ಚುನಾವಣೆಯಲ್ಲಿ ಬಳಕೆಯಾಗಲಿರುವ ರಾಮಮಂದಿರ ಎನ್ನುವ ಅನಸ್ತೇಶಿಯಾ

Update: 2018-11-04 18:56 GMT

ಮೀಡಿಯಾಗಳು ಮತ್ತು ಕಾರ್ಪೊರೇಟ್ ಶಕ್ತಿಗಳು ಜಂಟಿಯಾಗಿ ಸೃಷ್ಟಿಸಿದ ಭ್ರಮೆ ‘ನರೇಂದ್ರ ಮೋದಿ’ ಎನ್ನುವುದನ್ನು ದೇಶ ನಿಧಾನಕ್ಕೆ ಅರ್ಥ ಮಾಡಿಕೊಳ್ಳುತ್ತಿದೆ ಎನ್ನುವುದು ಬಿಜೆಪಿಗೂ, ಸಂಘಪರಿವಾರಕ್ಕೂ ಅರ್ಥವಾಗುತ್ತಿದೆ. ದೇಶಕ್ಕೆ ಒಳ್ಳೆಯ ದಿನಗಳನ್ನು ಕೊಡುತ್ತೇನೆ ಎಂದು ಭರವಸೆ ಕೊಟ್ಟು ಪ್ರಧಾನಮಂತ್ರಿ ಹುದ್ದೆಯನ್ನು ಏರಿದ ಮೋದಿ, ಈ ದೇಶ ಕಂಡ ಅತಿ ಅಸಮರ್ಥ, ದುರ್ಬಲ ಪ್ರಧಾನ ಮಂತ್ರಿ ತಾನು ಎನ್ನುವುದನ್ನು ಈ ನಾಲ್ಕು ವರ್ಷಗಳಲ್ಲಿ ಸಾಬೀತು ಪಡಿಸಿದ್ದಾರೆ. ಹೆಸರಿಗಷ್ಟೇ ಪ್ರಧಾನಿಯಾಗಿದ್ದು, ದೇಶದ ಚುಕ್ಕಾಣಿಯನ್ನು ಅಂಬಾನಿಯಂತಹ ಉದ್ಯಮಿಗಳು ಮತ್ತು ಆರೆಸ್ಸೆಸ್‌ನಂತಹ ಸಂಘಟನೆಗಳ ಕೈಗೆ ಕೊಟ್ಟ ಪರಿಣಾಮವನ್ನು ದೇಶ ಅನುಭವಿಸುತ್ತಿದೆ. ಕಪ್ಪು ಹಣ ಬರಲಿಲ್ಲ. ಬದಲಿಗೆ ದೇಶದೊಳಗಿರುವ ಬಡಜನರ ನೋಟುಗಳನ್ನೇ ಕಿತ್ತು ಬ್ಯಾಂಕಿಗೆ ತುಂಬಿಸಲಾಯಿತು. ನೋಟು ನಿಷೇಧವೆನ್ನುವ ಪ್ರಮಾದದಿಂದ ದೇಶದ ಅರ್ಥವ್ಯವಸ್ಥೆ ನೆಲಕಚ್ಚಿತು. ‘ನೋಟು ನಿಷೇಧ’ದಿಂದ ದೇಶದೊಳಗೆ ಕ್ರಾಂತಿಯೇ ಸಂಭವಿಸಿಬಿಡುತ್ತದೆ ಎಂದು ನಿರೀಕ್ಷಿಸಿದ ಜನರಿಗೆ ತೀವ್ರ ಭ್ರಮನಿರಸನವಾಯಿತು. ಡಾಲರ್ ಮುಂದೆ ರೂಪಾಯಿ ಮಕಾಡೆ ಮಲಗಿದೆ. ತೈಲ ಬೆಲೆ ಗಗನಕ್ಕೇರಿದೆ. ಗ್ಯಾಸ್ ಸಿಲಿಂಡರ್ ಬೆಲೆ ಒಂದು ಸಾವಿರ ರೂಪಾಯಿಯನ್ನು ತಲುಪಿದೆ.

ಮೋದಿಯ ಮಾತನ್ನು ನಂಬಿ ‘ಸಬ್ಸಿಡಿ’ ತ್ಯಜಿಸಿದವರು ಇದೀಗ ಅವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಡಿಜಿಟಲ್ ಬ್ಯಾಂಕಿಂಗ್‌ನ ಕಲ್ಪನೆ ಬುಡಮೇಲಾಗಿದೆ. ಆಧಾರ್ ಜನರ ಪ್ರಾಣವನ್ನು ಕಿತ್ತು ತಿನ್ನುತ್ತಿದೆ. ನಕಲಿ ಗೋರಕ್ಷಕರಿಂದಾಗಿ ರೈತರು ಗೋವುಗಳನ್ನು ಸಾಕಿ ಬದುಕು ನಡೆಸುವುದೂ ಕಷ್ಟವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಇಳಿಮುಖವಾಗಿದೆ. ಜನಸಾಮಾನ್ಯರ ಸಂಕಟಗಳಿಗೆ ಸ್ಪಂದಿಸದ ಸರಕಾರ, ಗೋಶಾಲೆಗಳಿಗೆ, ಪ್ರತಿಮೆಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಅಭಿವೃದ್ಧಿ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿರುವ ಸರಕಾರ, ಜನರನ್ನು ಭಾವನಾತ್ಮಕವಾಗಿ ಮರುಳು ಮಾಡಲು ಯತ್ನಿಸುತ್ತಿದೆ. ಆದರೆ ಭಾವನೆಗಳಿಗಿಂತ ಹೊಟ್ಟೆ ಪಾಡು ಮುಖ್ಯ. ಪ್ರತಿಮೆ, ಗೋಶಾಲೆ ಇತ್ಯಾದಿಗಳ್ಯಾವುದೂ ಮೋದಿಯ ವರ್ಚಸ್ಸನ್ನು ಮೇಲೆತ್ತುವುದಕ್ಕೆ ಸಹಾಯ ಮಾಡುತ್ತಿಲ್ಲ. ನೀಲಿ ನರಿಯ ಬಣ್ಣ, ನಾಲ್ಕು ವರ್ಷಗಳಲ್ಲೇ ಕರಗಿ ಹೋಗಿದೆ. ಮೋದಿ ಎನ್ನುವ ಭ್ರಮೆ ಹುಸಿಯಾಗಿದೆ. ಮುಂದಿನ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಆದರೆ ಚುನಾವಣೆಯಲ್ಲಿ ಮಾತನಾಡಲು ಬಿಜೆಪಿಯ ಬಳಿ ಯಾವುದೇ ವಿಷಯಗಳಿಲ್ಲ. ಮೋದಿಯ ಸಾಧನೆಗಳನ್ನು ಹೇಳುವುದಕ್ಕಿಂತ, ಅವರು ಮಾಡಿರುವ ಅನಾಹುತಗಳನ್ನು ಮುಚ್ಚಿ ಹಾಕುವುದರಲ್ಲೇ ಬಿಜೆಪಿಗೆ ಸಾಕಾಗುತ್ತಿದೆ. ಮಾತು ಮಾತಿಗೆ ಕಾಂಗ್ರೆಸ್‌ನ ಕಾಲದ ‘ಬೊಫೋರ್ಸ್ ಹಗರಣ’ವನ್ನು ಉಲ್ಲೇಖಿಸುತ್ತಿದ್ದ ಬಿಜೆಪಿಯ ಕುತ್ತಿಗೆಗೆ ರಫೇಲ್ ಹಗರಣದ ಉರುಳು ಬಿಗಿಯಾಗುತ್ತಿದೆ. ಇಂತಹ ಹೊತ್ತಿನಲ್ಲಿ ಚುನಾವಣೆಯನ್ನು ಎದುರಿಸಬೇಕಾದರೆ, ದೇಶವನ್ನು ಅನಸ್ತೇಶಿಯಾದಲ್ಲಿಡಬೇಕು.

ಅಂದರೆ, ಮೋದಿಯ ಅವಾಂತರಗಳಿಂದ ಜನರ ಸ್ಮತಿಯನ್ನು ಬೇರೆಡೆಗೆ ವರ್ಗಾಯಿಸಬೇಕು. ಅರ್ಥಾತ್ ಜನರನ್ನು ವಿಸ್ಮತಿಗೆ ಕೆಡವಬೇಕು. ಈ ಕಾರಣದಿಂದಲೇ ಬಿಜೆಪಿ, ಸಂಘಪರಿವಾರ ಮತ್ತೆ ರಾಮಮಂದಿರ ಎನ್ನುವ ‘ಭೂತ’ಕ್ಕೆ ಜೀವಕೊಡಲು ಹೊರಟಿದೆ. ಕಳೆದ ನಾಲ್ಕು ವರ್ಷ ವೌನವಾಗಿದ್ದವರೆಲ್ಲ ಏಕಾಏಕಿ ರಾಮಮಂದಿರ ಜಪವನ್ನು ಶುರು ಮಾಡಿದ್ದಾರೆ. ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಈ ಜಪ ತಾರಕಕ್ಕೇರಲಿದೆ. ಮೋದಿ ಈ ದೇಶಕ್ಕೆ ಮಾಡಿದ ಹಾನಿಗಳೆಲ್ಲ ಬದಿಗೆ ಸರಿದು, ಮಾಧ್ಯಮಗಳಲ್ಲಿ ರಾಮಮಂದಿರದ ಗುಲ್ಲು ಆದ್ಯತೆಯನ್ನು ಪಡೆಯಲಿದೆ. ಒಂದು ವೇಳೆ, ರಾಮಮಂದಿರದ ಹೆಸರಿನಲ್ಲಿ ಹಿಂಸಾಚಾರ ನಡೆಸಿ ಅಧಿಕಾರ ಹಿಡಿಯುವಲ್ಲಿ ಸಂಘಪರಿವಾರ ಮತ್ತು ಬಿಜೆಪಿ ಯಶಸ್ವಿಯಾದರೆ, ಅದು ಭವಿಷ್ಯದಲ್ಲಿ ದೇಶವನ್ನು ಇನ್ನಷ್ಟು ಅಂಧಕಾರದೆಡೆಗೆ ಒಯ್ಯಲಿದೆ. ದೇಶದ ಆರ್ಥಿಕತೆ ಶತಮಾನದಷ್ಟು ಹಿಂದಕ್ಕೆ ಚಲಿಸುವುದು ಮಾತ್ರವಲ್ಲ, ಪ್ರಜಾಸತ್ತೆ ಅಮಾನತುಗೊಂಡು, ದೇಶದ ಚುಕ್ಕಾಣಿ ಸಂಘಪರಿವಾರದ ವೇಷದಲ್ಲಿರುವ ಬೀದಿಯ ಗೂಂಡಾಗಳ ಕೈ ಸೇರಲಿದೆ.

ರಾಮಮಂದಿರದ ಹೆಸರಿನಲ್ಲಿ, ಸರಕಾರದೊಳಗಿರುವ ಮತ್ತು ಹೊರಗಿರುವ ಜನರು ನೀಡುತ್ತಿರುವ ಹೇಳಿಕೆಗಳೇ ದೇಶದ ಭವಿಷ್ಯವನ್ನು ಹೇಳುತ್ತಿದೆ. ‘ಬಾಬರಿ ಮಸೀದಿ ಧ್ವಂಸದಲ್ಲಿ ತನ್ನ ಪಾತ್ರವಿಲ್ಲ, ಅದು ಧ್ವಂಸಗೊಳ್ಳುತ್ತಿರುವಾಗ ನಾನದನ್ನು ತಡೆದಿದ್ದೆ, ಕಣ್ಣೀರು ಹಾಕಿದ್ದೆ’ ಎಂದೆಲ್ಲ ಬೊಗಳೆ ಬಿಡುತ್ತಿದ ಪೇಜಾವರಶ್ರೀಗಳು ರಾಮಮಂದಿರದ ಕುರಿತಂತೆ ಸುಪ್ರೀಂಕೋರ್ಟ್‌ಗೆ ತೀರ್ಪು ನೀಡುವ ಅಧಿಕಾರವೇ ಇಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಧಾರ್ಮಿಕ ವಿಷಯಗಳ ಬಗ್ಗೆ ನ್ಯಾಯಾಲಯಗಳು ಮಾತನಾಡ ಬಾರದು ಎಂಬ ಪೇಜಾವರ ಶ್ರೀಗಳ ಹೇಳಿಕೆಯ ಹಿಂದಿರುವ ನೋವು ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ‘ಮಡೆ ಸ್ನಾನ’ ಸೇರಿದಂತೆ ಪಂಕ್ತಿಭೇದ ಮೊದಲಾದ ಆಚರಣೆಗಳನ್ನು ಅವರು ಬಹಿರಂಗವಾಗಿ ಬೆಂಬಲಿಸುತ್ತಿದ್ದಾರೆ.

ನ್ಯಾಯಾಲಯಗಳು ಇದರಲ್ಲಿ ಮಧ್ಯ ಪ್ರವೇಶಿಸುವುದು ಅವರಿಗೆ ಇಷ್ಟವಿಲ್ಲ. ಮುಂದಿನ ದಿನಗಳಲ್ಲಿ ಅಸ್ಪಶ್ಯತೆಯೂ ಧಾರ್ಮಿಕ ಭಾಗವಾಗಿರುವುದರಿಂದ, ಅದರ ವಿರುದ್ಧ ಇರುವ ಕಾನೂನಿನ ಬಗ್ಗೆಯೂ ಅವಕಾಶ ಸಿಕ್ಕಿದರೆ ಅವರು ಆಕ್ಷೇಪ ವ್ಯಕ್ತಪಡಿಸಬಹುದು. ಈ ದೇಶದಲ್ಲಿ ಆಚರಣೆಯಲ್ಲಿರುವ ವಿಧವಾ ಪದ್ಧತಿ, ದೇವಸ್ಥಾನ ಪ್ರವೇಶ ನಿಷೇಧ, ಜಾತೀಯತೆ, ಸತಿಸಹಗಮನ ಇತ್ಯಾದಿ ಇತ್ಯಾದಿಗಳೆಲ್ಲ ಅವರ ಪಾಲಿಗೆ ಧಾರ್ಮಿಕ ವಿಷಯಗಳೇ ಆಗಿರುವುದರಿಂದ, ಕಾನೂನು ಇವುಗಳ ಬಗ್ಗೆ ಮೂಗು ತೂರಿಸುವುದು ಅವರ ಅಸಹನೆಗೆ ಕಾರಣವಾಗಬಹುದು. ರಾಮಮಂದಿರದ ನೆಪದಲ್ಲಿ ಅವರು ಇವೆಲ್ಲವುಗಳನ್ನು ಮತ್ತೆ ಮುನ್ನೆಲೆಗೆ ತರಲು ಉತ್ಸುಕರಾಗಿ ನಿಂತಿದ್ದಾರೆ.

 ಇಷ್ಟಕ್ಕೂ ಸುಪ್ರೀಂ ಕೋರ್ಟ್ ನಿರ್ಧರಿಸುವುದು ರಾಮನ ಕುರಿತಂತೆ ಅಲ್ಲ. ಎರಡು ಗುಂಪುಗಳು ಹಕ್ಕು ಸಾಧಿಸುತ್ತಿರುವ ಜಮೀನಿನ ಕುರಿತಂತೆ. ಜಮೀನು ಯಾರಿಗೆ ಸೇರುತ್ತದೆ ಎನ್ನುವುದನ್ನು ಕೋರ್ಟ್ ಹೇಳುತ್ತದೆಯೇ ಹೊರತು, ಅಲ್ಲಿ ರಾಮಮಂದಿರವೋ, ಮಸೀದಿಯೋ ನಿರ್ಮಾಣವಾಗಬೇಕು ಎಂದು ತೀರ್ಪು ನೀಡುವುದು ಅದರ ಹೊಣೆಗಾರಿಕೆಯಲ್ಲ. ಆದರೆ, ಇಂದು ವಿವಿಧ ರಾಜಕೀಯ ನಾಯಕರೂ ಸೇರಿದಂತೆ ಧಾರ್ಮಿಕ ವೇಷದಲ್ಲಿರುವ ರಾಜಕಾರಣಿಗಳು ಕೋರ್ಟ್ ಮೇಲೆ ಒತ್ತಡ ಹೇರಲು ಹೊರಟಿದ್ದಾರೆ. ‘‘ಸುಪ್ರೀಂಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡದೇ ಇದ್ದರೆ ನಮಗೇನು ಮಾಡಬೇಕು ಎನ್ನುವುದು ಗೊತ್ತಿದೆ’’ ‘‘ನ್ಯಾಯಾಲಯ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದೆ’’ ‘‘ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡದೇ ಇದ್ದರೆ, ನಾವು ಬೇರೆ ದಾರಿಯನ್ನು ಆರಿಸಿಕೊಳ್ಳುತ್ತೇವೆ’’ ಇವೆಲ್ಲವೂ ರಾಮಮಂದಿರ ಪರವಾದ ಹೇಳಿಕೆ ಎಂದು ಮೇಲ್ನೋಟಕ್ಕೆ ಭಾಸವಾಗುತ್ತಿದೆಯಾದರೂ, ಆಳದಲ್ಲಿ ಈ ದೇಶದ ಸಂವಿಧಾನದ ವಿರುದ್ಧ ನೀಡುತ್ತಿರುವ ಹೇಳಿಕೆಗಳಾಗಿವೆ. ರಾಮಮಂದಿರದ ಹೆಸರನ್ನು ಬಳಸಿಕೊಂಡು, ಸಂವಿಧಾನವನ್ನು ನಿರಾಕರಿಸುವ ಹುನ್ನಾರ ಇದಾಗಿದೆ. ಈ ದೇಶಕ್ಕೆ ರಾಮಮಂದಿರ ಮುಖ್ಯವೋ, ಶ್ರೀಸಾಮಾನ್ಯರು, ದಲಿತರು, ಶೋಷಿತರಿಗೆ ಅವರವರ ಹಕ್ಕುಗಳನ್ನು ಮರಳಿಸಿದ ಸಂವಿಧಾನ ಮುಖ್ಯವೋ ಎನ್ನುವುದನ್ನು 2019ರ ಚುನಾವಣೆ ನಿರ್ಧರಿಸಲಿದೆ. ಈ ನಿರ್ಧಾರದಲ್ಲೇ ದೇಶದ ಭವಿಷ್ಯವು ಅಡಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News