ಅನ್ಯ ಧರ್ಮೀಯ ಆಚರಣೆಯಲ್ಲಿ ಮೂಗು ತೂರಿಸುವುದು ಸಲ್ಲ: ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ

Update: 2018-11-05 12:38 GMT

ಬೆಂಗಳೂರು,ನ.5: ಅನ್ಯಧರ್ಮೀಯರ ಆಚಾರ ವಿಚಾರಗಳಲ್ಲಿ ಮುಸ್ಲಿಮರು ಮೂಗು ತೂರಿಸುವುದನ್ನು ಧರ್ಮ ಯಾವುದೇ ಕಾರಣಕ್ಕೂ ಸಮ್ಮತಿಸುವುದಿಲ್ಲ ಎಂದು ಸುನ್ನೀ ಉಲಮಾ ಒಕ್ಕೂಟ ಕಾರ್ಯದರ್ಶಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಹೇಳಿದರು.  

ಅವರು ಮೆಜೆಸ್ಟಿಕ್ ತವಕ್ಕಲ್ ಮಸ್ತಾನ್ ದರ್ಗಾದಲ್ಲಿ ನಡೆದ ಎಸ್.ವೈ.ಎಸ್ ಬೆಂಗಳೂರು ಜಿಲ್ಲಾ ವಾರ್ಷಿಕ ಸಮ್ಮೇಳನದಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡಿದರು. 'ಇಸ್ಲಾಮಿನಲ್ಲಿ ಮಹಿಳೆಯರಿಗೆ ಮಸೀದಿ ಪ್ರವೇಶ ಮಾಡುವುದಕ್ಕೆ ನಿಷೇಧ ಇದೆ. ಹಾಗಿರುವಾಗ, ಶಬರಿಮಲೆ ವಿವಾದದಲ್ಲಿ ಮುಸ್ಲಿಂ ಮಹಿಳೆಯೊಬ್ಬಳು ಮೂಗು ತೂರಿಸಿದ್ದು ಸರಿಯಲ್ಲ. ಇದು ಶಾಂತಿ ಸಾಮರಸ್ಯ ಕದಡುವ ತಂತ್ರವಾಗಿದೆ. ಅದಕ್ಕೆ ಯಾವ ಮುಸ್ಲಿಮರೂ ಕೂಡ ಜವಾಬ್ದಾರರಲ್ಲ. ಸಮಾಜದ ಸ್ವಾಸ್ಥ ಕೆಡಹುವ ಇಂಥ ಕಾರ್ಯವನ್ನು ಇಸ್ಲಾಂ ಎಂದೂ ಪ್ರೋತ್ಸಾಹಿಸುವುದಿಲ್ಲ. ಇಸ್ಲಾಂ ಶಾಂತಿ ಹಾಗೂ ಸೌಹಾರ್ದತೆಯನ್ನು ಬೋಧಿಸುವ ಧರ್ಮವಾಗಿದ್ದು, ಅನ್ಯ ಧರ್ಮೀಯರ ಆಚರಣೆಯಲ್ಲಿ  ಮುಸ್ಲಿಂ ಮಹಿಳೆಯೋರ್ವಳು ಮೂಗು ತೂರಿಸಿ ವಿವಾದ ಉಂಟು ಮಾಡಿದ್ದು ಖಂಡಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬೆಂಗಳೂರು ಜಿಲ್ಲಾ ಎಸ್.ವೈ.ಎಸ್ ಅಧೀನದಲ್ಲಿ ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡುವ ಸಲುವಾಗಿ ಸಂಗ್ರಹಿಸಿದ, ಮೊದಲ ಹಂತದ ಮೂರು ಲಕ್ಷ ಮೌಲ್ಯದ ಚೆಕ್ ಅನ್ನು ಕೊಡಗು ಜಿಲ್ಲಾ ಎಸ್.ವೈ.ಎಸ್ ನಾಯಕರಿಗೆ ಹಸ್ತಾಂತರಿಸಲಾಯಿತು. ಕರ್ನಾಟಕ ರಾಜ್ಯ ಹಜ್ ಸಮಿತಿ ಮಾಜಿ ಚೇರ್ಮ್ಯಾನ್ ಎನ್.ಕೆ.ಎಂ ಶಾಫಿ ಸಅದಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಶೀರ್ ಅಫ್ಳಳಿ ವಹಿಸಿದ್ದರು. ಎಸ್.ವೈ.ಎಸ್. ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಮುಜೀಬ್ ಸಖಾಫಿ ಸ್ವಾಗತಿಸಿ, ಮುಹಮ್ಮದ್ ಶರೀಫ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News