ಪ್ರಧಾನಿಗೆ 100 ಕೋಟಿ ರೂ. ನೀಡಿ ನನಗೆ ಬೇಕಿದ್ದ ಸಚಿವಾಲಯ ಪಡೆಯುತ್ತೇನೆ

Update: 2018-11-05 10:07 GMT

ಮಧ್ಯ ಪ್ರದೇಶ, ನ.5: ಕೇಂದ್ರ ಜವುಳಿ ಸಚಿವೆ ಸ್ಮೃತಿ ಇರಾನಿ ತಮ್ಮ ‘ಸಹೋದರಿ'ಯಿದ್ದಂತೆ. ಸೂರತ್‍ನಲ್ಲಿ ರೂ 30 ಲಕ್ಷ ವೆಚ್ಚದಲ್ಲಿ 10,000 ಸೀರೆಗಳನ್ನು ತಯಾರಿಸಲು ತಾನು ಆಕೆಗೆ ಹೇಳಿದ್ದು, ಅವುಗಳನ್ನು ವಿತರಿಸಿ ಚುನಾವಣೆ ಗೆಲ್ಲುವುದಾಗಿ ಮಧ್ಯ ಪ್ರದೇಶ ಸಚಿವ ಗೌರಿ ಶಂಕರ್ ಬಿಸೆನ್ ಹೇಳುತ್ತಿರುವ ವೀಡಿಯೋ ವೈರಲ್ ಆಗಿದೆ.

ಕೃಷಿ ಅಥವಾ ಅರಣ್ಯ ಸಚಿವ ಹುದ್ದೆಗಾಗಿ ಪ್ರಧಾನಿಯೊಂದಿಗೆ 100 ಕೋಟಿ ರೂ. ಠೇಕಾ (ಒಪ್ಪಂದ) ಇದೆ ಎಂದೂ ಅವರು ವೀಡಿಯೋದಲ್ಲಿ ಹೇಳಿದ್ದಾರಲ್ಲದೆ ``ನಾನು 100 ಕೋಟಿ ಕೊಟ್ಟು ಕೃಷಿ ಯಾ ಅರಣ್ಯ ಸಚಿವಾಲಯ ಪಡೆಯುತ್ತೇನೆ'' ಎಂದಿದ್ದಾರೆ.

ಗೌರಿ ಶಂಕರ್ ಬಿಸೆನ್ ಅವರು ಮಧ್ಯ ಪ್ರದೇಶದ ಬಾಲಘಾಟ್ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಅವರು ಮೇಲಿನ ಹೇಳಿಕೆ ನೀಡಿರುವ ವೀಡಿಯೋವನ್ನು ಸಮಾಜವಾದಿ ಪಕ್ಷದ ಶಾಸಕ ಕಂಕರ್ ಮುಂಜರೆ ಬಿಡುಗಡೆಗೊಳಿಸಿದ್ದಾರೆ. ಈ ವೀಡಿಯೋದ ಸಿಡಿಯೊಂದನ್ನು ಬಾಲಘಾಟ್ ನ ಕಾಂಗ್ರೆಸ್ ನಾಯಕ ವಿಶಾನ್ ಬಿಸೆನ್ ಚುನಾವಣಾ ಆಯೋಗಕ್ಕೆ ನೀಡಿದ್ದಾರೆ.

ಆದರೆ ಈ ವಿಡಿಯೋ ನಕಲಿ ಎಂದು ಬಿಜೆಪಿ ಪ್ರತಿಪಾದಿಸಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. “ವಿಡಿಯೋ ನಕಲಿ ಮಾತ್ರವಲ್ಲ, ಧ್ವನಿಯನ್ನೂ ಬದಲಿಸಲಾಗಿದೆ. ಅಲ್ಲದೆ ಈ ವಿಡಿಯೋ ಒಂದು ವರ್ಷ ಹಳೆಯದ್ದು” ಎಂದು ಬಿಜೆಪಿ ಹೇಳಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News