1.6 ಕೋಟಿ ರೂ.ಗೆ ಕಿಡ್ನಿ ಮಾರಾಟಕ್ಕೆ ಯತ್ನಿಸಿದ ಬೆಂಗಳೂರಿನ ವ್ಯಕ್ತಿ

Update: 2018-11-05 05:51 GMT

ಬೆಂಗಳೂರು, ನ.5: ಬೆಂಗಳೂರಿನ ವ್ಯಕ್ತಿಯೊಬ್ಬರು ವಾಟ್ಸಾಪ್ ನಲ್ಲಿ ಬಂದಿರುವ ಜಾಹೀರಾತು ನೋಡಿ ಕೊಲಂಬಿಯಾ ಏಶ್ಯ ಆಸ್ಪತ್ರೆಗೆ ಹೋಗಿ 1.6 ಕೋಟಿ ರೂ.ಗೆ ಕಿಡ್ನಿ ಮಾರಾಟಕ್ಕೆ ಯತ್ನಿಸಿ ಬೆಸ್ತು ಬಿದ್ದ ಘಟನೆ ವರದಿಯಾಗಿದೆ.

ವೃತ್ತಿಯಲ್ಲಿ ಸ್ಟೇನೊಗ್ರಾಫರ್ ಆಗಿರುವ ಗಾಯತ್ರಿ ನಗರದ  ನಿವಾಸಿ ಎಂ.ಬಿ.  ಸೋಮಶೇಖರ್ ಎಂಬವರೇ ಕಿಡ್ನಿ ಮಾರಾಟಕ್ಕೆ ಯತ್ನಿಸಿ ತೊಂದರೆ ಅನುಭವಿಸಿದವರು. ಸೋಮಶೇಖರ್ ಅವರು ಹೇಳುವಂತೆ ಬೆಂಗಳೂರಿನ ಕೊಲಂಬಿಯಾ ಏಶ್ಯ ಆಸ್ಪತ್ರೆಯ ಖ್ಯಾತ ಕಿಡ್ನಿ  ಟ್ರಾನ್ಸ್ ಪ್ಲಾಂಟ್ ಸರ್ಜನ್ ಡಾ. ಅರುಣ್ ವೆಸ್ಲೆ ಡೇವಿಡ್ ಅವರ ಹೆಸರಿನಲ್ಲಿ  ಇಂಟರ್ ನೆಟ್ ನಲ್ಲಿ ಜಾಹೀರಾತು ನೋಡಿದ್ದರು ಎಂದು ಹೇಳಲಾಗಿದೆ.

ಸೋಮಶೇಖರ್ ಗೆ ವಾಟ್ಸಾಪ್ ಸಂಭಾಷಣೆಯ ವೇಳೆ ಆ ವೈದ್ಯರು  ಕಿಡ್ನಿ ಮಾರಾಟಕ್ಕೆ ಸಂಬಂಧಿಸಿದ ವಿಧಿವಿಧಾನಗಳನ್ನು  ಪೂರ್ಣಗೊಳಿಸಲು ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ತೆಗೆದುಕೊಂಡು ನಿಗದಿತ ದಿನ ಆಸ್ಪತ್ರೆಗೆ ಬರುವಂತೆ ಹೇಳಿದ್ದಾಗಿ ಸೋಮಶೇಖರ್  ತಿಳಿಸಿದ್ದಾರೆ.

ಸೋಮಶೇಖರ್ ಹಣದ ತೊಂದರೆ ಎದುರಿಸುತ್ತಿದ್ದರು. ಈ ಸಮಸ್ಯೆಯಿಂದ ಪಾರಾಗಲು ತನ್ನ ಒಂದು  ಕಿಡ್ನಿಯನ್ನು ಮಾರಾಟ ಮಾಡುವ ನಿರ್ಧಾರ ಕೈಗೊಂಡಿದ್ದರು ಎನ್ನಲಾಗಿದೆ.

ಸೋಮಶೇಖರ್ ನೇರವಾಗಿ ಕೊಲಂಬಿಯಾ ಆಸ್ಪತ್ರೆಯ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಸಂಯೋಜಕರಾದ ಅಪರಾಜಿತಾ ದಲ್ ಅವರನ್ನು ಸಂಪರ್ಕಿಸಿ ತಾನು ಡಾ.ಅರುಣ್ ವೆಸ್ಲೆ ಅವರ ಬಗ್ಗೆ ವೆಬ್ ಸೈಟ್ ನಲ್ಲಿ  ತಿಳಿದಿಕೊಂಡಿರುವುದಾಗಿ ಮತ್ತು ವಾಟ್ಸಾಪ್ ಮೂಲಕ ಸಂಭಾಷಣೆ ನಡೆಸಿರುವುದಾಗಿ ತಿಳಿಸಿ ಅವರು ತನ್ನಿಂದ 1.6 ಕೋಟಿ ರೂ.ಗೆ ಕಿಡ್ನಿ ಪಡೆಯಲು ಒಪ್ಪಿಕೊಂಡಿರುವುದಾಗಿ  ಮಾಹಿತಿ ನೀಡಿದರು.

ಸೋಮಶೇಖರ್ ನೀಡಿದ ಮಾಹಿತಿಯಂತೆ ಅಪರಾಜಿತಾ ದಲ್ ಕೂಡಲೇ ಡಾ. ಅರುಣ್ ವೆಸ್ಲೆ ಡೇವಿಡ್ ಗೆ ಮಾಹಿತಿ ನೀಡಿದರು. ಈ  ಸುದ್ದಿ ತಿಳಿದು ಆಘಾತಗೊಂಡ  ಡಾ. ಅರುಣ್ ಆಸ್ಪತ್ರೆಯ ಇತರ ವೈದ್ಯರಿಗೆ ತಿಳಿಸಿದ್ದಾರೆ.

ಇದೊಂದು ಹಗರಣವೆಂದು ಅನುಮಾನಗೊಂಡ ಡಾ. ಅರುಣ್ ವೆಸ್ಲೆ ಡೇವಿಡ್ ಪೊಲೀಸರಿಗೆ ದೂರು ನೀಡಿದ್ದಾರೆ. ಸೈಬರ್ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು  ಕಿಡ್ನಿ ಮಾರಾಟಕ್ಕೆ ಯತ್ನಿಸಿದ ಸೋಮಶೇಖರ್ ನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News