ನಿತೀಶ್ ಕುಮಾರ್ ಡಿಎನ್‍ಎ ಪರೀಕ್ಷೆಯ ವಿವರಗಳನ್ನು ಬಹಿರಂಗಗೊಳಿಸಲಿ: ಕೇಂದ್ರ ಸಚಿವ ಕುಶ್ವಾಹ ವ್ಯಂಗ್ಯ

Update: 2018-11-05 08:54 GMT

ಹೊಸದಿಲ್ಲಿ, ನ.5: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ‘ಬಡೇ ಭಾಯಿ’ (ಹಿರಿಯಣ್ಣ) ಎಂದು ಒಪ್ಪಿಕೊಂಡ ಕೆಲವೇ ದಿನಗಳಲ್ಲಿ ಯು-ಟರ್ನ್ ಹೊಡೆದಿರುವ ಕೇಂದ್ರ ಸಹಾಯಕ ಸಚಿವ ಹಾಗೂ ಆರ್‍ಎಲ್‍ಎಸ್‍ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ,  ನಿತೀಶ್ ಅವರು ಡಿಎನ್‍ಎ ಪರೀಕ್ಷೆಯ ವಿವರಗಳನ್ನು ಹಂಚಿಕೊಳ್ಳಬೇಕು ಎಂದಿದ್ದಾರೆ.

ಈ ಮೂಲಕ ಕುಶ್ವಾಹ ಅವರು ನಿತೀಶ್ ಅವರು ಪ್ರಧಾನಿಯೊಂದಿಗೆ ತಾವು ಹೊಂದಿದ್ದೇನೆಂದು ಹೇಳಿರುವ `ಸೌಹಾರ್ದ ಸಂಬಂಧ'ವನ್ನು ಅಣಕವಾಡಿದ್ದಾರೆ. ನಿತೀಶ್ ಅವರು 2013ರಲ್ಲಿ ತಮ್ಮ 17 ವರ್ಷಗಳ ಮಿತ್ರ ಪಕ್ಷದ ಜತೆಗಿನ ಸಂಬಂಧವನ್ನು ಕಡಿದ ನಂತರ ಜುಲೈ 2015ರಲ್ಲಿ ಮುಝಫ್ಫರಪುರದಲ್ಲಿ  ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ವ್ಯಂಗ್ಯವಾಡಿದ್ದರಲ್ಲದೆ ಅವರ ರಾಜಕೀಯ ಡಿಎನ್‍ಎಯನ್ನು ಪ್ರಶ್ನಿಸಿದ್ದರು.

ಆದರೆ  ಕಳೆದ ಶನಿವಾರ ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ್ದ ನಿತೀಶ್, “2020ರ ನಂತರ ಮುಖ್ಯಮಂತ್ರಿಯಾಗಿರಲು ನಿತೀಶ್ ಕುಮಾರ್ ಇಚ್ಛಿಸಿಲ್ಲ” ಎಂಬ ಕುಶ್ವಾಹ ಹೇಳಿಕೆಗೆ ಉತ್ತರ ನೀಡುವ ಗೋಜಿಗೆ ಹೋಗಿದೆ ``ಚರ್ಚೆಯನ್ನು ಇಷ್ಟು ಕೆಳಮಟ್ಟಕ್ಕೆ ಒಯ್ಯಬೇಡಿ'' ಎಂದಿದ್ದರಲ್ಲದೆ, ತಾವು ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜತೆ ಸೌಹಾರ್ದ ಸಂಬಂಧ ಹೊಂದಿದ್ದಾಗಿಯೂ ತಿಳಿಸಿದ್ದರು.

ಇದನ್ನೇ ಬಂಡವಾಳವನ್ನಾಗಿಸಿ ಡಿಎನ್‍ಎ ಪ್ರಶ್ನೆಯನ್ನು ಮತ್ತೆ ಕೆದಕಿದ ಕುಶ್ವಾಹ, ಲವ-ಕುಶ ವಂಶಸ್ಥರು ಒಂದೇ ಸಮಯ ಮೇಲ್ವರ್ಗ ಹಾಗೂ ಕೆಳವರ್ಗದವರಾಗಲು ಹೇಗೆ ಸಾಧ್ಯ ಎಂದಿದ್ದರು. ಕುರ್ಮಿಗಳು ಲವನ ವಂಶಸ್ಥರೆಂದು ಕರೆಯಲ್ಪಡುತ್ತಿದ್ದರೆ ಕುಶ್ವಾಹರು ಕುಶನ ವಂಶಸ್ಥರು ಎಂದು ನಂಬಲಾಗಿದೆ.

ಹಿರಿಯಣ್ಣ ಮೇಲ್ಜಾತಿಯವರಾಗಿ ಕಿರಿಯ ಸೋದರ ಕೆಳಜಾತಿಯವರಾಗಿರಲು ಹೇಗೆ ಸಾಧ್ಯ ಎಂದು ಪಕ್ಷ ಮುಝಫ್ಫರಪುರನಗರದಲ್ಲಿ ಆಯೋಜಿಸಿದ್ದ ಹಲ್ಲಾ ಬೋಲ್, ದರ್ವಾಝ ಖೋಲ್  ಅಭಿಯಾನದ ಸಭೆಯಲ್ಲಿ ಅವರು ಪ್ರಶ್ನಿಸಿದರು,

ಜೆಡಿಯು ನಾಯಕರು ಈಗಾಗಲೇ ತಮ್ಮ ಕೂದಲು ಹಾಗೂ ಉಗುರುಗಳ ಮಾದರಿಯನ್ನು ಪರೀಕ್ಷೆಗಾಗಿ ದಿಲ್ಲಿಗೆ ಕಳುಹಿಸಿರುವುದರಿಂದ ಸಿಎಂ ಡಿಎನ್‍ಎ ವಿಚಾರದಲ್ಲಿ ಶುದ್ಧಹಸ್ತರಾಗಿ ಹೊರಹೊಮ್ಮಬೇಕು ಎಂದು ಅವರು  ಹೇಳಿದರಲ್ಲದೆ ಅದರ ವಿವರಗಳನ್ನು ಬಹಿರಂಗ ಪಡಿಸಬೇಕೆಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News