧದಿಂದಾಗಿ ತ್ಯಾಜ್ಯ ವಿಲೇವಾರಿ ಸ್ಥಗಿತ ಮಾಡಿದ್ದ ದೊಡ್ಡಬಳ್ಳಾಪುರದ ಟೆರ್ರಾಫಾರ್ಮ ಘಟಕದಲ್ಲಿ ಆಧುನಿಕ ವಿಲೇವಾರಿ ಉಪಕರಣಗಳನ್ನು ಅಳವಡಿಸುವ ಮೂಲಕ ಮರು ಆರಂಭ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಅಲ್ಲದೆ, ಬಿಡದಿ ಬಳಿ ಬೆಸ್ಕಾಂ ಜತೆ ಸೇರಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಕಾರ್ಯ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News