ಗುಜರಾತ್ ಮಾಜಿ ಗೃಹ ಸಚಿವ ಪಾಂಡ್ಯಾ ಕೊಲೆಗೆ ಸೊಹ್ರಾಬುದ್ದೀನ್ ಗೆ ಕಾಂಟ್ರಾಕ್ಟ್ ನೀಡಿದ್ದ ಡಿಜಿ ವಂಝಾರ

Update: 2018-11-04 17:28 GMT

►ಗುಜರಾತ್‌ನ ಮಾಜಿ ಸಚಿವನ ಹತ್ಯೆ ಪ್ರಕರಣಕ್ಕೆ ಹೊಸ ತಿರುವು

ಹೊಸದಿಲ್ಲಿ,ನ.4: ಗುಜರಾತ್‌ನ ಮಾಜಿ ಗೃಹ ಸಚಿವ ಹರೇನ್ ಪಾಂಡ್ಯ ಅವರನ್ನು ಹತ್ಯೆಗೈಯಲು, ಗುಜರಾತ್‌ನ ಮಾಜಿ ಪೊಲೀಸ್ ಅಧಿಕಾರಿ ಡಿ.ಜಿ.ವಂಝಾರಾ ಸೊಹ್ರಾಬುದ್ದೀನ್ ಗೆ ಸುಪಾರಿ ನೀಡಿದ್ದರು ಎಂದು ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬ ಶನಿವಾರ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.

 ಹರೇನ್‌ ಪಾಂಡ್ಯ ಕೊಲೆ ಪ್ರಕರಣದಲ್ಲಿ ವಂಝಾರಾ ಶಾಮೀಲಾಗಿರುವ ಬಗ್ಗೆ ತಾನು ಸಿಬಿಐ ಅಧಿಕಾರಿಯೊಬ್ಬರಿಗೆ ಈ ಹಿಂದೆಯೇ ತಿಳಿಸಿದ್ದೇನೆಂದು ಸಾಕ್ಷಿದಾರ ಅಝಂ ಖಾನ್ ಹೇಳಿದ್ದಾನೆ,  ಆದರೆ ತನ್ನ ಸಾಕ್ಷವನ್ನು ದಾಖಲಿಸಲು ತನಿಖಾಧಿಕಾರಿ ನಿರಾಕರಿಸಿದ್ದಾರೆಂದು ಆತ ತಿಳಿಸಿದ್ದಾನೆ.

   ಉದಯಪುರ ಜೈಲಿನಲ್ಲಿದ್ದ ಅಝಂಖಾನ್‌ನನ್ನು ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಮುಂಬೈಗೆ ಕರೆತರಲಾಗಿದೆ.

 ‘‘ಗುಜರಾತ್‌ನ ಗೃಹ ಸಚಿವ ಹರೇನ್ ಪಾಂಡ್ಯ ಅವರನ್ನು ಹತ್ಯೆಗೈಯಲು ಡಿ.ಜಿ. ವಂಝಾರ ಅವರಿಂದ ತಾನು ಹಣಪಡೆದಿದ್ದಾಗಿಯೂ ಹಾಗೂ ಆ ಕೆಲಸವನ್ನು ಪೂರ್ಣಗೊಳಿಸಿದ್ದಾಗಿಯೂ ಸೊಹ್ರಾಬುದ್ದೀನ್ ನನ್ನೊಂದಿಗೆ ಹೇಳಿಕೊಂಡಿದ್ದ. ಆಗ ನಾನು ಆತ ಮಾಡಿದ್ದು ತಪ್ಪೆಂದೂ, ಓರ್ವ ಉತ್ತಮ ವ್ಯಕ್ತಿಯನ್ನು ನೀನು ಕೊಂದಿರುವುದಾಗಿ ನಾನು ಸೊಹ್ರಾಬುದ್ದಿನ್‌ಗೆ ಹೇಳಿದ್ದೆ’’ ಎಂದು ಅಝಂಖಾನ್‌ನ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

 ಆನಂತರ ತಾನು ಸೊಹ್ರಾಬುದ್ದೀನ್‌ನ ಸಹಚರ ತುಲಸೀರಾಮ್ ಪ್ರಜಾಪತಿಯನ್ನು ಉದಯಪುರ ಜೈಲಿನಲ್ಲಿ ಭೇಟಿಯಾಗಿದ್ದಾಗಿ ಅಝಂಖಾನ್ ತಿಳಿಸಿದ್ದಾನೆೆ. ‘‘ ಗುಜರಾತ್ ಪೊಲೀಸರು ಸೊಹ್ರಾಬುದ್ದೀನ್ ಶೇಖ್ ಹಾಗೂ ಆತನ ಪತ್ನಿ ಕೌಸರ್‌ ಬಿಯನ್ನು ಹತ್ಯೆಗೈದಿರುವುದಾಗಿ ಪ್ರಜಾಪತಿ ನನಗೆ ತಿಳಿಸಿದ್ದ’’ ಎಂದು ಅಝಂಖಾನ್ ಸಿಬಿಐ ವಿಶೇಷ ನ್ಯಾಯಾಧೀಶ ಎಸ್.ಜೆ.ಶರ್ಮಾ ಅವರ ಮುಂದೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ.

   ಗುಜರಾತ್‌ನ ಗೃಹ ಸಚಿವರಾಗಿದ್ದ ಹರೇನ್ ಪಾಂಡ್ಯ ಅವರನ್ನು 2003ರಲ್ಲಿ ಅಹ್ಮದಾಬಾದ್‌ನಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಬಿಐ, 2002ರಲ್ಲಿ ನಡೆದ ಗುಜರಾತ್ ಗಲಭೆಗಾಗಿ ಸೇಡು ತೀರಿಸುವುದಕ್ಕಾಗಿ ಹರೇನ್ ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆಂಬ ತೀರ್ಮಾನಕ್ಕೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟ ಎಲ್ಲಾ 12 ಮಂದಿ ಆರೋಪಿಗಳನ್ನು ಆನಂತರ ಸಾಕ್ಷಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಗುಜರಾತ್‌ ಹೈಕೋರ್ಟ್ ದೋಷಮುಕ್ತಗೊಳಿಸಿತ್ತು ಹಾಗೂ ಸಿಬಿಐ ಈ ಪ್ರಕರಣದ ತನಿಖೆಯನ್ನು ಅತ್ಯಂತ ಕಳಪೆಯಾಗಿ ನಿರ್ವಹಿಸಿದೆಯೆಂದು ಅದು ಅಸಮಾಧಾನ ವ್ಯಕ್ತಪಡಿಸಿತ್ತು.

 ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಕಾನೂನುಬಾಹಿರ ಹತ್ಯೆಯನ್ನು ನಡೆಸಿದ ಆರೋಪದಲ್ಲಿ 9 ವರ್ಷಗಳ ಕಾಲ ವಂಝಾರ ಜೈಲುವಾಸ ಅನುಭವಿಸಿದ್ದರು. ಆದರೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಪ್ರಕರಣದಿಂದ ದೋಷಮುಕ್ತಿಗೊಳಿಸಲಾಗಿತ್ತು.

 ಸಣ್ಣಪುಟ್ಟ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಸೊಹ್ರಾಬುದ್ದೀನ್ ಶೇಖ್‌ನನ್ನು 2005ರ ನವೆಂಬರ್‌ನಲ್ಲಿ ನಡೆದ ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿತ್ತು. ಸೊಹ್ರಾಬುದ್ದೀನ್ ಓರ್ವ ಭಯೋತ್ಪಾದಕನಾಗಿದ್ದು, ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು ಕೊಲೆ ಮಾಡಲು ಸಂಚು ಹೂಡಿದ್ದನೆಂದು ಗುಜರಾತ್‌ನ ಭಯೋತ್ಪಾದಕ ನಿಗ್ರಹದಳ ಆಪಾದಿಸಿತ್ತು.

 ತಾನು ಸೊಹ್ರಾಬುದ್ದೀನ್‌ನನ್ನು 2002ರಲ್ಲಿ ಭೇಟಿಯಾಗಿದ್ದು, ಆತ ಹಾಗೂ ಆತನ ಪತ್ನಿ ಕೌಸರ್‌ ಬಿಯ ಪರಿಚಯವಾಗಿತ್ತೆಂದು ಅಝಂ ಖಾನ್ ತಿಳಿಸಿದ್ದಾನೆ.

 ಗುಜರಾತ್‌ನ ಭಯೋತ್ಪಾದನಾ ನಿಗ್ರಹದಳವು ಸೊಹ್ರಾಬುದ್ದೀನ್ ಶೇಖ್‌ನನ್ನು ಅಪಹರಿಸಿದ್ದ ಸಂದರ್ಭದಲ್ಲಿ ಆತನ ಜೊತೆಗಿದ್ದನೆನ್ನಲಾದ ತುಲಸಿರಾಮ್ ಪ್ರಜಾಪತಿ 2006ರಲ್ಲಿ ಸಾವನ್ನಪ್ಪಿದ್ದ. ಗುಜರಾತ್ ಪೊಲೀಸರು ನಕಲಿ ಎನ್‌ಕೌಂಟರ್ ನಡೆಸಿ ಆತನನ್ನು ಕೊಲೆ ಮಾಡಿದ್ದರೆಂದು ಸಿಬಿಐ ಆಪಾದಿಸಿತ್ತು.

  ಈ ಎರಡು ನಕಲಿ ಎನ್‌ಕೌಂಟರ್ ಪ್ರಕರಣಗಳಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿದ್ದ 38 ಮಂದಿಯ ಪೈಕಿ 16 ಮಂದಿಯನ್ನು ವಿಚಾರಣಾ ನ್ಯಾಯಾಲಯ ದೋಷಮುಕ್ತಗೊಳಿಸಿತ್ತು. ಪ್ರಕರಣದ ತನಿಖೆ ನ್ಯಾಯಯುತವಾಗಿ ನಡೆಯಲು ಅವಕಾಶ ಮಾಡಿಕೊಡಬೇಕೆಂದು ಸಿಬಿಐ ಮನವಿ ಮಾಡಿದ ಹಿನ್ನೆಲೆಯಲ್ಲಿ, 2012ರಲ್ಲಿ ಸೊಹ್ರಾಬುದ್ದೀನ್ ಪ್ರಕರಣವನ್ನು ಗುಜರಾತ್‌ನಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು.

 ಸೊಹ್ರಾಬುದ್ದೀನ್ ಪ್ರಕರಣದಲ್ಲಿ ದೋಷಮುಕ್ತಗೊಂಡ ಆರೋಪಿಗಳಲ್ಲಿ ಗುಜರಾತ್ ಪೊಲೀಸ್ ಅಧಿಕಾರಿ ಅಭಯ್ ಚೂಡಾಸಮಾ, ರಾಜಸ್ತಾನದ ಗೃಹ ಸಚಿವ ಗುಲಾಬ್‌ಚಂದ್ ಕಟಾರಿಯಾ, ಮಾಜಿ ಗುಜರಾತ್ ಪೊಲೀಸ್ ವರಿಷ್ಠ ಪಿ.ಸಿ.ಪಾಂಡೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಗೀತಾ ಜೋಹ್ರಿ ಸೇರಿದ್ದಾರೆ. ಈ ಪ್ರಕರಣದಲ್ಲಿ ಹೆಸರಿಸಲ್ಪಟ್ಟಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನೂ ದೋಷಮುಕ್ತಗೊಳಿಸಲಾಗಿದೆ. ಅಮಿತ್‌ ಶಾ ನಿರಪರಾಧಿಯಾಗಿದ್ದು, ರಾಜಕೀಯ ಕಾರಣಗಳಿಗಾಗಿ ಅವರ ಹೆಸರನ್ನು ತನಿಖಾಪಟ್ಟಿಯಲ್ಲಿ ಸೇರಿಸಲಾಗಿತ್ತು ಎಂದು ನ್ಯಾಯಾಲಯ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News